cool hit counter

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್’ಗೆ ಡಿಕೆಶಿ ಪವರ್

Tumkur News
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues,...
5 Min Read
Spread the love

ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್’ಗೆ ಡಿಕೆಶಿ ಪವರ್

ರಾಮನಗರ, ಮಾಗಡಿಗೆ ನೀರು ಕೊಂಡೊಯ್ಯಲು ಮರು ಚಾಲನೆ: ಡಿಕೆಶಿ, ಪರಂ ವಿರುದ್ದ ರೈತರು ಗರಂ; ಹೋರಾಟದ ಎಚ್ಚರಿಕೆ

– ಅಶೋಕ್ ಆರ್.ಪಿ
ತುಮಕೂರು: ಜಿಲ್ಲೆಯ ಜನತೆಯ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಪುನಃ ಚಾಲನೆ ನೀಡಲಾಗುತ್ತಿದೆ. ಇದು ಜಿಲ್ಲೆಯ ರೈತರು ಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಮತ್ತೊಂದು ನೀರಿನ ಹೋರಾಟಕ್ಕೆ ತುಮಕೂರು ಸಾಕ್ಷಿಯಾಗುವ ಮುನ್ಸೂಚನೆ ನೀಡಿದೆ.
ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ
ರಾಜ್ಯ ಸರ್ಕಾರವು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮೂಲಕ ಹಾದು ಹೋಗುವಂತೆ ರಾಮನಗರ ಜಿಲ್ಲೆಯ ಮಾಗಡಿ ಭಾಗಕ್ಕೆ ನೀರು ಒದಗಿಸಲು ಸುಮಾರು 1 ಸಾವಿರ ಕೋಟಿ ರೂ. ವೆಚ್ಚದ ‘ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್’ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಇದು ಡಿ.ಕೆ ಶಿವಕುಮಾರ್ ಕನಸಿನ ಯೋಜನೆಯಾಗಿದ್ದು, ತುಮಕೂರು ಜಿಲ್ಲೆಯ ರೈತರಿಂದ ತೀವ್ರವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಯನ್ನು ಸ್ಥಗಿತಗೊಳಿಸಿದ್ದರು. ಆದರೆ ಇದೀಗ ಸ್ವತಃ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ತಮ್ಮ ಕನಸಿನ ಯೋಜನೆಯನ್ನು ಅಧಿಕಾರ ಬಲದ ಮೂಲಕ ಸಾಕಾರಗೊಳಿಸಲು ಮುಂದಾಗಿದ್ದಾರೆ.
ಏನಿದು ಎಕ್ಸ್‌ಪ್ರೆಸ್‌ ಯೋಜನೆ:
ಹೇಮಾವತಿ ನಾಲೆಯಿಂದ ಸುಮಾರು 34.5 ಕಿ.ಮೀ ಉದ್ದದ ಭೂಗತ ಪೈಪ್ಲೈನ್ ಮೂಲಕ ಮಾಗಡಿ ಭಾಗದ ಕೆರೆಗಳನ್ನು ತುಂಬಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
ಹಾಸನದ ಗೊರೂರು ಜಲಾಶಯದಿಂದ ತುಮಕೂರಿಗೆ ಹೇಮಾವತಿ ನೀರು ಹಂಚಿಕೆಯ ವಿಚಾರವು ದಶಕಗಳ ವಿವಾದವಾಗಿದೆ. ಪ್ರಸ್ತುತ 2025-26ರ ಅವಧಿಯಲ್ಲಿ ಈ ವಿವಾದವು ‘ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್’ ಯೋಜನೆಯಿಂದಾಗಿ ಮತ್ತಷ್ಟು ತೀವ್ರಗೊಂಡಿದೆ. ಹೇಮಾವತಿ ಜಲಾಶಯದ ಒಟ್ಟು ನೀರು ಹಂಚಿಕೆಯಲ್ಲಿ ತುಮಕೂರು ಜಿಲ್ಲೆಗೆ 24.5 ಟಿಎಂಸಿ ನೀರನ್ನು ನಿಗದಿಪಡಿಸಲಾಗಿದೆ. ವಾಸ್ತವದಲ್ಲಿ ತುಮಕೂರು ಜಿಲ್ಲೆಯ ಪಾಲಿನ ಪೂರ್ಣ ಪ್ರಮಾಣದ ನೀರು ಎಂದಿಗೂ ಸಿಗುತ್ತಿಲ್ಲ ಎಂಬುದು ಇಲ್ಲಿನ ರೈತರ ದೂರು. ಸದರಿ ‘ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್’ ಯೋಜನೆಗೆ ತುಮಕೂರು ಜಿಲ್ಲೆಯ ರೈತರ ತೀವ್ರ ವಿರೋಧವಿದೆ. ‘ನಮಗೇ ಕುಡಿಯಲು ಮತ್ತು ಕೃಷಿಗೆ ನೀರಿಲ್ಲದಿರುವಾಗ, ನಮ್ಮ ಜಿಲ್ಲೆಯ ಮೂಲಕವೇ ಬೇರೆ ಜಿಲ್ಲೆಗೆ ನೀರು ಒಯ್ಯುವುದು ಸರಿಯಲ್ಲ’ ಎಂಬುದು ತುಮಕೂರು ಜಿಲ್ಲೆಯ ರೈತರ ವಾದ.
ರೈತರ ಬೇಡಿಕೆ ಏನು?: ತಮ್ಮ ಪಾಲಿನ 24.5 ಟಿಎಂಸಿ ನೀರನ್ನು ಮೊದಲು ಹರಿಸಬೇಕು, ಅಲ್ಲಿಯವರೆಗೆ ಯಾವುದೇ ಹೊಸ ಪೈಪ್ಲೈನ್ ಯೋಜನೆಗಳನ್ನು ಜಾರಿ ಮಾಡಬಾರದು ಎಂದು ತುಮಕೂರು ಜಿಲ್ಲೆಯ ರೈತರು ಪಟ್ಟು ಹಿಡಿದಿದ್ದಾರೆ. ಯೋಜನೆ ವಿರೋಧಿಸಿ 2025ರ ಮೇ ಮತ್ತು ಜೂನ್ ತಿಂಗಳಲ್ಲಿ ಗುಬ್ಬಿ ತಾಲೂಕಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಇದು ಹಿಂಸಾಚಾರಕ್ಕೆ ತಿರುಗಿ ಕೆಎಸ್ಆರ್ಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ ಮತ್ತು ರಸ್ತೆ ತಡೆಗಳು ನಡೆದಿದ್ದವು. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಸಿದ್ದಗಂಗಾ ಮಠದ ಶಾಖಾ ಮಠಗಳ ಶ್ರೀಗಳು ಸೇರಿದಂತೆ ಹಲವಾರು ಸ್ವಾಮೀಜಿಗಳು ಮತ್ತು ರೈತ ಮುಖಂಡರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಇದರಲ್ಲಿ ಕೊಲೆಯತ್ನದಂತಹ ಗಂಭೀರ ಪ್ರಕರಣಗಳೂ ಸೇರಿವೆ.
ಯೋಜನೆಗೆ ತಡೆ: ಡಿ.ಕೆ ಶಿವಕುಮಾರ್ ಮಹತ್ವಾಕಾಂಕ್ಷೆಯ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ಕಾನೂನು ಸಮರವೂ ನಡೆದಿದ್ದು, ಭೂಸ್ವಾಧೀನ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಮತ್ತು ತೆಂಗು-ಅಡಿಕೆ ತೋಟಗಳಿಗೆ ಹಾನಿಯಾಗುತ್ತದೆ ಎಂದು ರೈತರು ಗುಬ್ಬಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಸದ್ಯ ಮೂರ್ನಾಲ್ಕು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮರು ಚಾಲನೆ ನೀಡುವ ಸುಳಿವು ಸಿಕ್ಕಿದೆ. ಇದು ರೈತಾಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಶಾಸಕ, ಸಚಿವರ ಮೌನ: ಗುಬ್ಬಿ ವಿಧಾನಸಭೆ ಕಾಂಗ್ರೆಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಬಹಿರಂಗವಾಗಿ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆಯನ್ನು ವಿರೋಧಿಸುವ ಮೂಲಕ ತಮ್ಮ ಕ್ಷೇತ್ರದ ಜನರ, ರೈತರ ಪರವಾಗಿ ನಿಂತಿದ್ದಾರೆ. ಆದರೆ ಜಿಲ್ಲೆಯವರೇ ಆದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಯೋಜನೆಯನ್ನು ಆರಂಭಿಸುವುದಾಗಿ ಹೇಳಿಕೊಂಡಿದ್ದಾರೆ. ಇದು ರೈತರನ್ನು ಕೆರಳಿಸಿದ್ದು, ಪರಂ ವಿರುದ್ಧ ರೈತರು ಗರಂ ಆಗಿದ್ದಾರೆ. ಸದ್ಯ ರೈತರು ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದ್ದು, ಹೋರಾಟಸ ಕಿಚ್ಚನ್ನು ಸರ್ಕಾರ ಹೇಗೆ ತಣಿಸುತ್ತದೆ ಎಂದು ಕಾದು ನೋಡಬೇಕಿದೆ.

ರಾಮನಗರ, ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿದೆ: ರೈತಸಂಘ
Tumkur news
ತುಮಕೂರು: ರೈತರು, ಸಾರ್ವಜನಿಕರ ತೀವ್ರ ಹೋರಾಟದ ಫಲವಾಗಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯಿಂದ ಹಿಂದೆ ಸರಿದಿದ್ದ ಸರಕಾರ, ಈಗ ಮತ್ತೊಮ್ಮೆ ಲಿಂಕ್ ಕೆನಾಲ್ ಕಾಮಗಾರಿಗೆ ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗು ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ಕುಣಿಗಲ್, ಮಾಗಡಿ, ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಮೂಲ ನಾಲೆಯ ನಿಯಮಗಳನ್ನೇ ಉಲ್ಲಂಘಿಸಿ, ತುಮಕೂರು ಜಿಲ್ಲೆಯ 7 ತಾಲೂಕುಗಳಿಗೆ ನೀರಿಲ್ಲದಂತೆ ಮಾಡುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ಗೆ ತುಮಕೂರು ಜಿಲ್ಲೆಯ ಜನರ ಸಂಪೂರ್ಣ ವಿರೋಧವಿದ್ದರೂ, ಮತ್ತೊಮ್ಮೆ ಉಪಮುಖ್ಯಮಂತ್ರಿಗಳ ಮೂಲಕ ಕಾಮಗಾರಿ ಆರಂಭಿಸುವ ಮಾತನಾಡುತ್ತಿರುವುದು ತರವಲ್ಲ. ಇದನ್ನು ವಿರೋಧಿಸಿ ಮತ್ತೊಮ್ಮೆ ನಾವು ಬೀದಿಗೆ ಇಳಿಯುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಕಳೆದ ಎರಡು ಮೂರು ವರ್ಷಗಳ ಅಂಕಿ ಅಂಶಗಳನ್ನು ಪರಿಶೀಲಿಸಿದರೆ, ಹೇಮಾವತಿ ನಾಲೆಯಿಂದ ಕುಣಿಗಲ್ ತಾಲೂಕಿಗೆ ಹರಿಯಬೇಕಾಗಿದ್ದ 3.05 ಟಿ.ಎಂ.ಸಿ ನೀರಿಗಿಂತಲೂ ಹೆಚ್ಚು ನೀರು ಹರಿದಿದೆ. ಒಂದು ವೇಳೆ ನಿಗಧಿತ ನೀರು ಬಂದಿಲ್ಲವೆಂದಾದರೆ, ಈಗಾಗಲೇ ಆಗಲೀಕರಣಗೊಂಡಿರುವ ನಾಲೆಯನ್ನು ಮತ್ತಷ್ಟು ಆಗಲ ಮಾಡಿ ತೆಗೆದುಕೊಂಡು ಹೋಗಲು ಯಾರ ಅಭ್ಯಂತರವೂ ಇಲ್ಲ. ಆದರೆ ಕುಣಿಗಲ್ ಹೆಸರಿನಲ್ಲಿ ರಾಮನಗರ, ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿದೆ. ಈ ಯೋಜನೆಯಿಂದ ಕುಣಿಗಲ್ ತಾಲೂಕಿನ ಜನರಿಗೂ ಯಾವುದೇ ಪ್ರಯೋಜನವಾಗದು. ಇದನ್ನು ಕುಣಿಗಲ್ ತಾಲೂಕಿನ ಜನರು ಅರ್ಥ ಮಾಡಿಕೊಳ್ಳಬೇಕು. ಶಾಸಕ ಹೆಚ್.ಡಿ.ರಂಗನಾಥ್ ಅವರು ಜನರನ್ನು ಎತ್ತಿಕಟ್ಟುವ ಹುನ್ನಾರಕ್ಕೆ ಯಾರು ಬಲಿಯಾಗಬಾರದು ಎಂದು ಎ.ಗೋವಿಂದರಾಜು ಮನವಿ ಮಾಡಿದ್ದಾರೆ.
ರಾಜ್ಯದ ಉಪಮುಖ್ಯಮಂತ್ರಿಗಳಾಗಿರುವ ಕೊರಟಗೆರೆ ಶಾಸಕರು, ತಾವು ಉಪಮುಖ್ಯಮಂತ್ರಿಯಾಗಲು ಮತ ನೀಡಿ, ಗೆಲುವು ತಂದಕೊಟ್ಟ ಜನರನ್ನು ತಿರಸ್ಕಾರ ಮಾಡಿ, ಸರಕಾರದ ಭಾಗ ಎಂಬ ಮುಲಾಜಿಗೆ ಒಳಗಾಗಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ಬೆಂಬಲ ವ್ಯಕ್ತಪಡಿಸಿರುವುದು ಸರಿಯಲ್ಲ. ಈ ಕಾಮಗಾರಿಯಿಂದ ಜಿಲ್ಲೆಯ ಗುಬ್ಬಿ, ಮಧುಗಿರಿ, ಕೊರಟಗೆರೆ, ತುಮಕೂರು ನಗರ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರಗಳ ಜನರಿಗೆ ತೀವ್ರ ತೊಂದರೆಯಾಗಲಿದೆ. ಇದರ ಅರಿವಿದ್ದು, ತಾವು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಮಗಾರಿಗಾಗಿ ಜನರ ಮನವೊಲಿಸುವ ಮಾತನಾಡುತ್ತಿರುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ಡಾ.ಜಿ.ಪರಮೇಶ್ವರ್ ಅವರ ಈ ಹೇಳಿಕೆ, ಇಡೀ ಜಿಲ್ಲೆಯ ಜನತೆಯ ನಂಬಿಕೆಗೆ ಧಕ್ಕೆ ತರುವಂತಿದೆ. ತಾವು ಮತ್ತೊಮ್ಮೆ ಈ ನಿರ್ಧಾರವನ್ನು ಮರು ಪರಿಶೀಲನೆ ನಡೆಸಬೇಕು.ಇಲ್ಲದಿದ್ದರೆ ನಿಮ್ಮ ವಿರುದ್ದವೂ ಜಿಲ್ಲೆಯ ಜನ ಬೀದಿಗೆ ಇಳಿಯಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ ಎಂದು ಎ.ಗೋವಿಂದರಾಜು ಎಚ್ಚರಿಸಿದ್ದಾರೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಈ ಹೇಳಿಕೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿದೆ. ಮುಂದಿನ ಹೋರಾಟದ ರೂಪುರೇಷನ್‌ಗಳ ಕುರಿತು ಚರ್ಚಿಸಲು ಜೂನ್.11ರ ಗುರುವಾರ ಗುಬ್ಬಿಯಲ್ಲಿ ರೈತ ಸಂಘ, ಸಂಯುಕ್ತ ಕಿಸಾನ್ ಹೋರಾಟ ಸೇರಿದಂತೆ ಎಲ್ಲಾ ಸಂಘ, ಸಂಸ್ಥೆಗಳ ಸಭೆಯನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ನೀವು ಕಾಮಗಾರಿ ನಡೆಸಲು ಮುಂದಾದರೆ ಜಿಲ್ಲೆಯ ಜನರು ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದವಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಮತ್ತೊಮ್ಮೆ ಈ ವಿಚಾರದಲ್ಲಿ ಆಲೋಚಿಸುವಂತೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.

- Advertisement -
Share This Article
Follow:
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues, politics, social developments, and ground-level reporting, he has built a reputation for delivering accurate and impactful stories that connect with the common people. He actively covers current affairs, civic issues, crime reports, political events, cultural programs, and human-interest stories with a commitment to ethical journalism. His reporting style focuses on clarity, credibility, and public awareness, making his work relatable and informative to readers across Karnataka. Ashok R.P. believes journalism is a powerful medium to raise public voice and strengthen democracy through responsible reporting and factual storytelling. Special Interests: * Regional & Political News * Public Interest Stories * Social Awareness Reporting * Ground Reality Journalism * Digital Media & News Publishing
Leave a Comment