ತುಮಕೂರು: ಯುದ್ಧ ಭೀತಿ: ಜಿಲ್ಲೆಯಲ್ಲಿ ಹೈ ಅಲರ್ಟ್!: ಜಿಲ್ಲಾಧಿಕಾರಿ ತುರ್ತು ಸುದ್ದಿಗೋಷ್ಠಿ
ಭಾರತ-ಪಾಕಿಸ್ತಾನ ಯುದ್ಧ ಸಂದರ್ಭ : ನಾಗರಿಕರ ರಕ್ಷಣೆಗಾಗಿ 3 ಸಾವಿರ ಸ್ವಯಂ ಸೇವಕರ ನೇಮಕ
Tumkurnews
ತುಮಕೂರು: ರಾಷ್ಟ್ರದ ಗಡಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಜಿಲ್ಲೆಯಲ್ಲಿ 3 ಸಾವಿರ ಸ್ವಯಂ ಸೇವಕರನ್ನು ನೇಮಕ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಯಂ ಸೇವಕರನ್ನು ನೇಮಕ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸ್ವಯಂ ಸೇವಕರ ನೇಮಕಾತಿಗಾಗಿ ಕಮ್ಯಾಂಡೆಂಟ್ ಹೋಮ್‌ಗಾರ್ಡ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ನೆಹರು ಯುವ ಕೇಂದ್ರದ ಉಪನಿರ್ದೇಶಕರನ್ನು ನಿಯೋಜಿಸಲಾಗಿದೆ. ಯುದ್ಧಕ್ಕೆ ಸಂಬಂಧಿಸಿದಂತೆ ತುರ್ತು ಸಂದರ್ಭಗಳು ಘೋಷಣೆಯಾದಾಗ ಜನರ ಜೀವ ಹಾಗೂ ಆಸ್ತಿಗಳ ರಕ್ಷಣೆಗಾಗಿ ಸ್ವಯಂ ಸೇವಕರ ನೆರವನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲಿಚ್ಛಿಸುವವರು 18 ವರ್ಷ ವಯೋಮಾನದವರಾಗಿದ್ದು, ದೈಹಿಕವಾಗಿ ಸದೃಢರಾಗಿರಬೇಕು. ಆಸಕ್ತರು ನಿಗಧಿತ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಬಗ್ಗೆ ಈಗಾಗಲೇ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿ ಪ್ರಚುರ ಪಡಿಸಲಾಗಿದೆ. ಸ್ವಯಂ ಸೇವಕರಾಗಿ ಆಯ್ಕೆಯಾದವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದರು.
ತುಮಕೂರು: ನಿಷೇಧಾಜ್ಞೆ ಜಾರಿ: ನಿಷೇಧಾಜ್ಞೆ ಉಲ್ಲಂಘಿಸಿದರೆ ಬಂಧನ
ತುರ್ತು ಸಂದರ್ಭಗಳನ್ನು ಎದುರಿಸಲು ಹಾಗೂ ಸಾರ್ವಜನಿಕರಿಗೆ ನೆರವು ನೀಡಲು ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಿರುವ ಸುಮಾರು 20 ಸೂಕ್ಷ್ಮ ಪ್ರದೇಶಗಳಿಗೆ ಬಿಎಸ್‌ಎನ್‌ಎಲ್ ವತಿಯಿಂದ ಹಾಟ್ ಲೈನ್ ಸಂಪರ್ಕ ನೀಡಲಾಗುವುದು. ಇದರಿಂದ ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ಜಿಲ್ಲಾಡಳಿತಕ್ಕೆ ತಲುಪಿಸಲು ಅನುಕೂಲವಾಗಲಿದೆ. ಅಲ್ಲದೆ, ನಗರ ಸ್ಥಳೀಯ ಸಂಸ್ಥೆ ಹಾಗೂ ತಾಲ್ಲೂಕು ಕಚೇರಿಗಳಲ್ಲಿಯೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 24*7 ಸಹಾಯವಾಣಿ ಕೇಂದ್ರ ಸ್ಥಾಪಿಸಲು ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿಯ ಇಂಟಿಗ್ರೇಟೆಡ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಕೇಂದ್ರದಲ್ಲಿ ಸಹಾಯವಾಣಿ ಸಂಖ್ಯೆ: 0816-2213400(೦೮೧೬-೨೨೧೩೪೦೦)ಯನ್ನು ಸ್ಥಾಪಿಸಲಾಗಿದೆ. ಈ ಸಹಾಯವಾಣಿ ಕೇಂದ್ರದಲ್ಲಿ ಕಂದಾಯ, ಪೊಲೀಸ್, ಬೆಸ್ಕಾಂ, ಅಗ್ನಿಶಾಮಕ ಅಧಿಕಾರಿಗಳು ಉಪಸ್ಥಿತರಿದ್ದು, ಸ್ವೀಕೃತ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಪರಿಹಾರ ನೀಡಲಿದ್ದಾರೆ. ಯುದ್ಧ ದಾಳಿ ಸಂಭವಿಸಿದಾಗ ಎಚ್ಚರಿಕೆ ಸದ್ದು ನೀಡಲು ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಸೈರನ್ ಅಳವಡಿಸಬೇಕು ಎಂದು ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ.
ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ಇರುವ ರಾಗಿ, ಗೋಧಿ, ಅಕ್ಕಿ, ಮತ್ತಿತರ ಅಗತ್ಯ ವಸ್ತುಗಳ ಅಭಾವ ಸೃಷ್ಟಿಯಾಗದಂತೆ ಹಾಗೂ ಆಹಾರ ಧಾನ್ಯಗಳು ಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟವಾಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರಲ್ಲದೆ, ಜನರು ಆತಂಕ ಪಡುವ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸಬಾರದು. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ಹರಿಯಬಿಡುವವರು ಯಾರೇ ಆಗಲಿ ಅವರನ್ನು ಕಾನೂನು ಕ್ರಮಕ್ಕೆ ಗುರಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸಾಮಾಜಿಕ ಜಾಲತಾಣಗಳ ಮೇಲೆ 24*7 ನಿಗಾವಹಿಸಲಿದೆ ಎಂದು ತಿಳಿಸಿದರು.
ತುರ್ತು ಸೇವೆ ಒದಗಿಸುವ ಪೊಲೀಸ್, ಅಗ್ನಿಶಾಮಕದಳ, ಬೆಸ್ಕಾಂ, ಆರೋಗ್ಯ ಇಲಾಖೆಗಳಲ್ಲಿ ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಕರ್ಯಗಳನ್ನು ಸಿದ್ಧವಿಟ್ಟುಕೊಳ್ಳಲು ಸರ್ಕಾರ ನಿರ್ದೆಶನ ನೀಡಿರುವ ಹಿನ್ನೆಲೆಯಲ್ಲಿ ರಜೆ ಮೇಲೆ ತೆರಳಿರುವ ತುರ್ತು ಸೇವೆ ನೀಡುವ ಇಲಾಖೆಗಳ ಅಧಿಕಾರಿ, ನೌಕರರ ರಜೆಯನ್ನು ರದ್ದುಪಡಿಸಿ, ಮರಳಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 9000 ಹಾಸಿಗೆಗಳು ಲಭ್ಯವಿದ್ದು, 12 ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್, ಆಂಬುಲೆನ್ಸ್’ಗಳು ಸುಸ್ಥಿತಿಯಲ್ಲಿವೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಇದ್ದರು.
+ There are no comments
Add yours