ರೈತರ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯಕ್ಕೆ ಖಂಡನೆ
ಹೆಬ್ಬೂರು ಪೊಲೀಸ್ ಠಾಣೆ ಎದುರು ತಿಮ್ಮಸಂದ್ರ ಗ್ರಾಮಸ್ಥರ ಪ್ರತಿಭಟನೆ
Tumkurnews.in
ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ತಿಮ್ಮಸಂದ್ರದ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ ಹಿಡಿಯಲು ನಿರ್ಲಕ್ಷ ಮಾಡಿದ ಹಾಗೂ ಗ್ರಾಮಸ್ಥರ ಮೇಲೆ ದೌರ್ಜನ್ಯ ಮಾಡಿದ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ತಿಮ್ಮಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಹೆಬ್ಬೂರು ಪೊಲೀಸ್ ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಇದೇವೇಳೆ ಅರಣ್ಯಾಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದರು.
ಹೆಬ್ಬೂರು ಹೋಬಳಿ ತಿಮ್ಮಸಂದ್ರದಲ್ಲಿ ಈ ತಿಂಗಳ ೨೨ರಂದು ಬೆಳಗಿನಜಾವ ೫ ಗಂಟೆ ಸುಮಾರಿನಲ್ಲಿ ಚಿರತೆ ಕಾಣಿಸಿಕೊಂಡಿತು. ಚಿರತೆ ಕಂಡು ಭಯಭೀತರಾದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಚಿರತೆ ಹಿಡಿಯುವ ಯಾವುದೇ ಪರಿಕರ ತರದೆ ಅಧಿಕಾರಿಗಳು ಬೆಳಿಗ್ಗೆ ೮ ಗಂಟೆಗೆ ಬಂದು, ಗಾಬರಿ ಮಾಡಿ ಚಿರತೆಯನ್ನು ಓಡಿಸಿದರು. ಚಿರತೆಯನ್ನು ಸೆರೆಹಿಡಿಯಬೇಕಾದ ಅಧಿಕಾರಿಗಳು ಗಾಬರಿ ಮಾಡಿ ಓಡಿಸಿದ್ದು ಗ್ರಾಮಸ್ಥರನ್ನು ಕೆರಳಿಸಿತ್ತು. ಓಡಿಸುವುದಾಗಿದ್ದರೆ ನಾವೇ ಗಾಬರಿ ಮಾಡಿ ಓಡಿಸುತ್ತಿದ್ದೆವು. ಈಗ ಹೋಗಿರುವ ಚಿರತೆ ಮತ್ತೆ ಬರುತ್ತದೆ, ಅದನ್ನು ಸೆರೆ ಹಿಡಿಯಿಡಿದು ಊರಿನಿಂದ ಆಚೆ ಸಾಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಚಿರತೆ ಸೆರೆಗೆ ಪ್ರಯತ್ನ ಮಾಡದ ಅರಣ್ಯಾಧಿಕಾರಿಗಳು ಗ್ರಾಮಸ್ಥರ ಮೇಲೆ ಹರಿಹಾಯ್ದರು. ಮಹಿಳೆಯರೂ ಸೆರಿದಂತೆ ಎಲ್ಲರನ್ನು ಅವಾಚ್ಯಶಬ್ದಗಳಿಂದ ನಿಂದಿಸಿದರು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ದೂರಿದರು.
ಇಷ್ಟೇ ಅಲ್ಲದೆ ಅರಣ್ಯ ಇಲಾಖೆಯ ಡಾ. ಪ್ರಯಾಗ್ ಎಂಬುವವರು ನೀಡಿದ ದೂರಿನ ಮೇಲೆ ತಿಮ್ಮಸಂದ್ರದ ೧೫ ರೈತರ ಮೇಲೆ ಪ್ರಕರಣ ದಾಖಲಿಸಿರುವ ಹೆಬ್ಬೂರು ಠಾಣೆ ಪೊಲೀಸರು, ಎಫ್‌ಐಆರ್ ಮಾಡಿದ್ದಾರೆ. ಪ್ರತಿಭಟನೆ ನಿರತ ಗ್ರಾಮಸ್ಥರು ಪೊಲಿಸರಿಗೆ ಪ್ರತಿದೂರು ನೀಡಿ ಅರಣ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯಿಸಿದರು. ನಾಳೆಯೊಳಗೆ ಅರಣ್ಯಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದರೆ ನಾಗವಲ್ಲಿಯಲ್ಲಿ ದೊಡ್ಡಮಟ್ಟದ ಹೋರಾಟ ಮಾಡುವುದಾಗಿ ಪೊಲೀಸರಿಗೆ ತಿಳಿಸಿದರು.
ಗ್ರಾಮಸ್ಥರನ್ನು ನಿಂದಿಸಿ ಅವಮಾನ ಮಾಡಿದ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಅಧಿಕಾರಿ ಡಾ. ಪ್ರಯಾಗ್ ಸೇರಿದಂತೆ, ಎಸಿಎಫ್, ಆರ್‌ಎಫ್‌ಓ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಖಂಡರಾದ ಹೆಬ್ಬೂರು ರಾಜೇಶ್, ಚಿಕ್ಕಣ್ಣ, ವೈ.ಟಿ. ನಾಗರಾಜ್, ಹೆತ್ತೇನಹಳ್ಳಿ ಮಂಜುನಾಥ್, ಮಲ್ಲೇಶ್, ಗಿರೀಶ್, ಮಂಜು, ವಿನೋದ್, ಮಂಜುನಾಥ್, ಕಿರಣ್, ಕಾಂತರಾಜು ಸೇರಿದಂತೆ ೧೫೦ಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
