ತುಮಕೂರು: ಸಾರ್ವಜನಿಕರ ಸೇವೆಯಲ್ಲಿ ಆಟೋ ಚಾಲಕರ ಪಾತ್ರ ಮಹತ್ವದ್ದು: ಹಾಲಪ್ಪ

ತುಮಕೂರು ನಗರ ಪ್ರಮುಖ ಸುದ್ದಿ

ಸಾರ್ವಜನಿಕರ ಸೇವೆಯಲ್ಲಿ ಆಟೋ ಚಾಲಕರ ಪಾತ್ರ ಮಹತ್ವದ್ದು: ಹಾಲಪ್ಪ

Tumkurnews.in
ತುಮಕೂರು: ಸಾರ್ವಜನಿಕರ ಸೇವೆಯಲ್ಲಿ ಆಟೋ ಚಾಲಕರ ಪಾತ್ರ ಮಹತ್ವದ್ದು, ಆಸ್ಪತ್ರೆ, ಶಾಲಾ, ಕಾಲೇಜು ಮಕ್ಕಳಿಗೆ ಸೇವೆ ಒದಗಿಸುತ್ತಿರುವ ಆಟೋ ಚಾಲಕರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂದು ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ನಗರದ ಶ್ರೀದೇವರಾಜ ಅರಸು ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಡಾ.ಶ್ರಿ ಶಿವಕುಮಾರ ಸ್ವಾಮೀಜಿ ಆಟೋ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ 7ನೇ ವರ್ಷದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಹೇಗೆ ನಾಗರಿಕರ ಕಷ್ಟ ಸುಖಗಳಿಗೆ ನೀವು ಸ್ಪಂದಿಸುತ್ತೀರೋ, ಅದೇ ರೀತಿ ಸಾರ್ವಜನಿಕರು ಸಹ ನಿಮ್ಮ ಕಷ್ಟ ಸುಖಗಳಿಗೆ ಕೈಜೋಡಿಸುವ ಕೆಲಸ ಆದರೆ ಉತ್ತಮ. ಸಾರ್ವಜನಿಕರೊಂದಿಗೆ ನೀವು ನಡೆದುಕೊಳ್ಳುವ ರೀತಿಯಿಂದಲೇ ನಿಮ್ಮ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಗೌರವ ಮೂಡುವಂತಾಗಬೇಕು ಎಂದರು.
ದೇವರಾಜ ಅರಸು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಆಟೋ ಚಾಲಕರ ಸಂಘದವರು ತಮ್ಮ ಸದಸ್ಯರಿಗೆ ಸುಮಾರು 200ಕ್ಕೂ ಹೆಚ್ಚು ಸಮವಸ್ತ್ರಕ್ಕೆ ಬೇಡಿಕೆ ಸಲ್ಲಿಸಿದ್ದರು. ಆದರೆ ಸಮವಸ್ತ್ರಕ್ಕಿಂತ, ಇಲ್ಲೊಂದು ಶಾಶ್ವತ ನೆಲೆ ಆಟೋ ಚಾಲಕರಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಪಾಲಿಕೆಯ ಆಯುಕ್ತರೊಂದಿಗೆ ಮಾತನಾಡಿ, ಅವರ ಅನುಮತಿ ನೀಡಿದರೆ ಮಳೆ, ಬಿಸಿಲು,ಚಳಿಯಲ್ಲಿ ಕಷ್ಟ ಪಡೆದ ರೀತಿ ಒಂದು ಶಲ್ಟರ್ ನಿರ್ಮಿಸಿಕೊಡಲು ನಾನು ಕೈಜೋಡಿಸುತ್ತೇನೆ. ನನ್ನ ಜೊತೆ ಕೆಲ ದಾನಿಗಳು ಸೇರಿಕೊಂಡು ಈ ಕೆಲಸ ಮಾಡಿಕೊಡಲು ಸಿದ್ದ. ಮುಂದಿನ ನವೆಂಬರ್ ಒಳಗೆ ಶಲ್ಟರ್ ನಿರ್ಮಿಸಿಕೊಡುವುದಾಗಿ ಮುರುಳೀಧರ ಹಾಲಪ್ಪ ವಾಗ್ದಾನ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರ ಇ ಶ್ರಮ, ಯಶಸ್ವಿನಿ ಕಾರ್ಡುಗಳನ್ನು ಎಲ್ಲಾ ಆಟೋ ಚಾಲಕರು ಪಡೆದುಕೊಂಡರೆ ಅದರಿಂದ ಆಟೋ ಚಾಲಕರಿಗೆ ಹೆಚ್ಚಿನ ಅನುಕೂಲವಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ನಲ್ಮ್ ಯೋಜನಾಧಿಕಾರಿಗಳ ಜೊತೆ ಮಾತನಾಡಿ ಇ ಶ್ರಮ ಕಾರ್ಡು ಪಡೆಯುವತ್ತ ಆಟೋ ಚಾಲಕರು ಗಮನಹರಿಸಬೇಕು.ಹಾಗೆಯೇ ನಗರದಲ್ಲಿ ಪ್ರಸ್ತಾಪಿತ 35 ಆಟೋ ನಿಲ್ದಾಣಗಳ ಪೈಕಿ ನಿರ್ಮಾಣವಾಗಿರುವುದು ಕೇವಲ 12 ಮಾತ್ರ. ಉಳಿದ ಆಟೋ ನಿಲ್ದಾಣಗಳ ನಿರ್ಮಾಣಕ್ಕೆ ಪಾಲಿಕೆಯ ಮೇಲೆ ಒತ್ತಡ ತರಲು ನಿಮ್ಮೊಂದಿಗೆ ಕೈಜೋಡಿಸುತ್ತೇನೆ. ಆಟೋ ನಿಲ್ದಾಣಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಾದ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣದತ್ತ ಒತ್ತು ನೀಡುವ ಭರವಸೆಯನ್ನು ಮುರುಳೀಧರ ಹಾಲಪ್ಪ ನೀಡಿದರು.
ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ಆಟೋ ಚಾಲಕರೆಂದರೆ ಮೂಗು ಮುರಿಯುವವರೇ ಹೆಚ್ಚು. ವಿದ್ಯಾವಂತರೂ ಕೂಡ ತಮ್ಮ ಸ್ವಾಭಿಮಾನದ ಬದುಕಿಗಾಗಿ ಆಟೋ ಚಲಾಯಿಸುವುದನ್ನು ನಾವು ಕಾಣಬಹುದು. ಕನ್ನಡ ಚಿತ್ರರಂಗ ಇದುವರೆಗೂ ಬದುಕಿದ್ದರೆ ಅದಕ್ಕೆ ಕಾರಣ ಆಟೋ ಚಾಲಕರು. ಬಿ ಮತ್ತು ಸಿ ದರ್ಜೆ ಪಟ್ಟಣಗಳಲ್ಲಿ ಕನ್ನಡ ಸಿನಿಮಾ ವೀಕ್ಷಿಸುವ ಹೆಚ್ಚು ಜನ ಆಟೋ ಚಾಲಕರು. ಹಾಗಾಗಿ ಈ ನಾಡಿನ ಸಂಸ್ಕೃತಿ, ಪರಂಪರೆಯ ಬೆಳವಣಿಗೆಯಲ್ಲಿ ನಿಮ್ಮ ಪಾತ್ರವೂ ಇದೆ ಎಂದರು.
ಈ ವೇಳೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಆಟೋ ಚಾಲಕರ ಸಂಘದ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *