ಶ್ರೀದೇವಿ ನರ್ಸಿಂಗ್, ಶ್ರೀರಮಣ ಮಹರ್ಷಿ ನರ್ಸಿಂಗ್ ಮತ್ತು ಶ್ರೀದುರ್ಗಾಂಬಾ ನರ್ಸಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಶ್ರೀದೇವಿ ನರ್ಸಿಂಗ್, ಶ್ರೀರಮಣ ಮಹರ್ಷಿ ನರ್ಸಿಂಗ್ ಮತ್ತು ಶ್ರೀದುರ್ಗಾಂಬಾ ನರ್ಸಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭ

ವಿದ್ಯಾರ್ಥಿಗಳಿಂದ ಮಾತ್ರ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ: ಯು.ಟಿ. ಖಾದರ್

Tumkurnews.in

ತುಮಕೂರು: ವಿದ್ಯಾರ್ಥಿಗಳಿಂದ ಮಾತ್ರ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಪ್ರತಿಪಾದಿಸಿದರು.

ನಗರದ ಶಿರಾರಸ್ತೆಯಲ್ಲಿರುವ ಶ್ರೀದೇವಿ ನರ್ಸಿಂಗ್, ಶ್ರೀರಮಣ ಮಹರ್ಷಿ ಹಾಗೂ ಶ್ರೀದುರ್ಗಾಂಬಾ ನರ್ಸಿಂಗ್ ಶಿಕ್ಷಣ ಸಂಸ್ಥೆಗಳ ವತಿಯಿಂದ 2022–23ನೇ ಸಾಲಿನ 24ನೇ ಪದವಿ ಪ್ರದಾನ ಸಮಾರಂಭವನ್ನು ನ.25ರಂದು ಬುಧವಾರ ಕಾಲೇಜಿನಲ್ಲಿ ಯು.ಟಿ. ಖಾದರ್ ಫರೀದ್ ಅವರು ಉದ್ಘಾಟಿಸಿ ಮಾತನಾಡುತ್ತಾ, ರಾಜಕಾರಣಿಗಳಿಂದ ಶಾಸನಸಭೆ, ಸಂಸತ್ತಿನಲ್ಲಿ ಭಾಷಣ ಬಿಗಿಯುವುದರಿಂದ ದೇಶವನ್ನು ಕಟ್ಟಲು, ಮುನ್ನಡೆ ತರಲು ಸಾಧ್ಯವಿಲ್ಲ. ದೇಶ ಮುನ್ನಡೆಗೆ ಬರಬೇಕಾದರೆ ಯುವಕರೇ ಪಾತ್ರ ನಿರ್ವಹಿಸಬೇಕು. ದೇಶಪ್ರೇಮವೆಂದರೆ ಕೇವಲ ಭಾಷಣ ಮಾಡುವುದಲ್ಲ, ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸುವುದೇ ನಿಜವಾದ ದೇಶಸೇವೆ ಎಂದರು.

ನರ್ಸಿಂಗ್ ವೃತ್ತಿಯಲ್ಲಿ ವಿವಿಧ ವಿಶೇಷ ವಿಭಾಗಗಳಲ್ಲಿ ತರಬೇತಿ ಪಡೆದು ಉನ್ನತ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ತಮ್ಮ ಆಸಕ್ತಿಗೆ ಅನುಗುಣವಾಗಿ ವಿಶೇಷ ಕೌಶಲಗಳನ್ನು ಕಲಿತು ವೃತ್ತಿಜೀವನದಲ್ಲಿ ಸಾಧನೆ ಮಾಡಬೇಕು. ಮುಂದಿನ 15-20 ವರ್ಷಗಳ ಅವಧಿಯಲ್ಲಿ ಜಗತ್ತಿಗೆ ಬೇಕಾಗುವ ಮಾನವ ಸಂಪನ್ಮೂಲಗಳನ್ನು ಒದಗಿಸುವ ಶಕ್ತಿ ಭಾರತಕ್ಕಿದೆ. ಉನ್ನತ ಶಿಕ್ಷಣ ದೊಡ್ಡಮಟ್ಟದ ಕೊಡುಗೆ ನೀಡಿದೆ. ಮಾತು ಮತ್ತು ಕೆಲಸ ದೇಶದ ಬೆಳವಣಿಗೆಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಭಾಷೆಯ ಅಡೆತಡೆಗಳಿಂದ ಉತ್ತಮ ಉದ್ಯೋಗಾವಕಾಶಗಳು ಕೈತಪ್ಪುವ ಸಾಧ್ಯತೆಯಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ವಿವಿಧ ವಿದೇಶಿ ಭಾಷೆಗಳನ್ನು ಕಲಿಯಲು ಅನುಕೂಲವಾಗುವಂತೆ ಕಾಲೇಜುಗಳಲ್ಲಿ ಕೌಶಲ್ಯ ಪ್ರಯೋಗಾಲಯದಂತೆ, ಭಾಷಾ ಪ್ರಯೋಗಾಲಯಗಳನ್ನು ಸ್ಥಾಪಿಸುವ ಅಗತ್ಯ ಹೆಚ್ಚಾಗಿದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಡಾ.ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಇಂದಿನ ಎ.ಐ. ಯುಗದಲ್ಲಿ ಪದವಿ ಪಡೆದರೆ ಸಾಲದು, ಸ್ಪರ್ಧೆ ಎದುರಿಸಲು ಎಲ್ಲಾ ರೀತಿಯ ಕೌಶಲ್ಯ ಬಹಳ ಮುಖ್ಯವಾಗಿದೆ. ಶ್ರೀದೇವಿ ಆಡಳಿತ ಮಂಡಳಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದ್ದು, ಸಾವಿರಾರು ಎಂಜಿನಿಯರ್ ಹಾಗೂ ವೈದ್ಯರನ್ನು ತಯಾರು ಮಾಡಿ ದೇಶಕ್ಕೆ ಸಾರ್ಥಕ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ನರ್ಸಿಂಗ್ ವೃತ್ತಿ ಜ್ಞಾನ, ಕೌಶಲ್ಯ, ಮಾನವೀಯ ಮೌಲ್ಯಗಳ ಸಮ್ಮಿಲನ ಎಂದರು. ರೋಗಿಯೊಂದಿಗೆ ಹಗಲಿರುಳು ನಿರಂತರವಾಗಿ ಇರುವವರು ನರ್ಸಿಂಗ್ ಸಿಬ್ಬಂದಿ. ರೋಗಿಯ ಕೈ ಹಿಡಿದು ಧೈರ್ಯ ತುಂಬುವುದು, ಸಮಯಕ್ಕೆ ಸರಿಯಾಗಿ ಔಷಧ ನೀಡುವುದು, ಆತ್ಮವಿಶ್ವಾಸ ಮೂಡಿಸುವುದು ಹಾಗೂ ರೋಗಿಗಳ ಸಂಬಂಧಿಕರಿಗೆ ಸಾಂತ್ವನ ಹೇಳುವುದು ನರ್ಸಿಂಗ್ ಸಿಬ್ಬಂದಿಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ನರ್ಸಿಂಗ್ ವೃತ್ತಿಯಲ್ಲಿ ವೈಜ್ಞಾನಿಕ ಜ್ಞಾನ, ಧೈರ್ಯ, ಪ್ರಾಯೋಗಿಕ ಕೌಶಲಗಳ ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಸಹಾನುಭೂತಿ ಮತ್ತು ಮಾನವೀಯ ಮನೋಭಾವ ಇರಬೇಕು. ಇಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ. ಇಂದು ಪದವೀಧರರಾಗಿ ಸಮಾಜಕ್ಕೆ ಆರೋಗ್ಯ ಸೇವೆ ಸಲ್ಲಿಸಲು ಮುಂದಾಗುತ್ತಿರುವುದು ಸಂತೋಷದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಶ್ರೀದೇವಿ ಮತ್ತು ಶ್ರೀರಮಣ ಮಹರ್ಷಿ ನರ್ಸಿಂಗ್ ಕಾಲೇಜಿನ 156 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪ್ರತಿಜ್ಞಾವಿಧಿಯನ್ನು ಶ್ರೀದೇವಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಕೆ. ಮುನಿಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಬೋಧಿಸಿದರು.

ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ. ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್. ಪಾಟೀಲ್, ಶ್ರೀದೇವಿ ಚಾರಿಟಬಲ್ ಟ್ರಸ್ಟಿಗಳಾದ ಡಾ.ಲಾವಣ್ಯ, ಅಂಬಿಕಾ ಎಂ. ಹುಲಿನಾಯ್ಕರ್, ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಯ ನಿರ್ದೇಶಕ ಡಾ.ನಾಗರಾಜ ಸೂರ್ಯದೇವರ್, ಶ್ರೀರಮಣ ಮಹರ್ಷಿ ನರ್ಸಿಂಗ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಪ್ರೊ.ಉಷಾ ಎಸ್. ಹಾಗೂ ಶ್ರೀದುರ್ಗಾಂಬಾ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲೆ ಪ್ರೊ.ಅಂಬಾ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಆಶಾ ಪ್ರಸನ್ನಕುಮಾರ್ ಮೊದಲಾದವರು ಹಾಜರಿದ್ದರು.

ಫೋಟೋ ಕ್ಯಾಪ್ಷನ್:

ನಗರದ ಶಿರಾರಸ್ತೆಯಲ್ಲಿರುವ ಶ್ರೀದೇವಿ ನರ್ಸಿಂಗ್, ಶ್ರೀರಮಣ ಮಹರ್ಷಿ ಹಾಗೂ ಶ್ರೀದುರ್ಗಾಂಬಾ ನರ್ಸಿಂಗ್ ಶಿಕ್ಷಣ ಸಂಸ್ಥೆಗಳ ವತಿಯಿಂದ 2022–23ನೇ ಸಾಲಿನ 24ನೇ ಪದವಿ ಪ್ರದಾನ ಸಮಾರಂಭವನ್ನು ನ.25ರಂದು ಬುಧವಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಚಿತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಡಾ.ಪಿ.ಜಿ.ಆರ್. ಸಿಂಧ್ಯಾ, ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ. ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್. ಪಾಟೀಲ್, ಶ್ರೀದೇವಿ ಚಾರಿಟಬಲ್ ಟ್ರಸ್ಟಿಗಳಾದ ಡಾ.ಲಾವಣ್ಯ, ಅಂಬಿಕಾ ಎಂ. ಹುಲಿನಾಯ್ಕರ್, ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಯ ನಿರ್ದೇಶಕ ಡಾ.ನಾಗರಾಜ ಸ

Leave a Reply

Your email address will not be published. Required fields are marked *