ಗುರಿ ಇಟ್ಟುಕೊಂಡು ನಿರಂತರ ಪರಿಶ್ರಮ ಪಟ್ಟರೆ ಯಶಸ್ಸು ಖಚಿತ: ಕ್ರೀಡಾಪಟು ಉಷಾರಾಣಿ
ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡಿ: ಏಷ್ಯನ್ ಗೇಮ್ಸ್ ಪದಕ ವಿಜೇತರ ಸಲಹೆ
Tumkurnews.in
ತುಮಕೂರು: ಒಂದು ಉದಾತ್ತವಾದ ಗುರಿಯನ್ನು ಇಟ್ಟುಕೊಂಡು ನಿರಂತರ ಪರಿಶ್ರಮ ಪಟ್ಟರೆ ಒಂದಲ್ಲ ಒಂದು ದಿನ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಇದಕ್ಕೆ ಕ್ರೀಡಾ ಕ್ಷೇತ್ರದ ಸಾಧನೆಯೇ ಸಾಕ್ಷಿ. ಕ್ರೀಡಾ ಕೋಟಾದಡಿ ಮೂರು ಹಂತಗಳಲ್ಲಿ ಸರ್ಕಾರಿ ಉದ್ಯೋಗ ಪಡೆದಿರುವ ನಾನೇ ಇದಕ್ಕೆ ಜೀವಂತ ಉದಾಹರಣೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಉಷಾರಾಣಿ ತಿಳಿಸಿದರು.
ಶ್ರೀ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಿದ್ದ ‘ಸಂಸ್ಕೃತಿ-2026-27’ನೇ ಸಾಲಿನ ಮುಕ್ತಾಯ ಸಮಾರಂಭದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಪದಕ ಪಡೆದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಅವರು ಮಾತನಾಡಿದರು.
ಏಷ್ಯನ್ ಗೇಮ್ಸ್ನ ಕಬಡ್ಡಿ ವಿಭಾಗದಲ್ಲಿ ಪದಕ ಗಳಿಸಿದ ಸಾಧನೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಗೊಂಡಿದ್ದೆ. ನಂತರ ನನ್ನ ಸಾಧನೆಯನ್ನು ಗುರುತಿಸಿ ಸರ್ಕಾರ ಎರಡನೇ ದರ್ಜೆಯ ಅಧಿಕಾರಿಯಾಗಿ ನೇಮಕ ಮಾಡಿತು. ಬಡತನದಲ್ಲೇ ಜನಿಸಿದ ಏಳು ಜನರ ಕುಟುಂಬದಲ್ಲಿ ನಾಲ್ವರು ಕಬಡ್ಡಿ ಆಟಗಾರರಾಗಿದ್ದೆವು. ಕಬಡ್ಡಿ ಆಟದ ಮೂಲಕ ಪೊಲೀಸ್ ಪೇದೆಯಾಗಿ ವೃತ್ತಿ ಜೀವನ ಆರಂಭಿಸಿದ ನಾನು, ನನ್ನ ಸಾಧನೆಯ ಫಲವಾಗಿ ಇಲಾಖೆಯಲ್ಲಿ ಪಿಎಸ್ಐ ಹುದ್ದೆಗೆ ಬಡ್ತಿ ಪಡೆದೆ. 2018ರ ಏಷ್ಯನ್ ಗೇಮ್ಸ್ನಲ್ಲಿ ಪದಕ ಗಳಿಸಿದ ಹಿನ್ನೆಲೆಯಲ್ಲಿ ಸರ್ಕಾರ ಮತ್ತಷ್ಟು ಉನ್ನತ ಹುದ್ದೆಯನ್ನು ನೀಡಿತು ಎಂದು ತಮ್ಮ ಸಾಧನೆಯ ಹಾದಿಯನ್ನು ವಿವರಿಸಿದರು.
ಒಂದು ಕಾಲದಲ್ಲಿ ಅಣ್ಣನಿಗಾಗಿ ಪರದಾಡುತ್ತಿದ್ದ ನನಗೆ ಇಂದು ಸಾವಿರಾರು ಜನರಿಗೆ ಅನ್ನ ನೀಡುವ ಅವಕಾಶ ದೊರೆತಿದೆ. ಇದಕ್ಕೆ ಕಾರಣ ನಾನು ನಂಬಿದ ಕಬಡ್ಡಿ ಆಟ ಮತ್ತು ಅದಕ್ಕಾಗಿ ಪಟ್ಟ ಪರಿಶ್ರಮ. ನೀವು ಕೂಡ ನನ್ನಂತೆಯೇ ಸಾಧನೆ ಮಾಡಬಹುದು. ರಾಜ್ಯ ಸರ್ಕಾರ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ನೀಡಿದೆ. ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದರೆ ಒಂದು ಕೋಟಿ ರೂ.ನಿಂದ 50 ಲಕ್ಷ ರೂ.ವರೆಗೆ ನಗದು ಬಹುಮಾನ ಹಾಗೂ ರೈಲ್ವೆಯಲ್ಲಿ ಉಚಿತ ಪ್ರಯಾಣದಂತಹ ಸೌಲಭ್ಯಗಳೂ ದೊರೆಯುತ್ತವೆ. ಆದ್ದರಿಂದ ಶಿಕ್ಷಣದ ಜೊತೆಗೆ ಕ್ರೀಡೆಯನ್ನೂ ಗುರಿಯಾಗಿಸಿಕೊಂಡು ಮುನ್ನಡೆಯಿರಿ. ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಗಾಯಕಿ ಹಾಗೂ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ದೀಪಿಕಾ ಶ್ರೀಕಾಂತ್ ಮಾತನಾಡಿ, ಓದಿನ ಜೊತೆಗೆ ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆ ಮಾಡುವ ಗುರಿ ಹೊಂದಬೇಕು. ಶಿಕ್ಷಣ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದರೆ, ನಿಮ್ಮ ಆಸಕ್ತಿಯ ಕ್ಷೇತ್ರ ಬದುಕಿಗೆ ಹೊಸ ದಿಕ್ಕು ನೀಡುತ್ತದೆ. ನನ್ನ ತಂದೆ-ತಾಯಿಯವರು ನನ್ನನ್ನು ಸಂಗೀತ ಕಲಿಯಲು ಸೇರಿಸಿದ್ದು, ಅದು ಇಂದು ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಸೋಲು ಗೆಲುವಿನ ಮೆಟ್ಟಿಲಾಗಬೇಕು. ಸೋಲಿನಿಂದ ಪಾಠ ಕಲಿತರೆ ಜಗತ್ತನ್ನೇ ಗೆಲ್ಲಬಹುದು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನ ಸಂಯೋಜಕ ಪ್ರೊ. ಜಿ.ಎಸ್. ರೇಣುಕಪ್ಪ ಮಾತನಾಡಿ, ಸಂಸ್ಕೃತಿ ಎಂದರೆ ನಮ್ಮ ನಡುವಿನ ಆಚಾರ-ವಿಚಾರಗಳು ಹಾಗೂ ನಡವಳಿಕೆಗಳನ್ನು ಪ್ರತಿಬಿಂಬಿಸುವ ಅಂಶವಾಗಿದೆ. ಸಂಸ್ಕೃತಿ ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಭೌಗೋಳಿಕ ಹಿನ್ನೆಲೆಗೆ ಅನುಗುಣವಾಗಿ ಭಿನ್ನವಾಗಿರುತ್ತದೆ. ಹೀಗಾಗಿಯೇ ಭಾರತವನ್ನು ವಿಭಿನ್ನ ಸಂಸ್ಕೃತಿಗಳ ದೇಶ ಎಂದು ಕರೆಯಲಾಗುತ್ತದೆ. ಆದರೆ ಕೆಲವು ಕಿಡಿಗೇಡಿಗಳು ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಹಿರಿಯರಿಗೆ ಹಾಗೂ ದೇಶದಲ್ಲಿ ಹೆಸರು ಮಾಡಿದ ವ್ಯಕ್ತಿಗಳಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ವರದಿ ವಾಚಿಸಿದ ಸಂಸ್ಕೃತಿ ಕಾರ್ಯಕ್ರಮದ ಸಂಚಾಲಕಿ ಮಂಜುಳಾ ಬಿ.ಎಸ್. ಮಾತನಾಡಿ, ಹೆಣ್ಣುಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಹಾಗೂ ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಹಿರಿಯ ಶ್ರೀಗಳು ಆರಂಭಿಸಿದ ಈ ಕಾಲೇಜು ಇಂದು ನಾಡಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿದೆ. ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಕಾಲೇಜು ಉತ್ತಮ ಹೆಸರು ಗಳಿಸಿದೆ. ನಮ್ಮ ವಿದ್ಯಾರ್ಥಿನಿಯರು ಕ್ರೀಡೆಯಲ್ಲಿ ರಾಷ್ಟ್ರಮಟ್ಟದವರೆಗೂ ಸಾಧನೆ ಮಾಡಿದ್ದಾರೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪಿ. ಚಂದ್ರಶೇಖರ್ ಮಾತನಾಡಿ, ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ, ಅವರು ಮುಂದಿನ ದಿನಗಳಲ್ಲಿ ಹೆಮ್ಮೆಯ ಸಾಧಕರಾಗಿ ಬೆಳೆದು ನಾಡಿಗೆ ಬೆಳಕು ನೀಡುವ ವ್ಯಕ್ತಿಗಳಾಗುತ್ತಾರೆ ಎಂಬ ವಿಶ್ವಾಸವಿದೆ.
ಈ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿಯು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡುತ್ತಿದೆ. ಸಿದ್ದಗಂಗಾ ಶ್ರೀಗಳು ನಮ್ಮ ಎಲ್ಲ ಚಟುವಟಿಕೆಗಳಿಗೆ ಬೆಂಬಲ ನೀಡಿ ಆಶೀರ್ವದಿಸಿದ್ದಾರೆ. ಇದರ ಫಲವಾಗಿ ವಿದ್ಯಾರ್ಥಿನಿಯರು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಈಗಾಗಲೇ 112ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸುವ ಗುರಿ ಹೊಂದಿದ್ದೇವೆ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿನಿಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವರ್ಷವಿಡೀ ನಡೆದ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿನಿಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
