ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗೆ ಅರ್ಜಿ ಸಲ್ಲಿಸಲು ಮೂರೇ ದಿನ ಬಾಕಿ: ಇಲ್ಲಿದೆ ಮಾಹಿತಿ

1 min read

 

ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗೆ ಅರ್ಜಿ ಸಲ್ಲಿಸಲು ಮೂರೇ ದಿನ ಬಾಕಿ: ಇಲ್ಲಿದೆ ಮಾಹಿತಿ

Tumkurnews
ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮೇ 4 ಕೊನೆಯ ‌ದಿನವಾಗಿದೆ.
ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು. ಹಾಗೂ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧೀಕಾರ(KEA) ವೆಬ್ ಸೈಟ್’ಗೆ ಭೇಟಿ ನೀಡಿ ಸಲ್ಲಿಸಬಹುದು.

ಶೈಕ್ಷಣಿಕ ವಿದ್ಯಾರ್ಹತೆ
ಆಡಳಿತ ಅಧಿಕಾರಿ: ದ್ವಿತೀಯ ಪಿಯುಸಿ ಅಥವಾ ತತ್ಸಮಾನ

(ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 81 ಸೇವನೆ 2017, ದಿ: 27.02.2018 ರನ್ವಯ ಈ ಕೆಳಕಂಡ ವಿದ್ಯಾರ್ಹತೆಗಳನ್ನು ತತ್ಸಮಾನವೆಂದು ಆದೇಶಿದೆ.) ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ. ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ. ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ ಐ ಓ ಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್, ಹೆಚ್.ಎಸ್.ಸಿ., ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು. ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಓ.ಸಿ/ಜೆ.ಓ.ಡಿ.ಸಿ/ಜೆ.ಎಲ್.ಡಿ.ಸಿ)
(ಅಭ್ಯರ್ಥಿಗಳು ಎನ್‌ಐಓಎಸ್ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿಯುಸಿ ಗೆ ತತ್ಸಮಾನವೆಂದು ಪರಿಗಣಿಸಬಹುದು.)

ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಟ 18 ವರ್ಷಗಳು ತುಂಬಿರತಕ್ಕದ್ದು ಹಾಗೂ ಈ ಕೆಳಕಂಡ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು;

  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ- 35 ವರ್ಷ
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 38 ವರ್ಷ
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ: 40 ವರ್ಷ

ಅರ್ಜಿ ಸಲ್ಲಿಸುವ ವಿಧಾನ: ಪ್ರಾಧಿಕಾರದ ವೆಬ್‌ ಸೈಟ್ http://kea.kar.nic.in ನಲ್ಲಿ ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಯು ಯಾವುದಾದರು ಒಂದು ಜಿಲ್ಲೆಗೆ ಮಾತ್ರ ಹುದ್ದೆ ಬಯಸಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ, ತಿದ್ದುಪಡಿಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಎಚ್ಚರಿಕೆಯಿಂದ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಅಭ್ಯರ್ಥಿಗಳು ಕೇವಲ ಒಂದು ಮಾತ್ರ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದ್ದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಳಸಲಾದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು ಹಾಗೂ ಸದರಿ ಅರ್ಜಿಯಲ್ಲಿ ಕೋರಲಾದ ಒಂದು ಜಿಲ್ಲೆಗೆ ಮಾತ್ರ ಪರಿಗಣಿಸಲಾಗುವುದು. ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ, ತಿದ್ದುಪಡಿಮಾಡಲು ಅವಕಾಶವಿರುವುದಿಲ್ಲ.

ಶುಲ್ಕ: ಆನ್ ಲೈನ್ ಮೂಲಕ ಶುಲ್ಕ ಪಾವತಿಸಬಹುದಾಗಿರುತ್ತದೆ.

ವಿವರಗಳು:
ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು(2ಎ, 2ಬಿ, 3ಎ, 3ಬಿ) 750 ರೂ.

ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳು: 500 ರೂ.

ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ

ವಿಕಲ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. (ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರು ಮತ್ತು ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಹೊಂದಿರುವವರು)

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ: ಮೇಲ್ಕಂಡ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್ ಲೈನ್-ಒಎಂಆರ್ ಮಾದರಿ (Offline-OMR type) ಮೂಲಕ ಪರೀಕ್ಷೆ ನಡೆಸಲಾಗುವುದು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುವುದು. (ಆಡಳಿತಾತ್ಮಕ ಉದ್ದೇಶದಿಂದ ಜಿಲ್ಲಾ ಪರೀಕ್ಷಾ ಕೇಂದ್ರಗಳು ಬದಲಾವಣೆಯ ಷರತ್ತಿಗೆ ಒಳಪಟ್ಟಿರುತ್ತದೆ) ಅಭ್ಯರ್ಥಿಗಳಿಗೆ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಾಧಿಕಾರದ ವೆಬ್‌ಸೈಟ್ ನಿಂದ ಡೌನ್‌ ಲೋಡ್ ಮಾಡಿಕೊಳ್ಳಲು ಪ್ರಕಟಣೆಯ ಮೂಲಕ ತಿಳಿಸಲಾಗುವುದು ಹಾಗೂ ಈ ಬಗ್ಗೆ ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಒಂದು ಮೂಲ ಗುರುತಿನ ಚೀಟಿಯೊಂದಿಗೆ (ಪ್ಯಾನ್ ಕಾರ್ಡ್, ವಾಹನ ಚಾಲನ ಪರವಾನಗಿ, ಆಧಾರ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ, ಸರ್ಕಾರಿ ನೌಕರರ ಐಡಿ) ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕು. ತಪ್ಪಿದ್ದಲ್ಲಿ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ವೆಬ್ ಸೈಟ್ ನೋಡಬಹುದು.

About The Author

You May Also Like

More From Author

+ There are no comments

Add yours