ಚಿಕ್ಕನಹಳ್ಳಿಯಲ್ಲಿ ಮೇವು ಬ್ಯಾಂಕ್ ಪ್ರಾರಂಭ
Tumkurnews
ತುಮಕೂರು: ಬರಪೀಡಿತ ಶಿರಾ ತಾಲ್ಲೂಕಿನಲ್ಲಿ ಜಾನುವಾರು ಸಂರಕ್ಷಣೆ ಮಾಡುವ ಸಲುವಾಗಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ವತಿಯಿಂದ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಚಿಕ್ಕನಹಳ್ಳಿ ಗ್ರಾಮದ ದಿವಂಗತ ಉಗ್ರಪ್ಪ ಸ್ಮಾರಕ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಶನಿವಾರ ತುರ್ತಾಗಿ ಮೇವು ಬ್ಯಾಂಕನ್ನು ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ: ದತ್ತಾತ್ರೇಯ ಜೆ.ಜಿ. ಮಾತನಾಡಿ, ತಾಲೂಕಿನ ಹುಲಿಕುಂಟೆ ಹೋಬಳಿ ಕುರುಬರರಾಮನಹಳ್ಳಿಯಲ್ಲಿ ಕಳೆದ ಮಾಹೆಯಲ್ಲಿ ಒಂದು ಮೇವು ಬ್ಯಾಂಕನ್ನು ಪ್ರಾರಂಭಿಸಲಾಗಿದ್ದು, ರೈತರಿಗೆ ಮೇವು ವಿತರಣೆ ಮಾಡಲಾಗುತ್ತಿದೆ.
ಅದೇ ರೀತಿ ಚಿಕ್ಕನಹಳ್ಳಿ ಗ್ರಾಮದಲ್ಲಿ ಪ್ರಾರಂಭಿಸಿರುವ ಮೇವು ಬ್ಯಾಂಕಿನಲ್ಲಿ ಪ್ರತಿ ಜಾನುವಾರಿಗೆ ಪ್ರತಿ ಕೆ.ಜಿ.ಗೆ 2 ರೂ.ಗಳಂತೆ ಒಂದು ದಿನಕ್ಕೆ 6 ಕೆ.ಜಿ.ಯಂತೆ ಒಂದು ವಾರಕ್ಕೆ ಬೇಕಾಗುವಷ್ಟು ಮೇವನ್ನು ಒಮ್ಮೆಗೇ ವಿತರಿಸಲಾಗುತ್ತಿದೆ. ಜಾನುವಾರು ಮಾಲೀಕರು ಪಶು ಇಲಾಖೆಯಿಂದ ನೀಡಿರುವ ಮೇವು ವಿತರಣಾ ಕಾರ್ಡುಗಳನ್ನು ಹಾಜರುಪಡಿಸಿ ಮೇವನ್ನು ಪಡೆಯಬಹುದಾಗಿದೆ. ಜಾನುವಾರು ಮಾಲೀಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ: ಸಿ.ಎಸ್. ರಮೇಶ, ಉಪತಹಶೀಲ್ದಾರ್ ನರಸಿಂಹಮೂರ್ತಿ ಹಾಗೂ ಡಾ: ವಿನೋದ್, ಡಾ: ವಸಂತ್ ಕುಮಾರ್ ಮತ್ತು ಕಂದಾಯ ಇಲಾಖೆಯ ಇತರೆ ಅಧಿಕಾರಿಗಳು ಹಾಜರಿದ್ದರು.
+ There are no comments
Add yours