ಉದ್ಯೋಗ ಖಾತರಿ: 70 ಲಕ್ಷ ಮಾನವ ದಿನ ಸೃಜನೆ! ತುಮಕೂರು ರಾಜ್ಯಕ್ಕೇ ಪ್ರಥಮ
Tumkurnews
ತುಮಕೂರು: 2024-25ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 45 ಸಾವಿರ ಕಾಮಗಾರಿಗಳನ್ನು ಅನುಷ್ಟಾನ ಮಾಡಿ, 70 ಲಕ್ಷ ಮಾನವ ದಿನಗಳನ್ನು ಸೃಜನೆ (50 ಲಕ್ಷ ಗುರಿಗೆ ಶೇ 140 ರಷ್ಟು ಸಾಧನೆ) ಮಾಡುವ ಮೂಲಕ ತುಮಕೂರು ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದಿದೆ ಎಂದು ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಜಿ ತಿಳಿಸಿದ್ದಾರೆ.
ಜಿಲ್ಲೆಯ 10 ತಾಲ್ಲೂಕುಗಳ ಪೈಕಿ ಮಧುಗಿರಿ ತಾಲ್ಲೂಕು 14 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನದಲ್ಲಿದ್ದರೆ, 11 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಪಾವಗಡ ತಾಲ್ಲೂಕು 2ನೇ ಸ್ಥಾನದಲ್ಲಿದೆ.
ತುಮಕೂರು ಜಿಲ್ಲೆಯಲ್ಲಿ 245 ಕೋಟಿ ರೂ.ಗಳಷ್ಟು ಕೂಲಿ ಹಣ ಪಾವತಿಯಾದರೆ, 145 ಕೋಟಿ ರೂ.ಗಳಷ್ಟು ಸಾಮಗ್ರಿ ಹಣ ಪಾವತಿಯಾಗಿರುತ್ತದೆ. ತುಮಕೂರು ಜಿಲ್ಲೆಯಲ್ಲಿ 27534 ವೈಯಕ್ತಿಕ ಕಾಮಗಾರಿಗಳಿಂದ 48.83 ಲಕ್ಷ ಮಾನವ ದಿನಗಳ ಸೃಜನೆಯಾಗಿದ್ದರೆ, 4025 ಜಲ ಸಂರಕ್ಷಣಾ ಕಾಮಗಾರಿಗಳಿಂದ 11.83 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. 2782 ಶಾಲಾಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದು, ಇದರಿಂದಾಗಿ 3.32 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ 3682 ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಗ್ರಾಮೀಣ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದರಿಂದಾಗಿ 3.11 ಲಕ್ಷ ಮಾನವ ದಿನಗಳು ಸೃಜನೆಯಾಗಿವೆ. ಮುಂದುವರೆದು ಗ್ರಾಮೀಣ ಭಾಗಗಳಲ್ಲಿ 2797 ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳುವ ಮೂಲಕ 2.81 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಜಿಲ್ಲೆಯಲ್ಲಿ 130 ಎನ್‌ಆರ್‌ಎಲ್‌ಎಂ ಸಂಜೀವಿನಿ ಭವನಗಳನ್ನು ನಿರ್ಮಿಸುವ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಬಲವರ್ಧನೆಗೆ ಶ್ರಮಿಸಲಾಗಿದೆ ಎಂದು ಅವರು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ 330 ಗ್ರಾಮ ಪಂಚಾಯಿತಿಗಳಿಂದ ಒಟ್ಟು 53.51 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಅಲ್ಲದೆ ಅನುಷ್ಟಾನ ಇಲಾಖೆಗಳಾದ ಕೃಷಿ ಇಲಾಖೆಯಿಂದ 4.05 ಲಕ್ಷ ಮಾನವ ದಿನಗಳ ಸೃಜನೆ, ತೋಟಗಾರಿಕೆ ಇಲಾಖೆಯಿಂದ 5.94 ಲಕ್ಷ ಮಾನವ ದಿನಗಳ ಸೃಜನೆ , ರೇಷ್ಮೇ ಇಲಾಖೆಯಿಂದ 1.61 ಲಕ್ಷ ಮಾನವ ದಿನಗಳ ಸೃಜನೆ , ಅರಣ್ಯ ಇಲಾಖೆಯಿಂದ 4.19 ಲಕ್ಷ ಮಾನವ ದಿನಗಳು ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ 1.00 ಲಕ್ಷ ಮಾನವದಿನಗಳನ್ನು ಸೃಜನೆ ಮಾಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದು ಸಿಇಒ ರವರು ತಿಳಿಸಿದ್ದಾರೆ.
+ There are no comments
Add yours