ಮಕ್ಕಳಲ್ಲಿ ಸಂಸ್ಕಾರ, ಆತ್ಮವಿಶ್ವಾಸ ಬೆಳೆಸಿ: ಸುರೇಶ್ಗೌಡ
ಹಿರೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಊಟದ ಕೊಠಡಿ ಉದ್ಘಾಟನೆ
Tumkurnews.in
ತುಮಕೂರು: ಶಿಕ್ಷಕರು ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ, ಆತ್ಮವಿಶ್ವಾಸ ಬೆಳೆಸಿದರೆ ಅವರು ಮುಂದೆ ಆದರ್ಶ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಶಾಲೆಯ ವಿದ್ಯಾರ್ಥಿಗಳು ದೇವರ ಸಮಾನ. ಶಾಲೆ ಅವರಿಗೆ ದೇವಸ್ಥಾನವಿದ್ದಂತೆ ಎಂಬ ಭಾವನೆಯಿಂದ ಶಿಕ್ಷಕರು ಮಕ್ಕಳನ್ನು ರೂಪಿಸಬೇಕು ಎಂದು ಶಾಸಕ ಬಿ. ಸುರೇಶ್ಗೌಡ ಹೇಳಿದರು.
ಬುಧವಾರ ತುಮಕೂರು ಗ್ರಾಮಾಂತರ ಕ್ಷೇತ್ರದ ಹಿರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೋಣೆ ಹಾಗೂ ಊಟದ ಸಭಾಂಗಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ಯಾವುದೇ ಒತ್ತಡವಿಲ್ಲದೆ ಮಕ್ಕಳು ಆನಂದವಾಗಿ ಶಾಲೆಗೆ ಬರಬೇಕು. ಶಾಲೆಯಲ್ಲಿ ಅಂತಹ ವಾತಾವರಣ ಇರುವಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮಗುವಿಗೆ ಮೊದಲು ತಾಯಿಯೇ ಗುರು. ತಾಯಿ ಹೇಳಿಕೊಟ್ಟ ಸಂಸ್ಕಾರ, ತಂದೆ ಹೇಳಿಕೊಟ್ಟ ಶಿಸ್ತು ಮಗುವಿನ ಜೀವನವನ್ನು ರೂಪಿಸುತ್ತದೆ. ಶಿಕ್ಷಕರು ಅದನ್ನು ಮುಂದುವರಿಸಬೇಕು. ಮಕ್ಕಳು ಏನಾದರೂ ತಪ್ಪು ಮಾಡಿದರೆ ಅವರನ್ನು ಬೈದು, ಹೊಡೆದು ಸರಿಪಡಿಸುವ ಬದಲು ಪ್ರೀತಿಯಿಂದ ತಿಳಿಹೇಳಬೇಕು. ಸರ್ಕಾರಿ ಶಾಲೆಯಲ್ಲಿ ಓದಿದವರು ಮುಂದೆ ದೊಡ್ಡ ಹುದ್ದೆಗಳಿಗೆ ಹೋಗಿದ್ದಾರೆ. ಇವತ್ತು ನಮ್ಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳೇ ನಾಳೆ ಡಾಕ್ಟರ್, ಎಂಜಿನಿಯರ್, ಐಎಎಸ್, ಐಪಿಎಸ್, ಶಾಸಕರು, ಮಂತ್ರಿಗಳಾಗುತ್ತಾರೆ. ಅದಕ್ಕೆ ಮಕ್ಕಳಿಗೆ ಆತ್ಮವಿಶ್ವಾಸ ತುಂಬಬೇಕು ಎಂದು ತಿಳಿಸಿದರು.
10ನೇ ತರಗತಿ ಮಕ್ಕಳು ಈಗಿನಿಂದಲೇ ಚೆನ್ನಾಗಿ ಓದಬೇಕು. ಪರೀಕ್ಷೆಯ ಬಗ್ಗೆ ಭಯ ಬೇಡ. ಆತ್ಮವಿಶ್ವಾಸವಿದ್ದರೆ ಯಾವುದೇ ಪರೀಕ್ಷೆಯೂ ಕಷ್ಟವಲ್ಲ. ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಮನೆಯಲ್ಲಿ ಮತ್ತೊಮ್ಮೆ ಓದಬೇಕು ಎಂದು ಸಲಹೆ ನೀಡಿದರು.
ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸಿ. ಸರ್ಕಾರಿ ಶಾಲೆಯಲ್ಲಿ ಎಲ್ಲವೂ ಉಚಿತವಾಗಿ ಸಿಗುತ್ತದೆ. ಬಿಸಿಯೂಟ, ಹಾಲು, ಪುಸ್ತಕ, ಸಮವಸ್ತ್ರ ಎಲ್ಲವನ್ನೂ ಸರ್ಕಾರ ಕೊಡುತ್ತಿದೆ. ಮಕ್ಕಳಿಗೆ ಮನೆಯಲ್ಲೂ ಓದಲು ಸಮಯ ಕೊಡಿ, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಎಂದು ಶಾಸಕ ಸುರೇಶ್ಗೌಡ ಮನವಿ ಮಾಡಿದರು.
ಚಂದ್ರಶೇಖರ್ಗೆ ಅಭಿನಂದನೆ
ಶಾಲೆಗೆ ಸುಂದರವಾದ ಅಡುಗೆ ಕೋಣೆ ಹಾಗೂ ಊಟದ ಸಭಾಂಗಣ ನಿರ್ಮಿಸಿಕೊಟ್ಟ ಕಾಪ್ ರಾಡ್ ಇಂಡಸ್ಟ್ರೀಸ್ನ ಎಚ್.ಜಿ. ಚಂದ್ರಶೇಖರ್ ಅವರನ್ನು ಶಾಸಕರು ಅಭಿನಂದಿಸಿ, ಇವರ ಸೇವೆ ಮತ್ತು ಸಹಾಯ ಇನ್ನಷ್ಟು ಸರ್ಕಾರಿ ಶಾಲೆಗಳಿಗೆ ದೊರಕಿ ಮಕ್ಕಳಿಗೆ ಅನುಕೂಲವಾಗಲಿ ಎಂದು ಆಶಿಸಿದರು.
ಈ ವೇಳೆ ಶಾಸಕರು ಕಟ್ಟಡ ದಾನಿಯಾದ ಉದ್ಯಮಿ ಎಚ್.ಜಿ. ಚಂದ್ರಶೇಖರ್ ಹಾಗೂ ಅವರ ಪತ್ನಿ ಶಶಿಕಲಾ ಅವರನ್ನು ಸನ್ಮಾನಿಸಿ ಗೌರವಿಸಿದರು. ಚಂದ್ರಶೇಖರ್ ಅವರು ಶಾಲೆಯ ಶೌಚಾಲಯ ಮತ್ತು ಊಟದ ಕೊಠಡಿಗೆ 35 ಲಕ್ಷ ರೂಪಾಯಿ ದಾನ ನೀಡಿದ್ದಾರೆ. ಈ ಹಿಂದೆ ಇವರು 40 ಲಕ್ಷ ರೂ.ಗಳನ್ನು ಶಾಲಾ ಕಟ್ಟಡ ನಿರ್ಮಾಣಕ್ಕೆ ದಾನ ಮಾಡಿದ್ದರು. ಜಿಲ್ಲೆಯಲ್ಲಿ ಊಟದ ಸಭಾಂಗಣ ಇರುವ ಶಾಲೆ ಇದೇ ಮೊದಲು ಎಂದು ಸುರೇಶ್ಗೌಡ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವೆಂಕಟೇಶ್ವರಲು, ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಡಾ.ಎಸ್. ನಾಗಣ್ಣ, ಚಂದ್ರಶೇಖರ್ ಅವರ ಪುತ್ರ ರೋಹಿತ್ ಹಾಗೂ ಕುಟುಂಬದ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.
