ಅಗಸರು, ಕ್ಷೌರಿಕರು ಜೂ.30ರೊಳಗೆ ಅರ್ಜಿ ಸಲ್ಲಿಸಿ

1 min read

ತುಮಕೂರು, ಜೂ.21: tumkurnews.in:
ಕೋವಿಡ್ 19 ತಡೆಗಟ್ಟಲು ಲಾಕ್‍ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ  ತೊಡಗಿರುವವರು ಆರ್ಥಿಕವಾಗಿ ನಷ್ಟ ಹೊಂದಿರುವುದನ್ನು ಮನಗಂಡ ಸರ್ಕಾರವು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಒಂದು ಬಾರಿ ಪರಿಹಾರವಾಗಿ 5ಸಾವಿರ ರೂ.ಗಳ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಿದೆ.
ಅಗಸ, ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಆಸಕ್ತ ಫಲಾನುಭವಿಗಳು ಆನ್‍ಲೈನ್ ಮೂಲಕ ಸೇವಾ ಸಿಂಧು  https://sevasindhu.karnataka.gov.in ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಫಲಾನುಭವಿಗಳ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿ.ಬಿ.ಟಿ. ಮೂಲಕ ಪರಿಹಾರವನ್ನು ವರ್ಗಾಯಿಸಲಾಗುವುದು.
ಅರ್ಜಿದಾರರ ವಯೋಮಿತಿ 18 ರಿಂದ 65 ವರ್ಷದೊಳಗಿರಬೇಕು ಹಾಗೂ ಅವರ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗುವುದು. ಕರ್ನಾಟಕದಲ್ಲಿಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ವಲಸೆ ಕಾರ್ಮಿಕರು (ಕರ್ನಾಟಕ ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ)ಸಹ ಆರ್ಥಿಕ ನೆರವಿಗೆ ಅರ್ಹರಿರುತ್ತಾರೆ. ಫಲಾನುಭವಿಗಳು ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ.
ಅಗಸ, ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ಕುರಿತು ನಿಗಧಿತ ನಮೂನೆಯಲ್ಲಿ ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರ(ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾ ನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯತ್‍ನ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ, ಕಾರ್ಯದರ್ಶಿ ಅಥವಾ ಕಾರ್ಮಿಕ ಇಲಾಖೆ ನಿರೀಕ್ಷಕರು, ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರ ಪೈಕಿ ಯಾರಾದರೊಬ್ಬರಿಂದ ದೃಢೀಕರಿಸಿದ)ವನ್ನು ಸಲ್ಲಿಸಬೇಕು.
ಅರ್ಹ ಫಲಾನುಭವಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯೊಂದಿಗೆ ನಿಗಧಿತ ನಮೂನೆಯಲ್ಲಿ ಸ್ವಯಂ ಘೋಷಣೆ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಜನ್ಮ ದಿನಾಂಕ ದಾಖಲೆ, ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರವನ್ನು ಲಗತ್ತಿಸಿ ಜೂನ್ 30ರೊಳಗಾಗಿ ಸಲ್ಲಿಸಬೇಕು ಎಂದು ಕಾರ್ಮಿಕ ಅಧಿಕಾರಿ ಸುಭಾಷ್ ಆಲದಕಟ್ಟಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours