ಬೆಂಗಳೂರು: ಭಾರತೀಯ ರೈಲ್ವೆಯ ತುರ್ತು ವೈದ್ಯಕೀಯ ಸೇವೆಗೆ ಮತ್ತೊಂದು ಉತ್ತಮ ಉದಾಹರಣೆ ಸಿಕ್ಕಿದ್ದು, ಮಧ್ಯರಾತ್ರಿ ರೈಲಿನಲ್ಲಿ ಎದೆನೋವಿನಿಂದ ಬಳಲುತ್ತಿದ್ದ ಪ್ರಯಾಣಿಕನಿಗೆ ದಕ್ಷಿಣ ಪಶ್ಚಿಮ ರೈಲ್ವೆ (SWR) ಸಿಬ್ಬಂದಿ ತಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡಿದ ಘಟನೆ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಕಾಶ್ ಡಿ ರಾಂಪುರ ಎಂಬ ಪ್ರಯಾಣಿಕರು ತಮ್ಮ ಊರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕುಳಿತುಕೊಳ್ಳಲೂ ಆಗದೆ, ನಿಲ್ಲಲೂ ಆಗದ ಪರಿಸ್ಥಿತಿಯಲ್ಲಿ ಅವರು ಆತಂಕಕ್ಕೊಳಗಾಗಿದ್ದರು.
ರೈಲು ಮಂತ್ರಾಲಯ ನಿಲ್ದಾಣದತ್ತ ಬರುತ್ತಿದ್ದಂತೆ ನೋವು ಹೆಚ್ಚಾಗಿದ್ದು, ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅವರು ಕೂಡಲೇ “Rail Madad” ವೆಬ್‌ಸೈಟ್ ಮೂಲಕ ವೈದ್ಯಕೀಯ ತುರ್ತು ಸಹಾಯಕ್ಕಾಗಿ ದೂರು ದಾಖಲಿಸಿದ್ದರು. ಜೊತೆಗೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ PNR ಸಂಖ್ಯೆ, ರೈಲು ಸಂಖ್ಯೆ, ಕೋಚ್ ವಿವರ ಹಾಗೂ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿದ್ದರು.
ಗುಂತಕಲ್ ಜಂಕ್ಷನ್‌ಗೆ ರೈಲು ತಲುಪುತ್ತಿದ್ದಂತೆ ವೈದ್ಯಕೀಯ ಸಿಬ್ಬಂದಿ ನೇರವಾಗಿ ಪ್ರಯಾಣಿಕರ ಕೋಚ್‌ಗೆ ಆಗಮಿಸಿ ಅವರನ್ನು ಪ್ಲಾಟ್‌ಫಾರ್ಮ್‌ಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿದರು. ಪರಿಶೀಲನೆ ವೇಳೆ ಇದು ಹೃದಯ ಸಂಬಂಧಿತ ಸಮಸ್ಯೆಯಲ್ಲ, ಗ್ಯಾಸ್ಟ್ರಿಕ್‌ನಿಂದ ಉಂಟಾದ ನೋವು ಎಂದು ವೈದ್ಯರು ತಿಳಿಸಿ ತಕ್ಷಣ ಔಷಧಿ ಹಾಗೂ ಸಿರಪ್ ನೀಡಿ ಚಿಕಿತ್ಸೆ ನೀಡಿದರು.

ಪ್ರಯಾಣಿಕ ಪ್ರಕಾಶ್ ಮತ್ತೆ ಸುರಕ್ಷಿತವಾಗಿ ರೈಲಿಗೆ ಹತ್ತುವವರೆಗೆ ರೈಲಿಗೆ ಸಿಗ್ನಲ್ ನೀಡದೇ ಕಾಯ್ದುಕೊಂಡಿದ್ದ ರೈಲ್ವೆ ಸಿಬ್ಬಂದಿಯ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಔಷಧಿ ಸೇವಿಸಿದ ಬಳಿಕ ಪ್ರಯಾಣಿಕರಿಗೆ ನೋವು ಕಡಿಮೆಯಾಗಿದ್ದು, ಅವರು ಸುರಕ್ಷಿತವಾಗಿ ಯಶವಂತಪುರ ನಿಲ್ದಾಣ ತಲುಪಿದ್ದಾರೆ.
ಈ ಘಟನೆ ಬಳಿಕ ಪ್ರಯಾಣಿಕ ಪ್ರಕಾಶ್ ಡಿ ರಾಂಪುರ ಅವರು ರೈಲ್ವೆ ಇಲಾಖೆಯ ತುರ್ತು ಸೇವೆಯನ್ನು ಶ್ಲಾಘಿಸಿದ್ದು, “Rail Madad” ಆಪ್ ಹಾಗೂ ವೆಬ್ ಪೋರ್ಟಲ್ ಪ್ರಯಾಣಿಕರಿಗೆ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.
ಸ್ವಚ್ಛತೆ, ಕ್ಯಾಟರಿಂಗ್, ಸುರಕ್ಷತೆ, ವೈದ್ಯಕೀಯ ನೆರವು ಸೇರಿದಂತೆ ಹಲವು ಸೇವೆಗಳಿಗಾಗಿ ರೈಲ್ವೆ ಇಲಾಖೆ ತ್ವರಿತವಾಗಿ ಸ್ಪಂದಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆಪಾತ್ರವಾಗಿದೆ.
ವಿ. ಸೂ: ಈ ಮಾಹಿತಿಯನ್ನು ಪ್ರಕಾಶ್ ಅವರ ಫೇಸ್ಬುಕ್ ವಾಲ್ ನಿಂದ ಪಡೆದು ಸುದ್ದಿ ರೀತಿಯಲ್ಲಿ ವಿವರಿಸಲಾಗಿದೆ
