ತುಮಕೂರು: ಎ-ಖಾತೆ, ಬಿ-ಖಾತೆ: 3 ತಿಂಗಳ ಕಾಲಾವಧಿ ವಿಸ್ತರಣೆ: ಸಚಿವ ರಹೀಮ್ ಖಾನ್

1 min read

 

ಎ-ಖಾತೆ, ಬಿ-ಖಾತೆ: 3 ತಿಂಗಳ ಕಾಲಾವಧಿ ವಿಸ್ತರಣೆ: ಸಚಿವ ರಹೀಮ್ ಖಾನ್

Tumkurnews
ತುಮಕೂರು: ನಗರ ಪ್ರದೇಶ ವ್ಯಾಪ್ತಿಯಲ್ಲಿ ಮನೆ, ನಿವೇಶನಗಳಿಗೆ ಎ-ಖಾತೆ ಮತ್ತು ಬಿ-ಖಾತೆ ಮಾಡಿಕೊಡುವ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ ಮನೆ, ನಿವೇಶನಗಳಿಗೆ ದಾಖಲಾತಿ ಮಾಡಿಕೊಡುವ ಸಲುವಾಗಿ ಬಿ ಖಾತೆಯನ್ನು ಜಾರಿಗೆ ತರಲಾಗಿದ್ದು, ಈಗಾಗಲೇ ಮೂರು ತಿಂಗಳ ಅವಧಿ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಶೇ.50ರಷ್ಟು ಮಾತ್ರ ಬಿ ಖಾತೆಗಳಾಗಿರುವ ಹಿನ್ನೆಲೆಯಲ್ಲಿ ಉಳಿದವರಿಗೂ ಅನುಕೂಲ ಕಲ್ಪಿಸುವ ಸಲುವಾಗಿ ಬಿ ಖಾತೆ ಮಾಡಿಕೊಡುವ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ ರಾಜ್ಯ ಸರ್ಕಾರ ವಿಸ್ತರಿಸಿದೆ ಎಂದರು.

ತುಮಕೂರು: ನಿಷೇಧಾಜ್ಞೆ ಜಾರಿ: ನಿಷೇಧಾಜ್ಞೆ ಉಲ್ಲಂಘಿಸಿದರೆ ಬಂಧನ
ಕಳೆದ 30-40 ವರ್ಷಗಳಿಂದ ಯಾವುದೇ ದಾಖಲಾತಿಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಬಡ ಜನರಿಗೆ ಅನುಕೂಲ ಕಲ್ಪಿಸಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಾಸೆ ಮೇರೆಗೆ ಸಚಿವ ಸಂಪುಟ ಹಾಗೂ ವಿಧಾನಸಭೆಯಲ್ಲಿ ಈ ಸಂಬಂಧ ಮಸೂದೆ ಮಂಡಿಸಿ ಬಿ ಖಾತೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 10,000 ಎ ಖಾತೆ ಮತ್ತು 5800 ಬಿ ಖಾತೆ ಸೇರಿದಂತೆ 15,800 ಎ ಮತ್ತು ಬಿ-ಖಾತೆಗಳಿವೆ ಎಂದು ಮಾಹಿತಿ ನೀಡುತ್ತಾ, ಪ್ರಸ್ತುತ ಮೂರು ತಿಂಗಳ ಅವಧಿಯಲ್ಲಿ ಶೇ.50ರಷ್ಟು ಮಾತ್ರ ಬಿ ಖಾತೆಯಾಗಿದೆ. ಉಳಿದ ಶೇ.50ರಷ್ಟು ಬಿ ಖಾತೆ ಆಗಬೇಕಾಗಿದೆ. ಹಾಗಾಗಿ ಉಳಿದವರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ ಎಂದರು.
ನಗರೋತ್ಥಾನ ಯೋಜನೆಯಡಿ 102 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಈ ಪೈಕಿ 40 ಕೋಟಿ ರೂ. ಮಾತ್ರ ಖರ್ಚಾಗಿದೆ. ಉಳಿದ ಹಣವನ್ನು ಆದಷ್ಟು ಶೀಘ್ರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವಂತೆ ಪಟ್ಟಣ ಪಂಚಾಯತಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆ ಕಾಪಾಡುವಂತೆಯೂ ಹಾಗೂ ಸಾರ್ವಜನಿಕರಿಗೆ ಶುಚಿ, ರುಚಿಯಾದ ಆಹಾರ ನೀಡುವಂತೆಯೂ ಸೂಚನೆ ನೀಡಲಾಗಿದೆ. ಇಂದಿರಾ ಕ್ಯಾಂಟೀನ್‌ಗಳಿಗೆ ಸಂಬಧಪಟ್ಟ ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸುವಂತೆಯೂ ಸೂಚಿಸಿರುವುದಾಗಿ ಅವರು ಹೇಳಿದರು.
ಇಂದಿರಾ ಕ್ಯಾಂಟೀನ್‌ಗಳನ್ನು ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಯಾವುದೇ ಕಾರಣಕ್ಕೂ ಈ ಕ್ಯಾಂಟೀನ್‌ಗಳಲ್ಲಿ ಜನರಿಗೆ ತೊಂದರೆಯಾಗದಂತೆ ತಿಂಡಿ, ಊಟದ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.
ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಸಿ ಟಿವಿಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಇಂದಿರಾ ಕ್ಯಾಂಟೀನ್ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ತೋರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

About The Author

You May Also Like

More From Author

+ There are no comments

Add yours