ಒಂದು ತಿಂಗಳ ಕಾಲ ಭಕ್ತರಿಗೆ ಗೂಳೂರು ಮಹಾಗಣಪತಿ ದರ್ಶನ ಭಾಗ್ಯ
18 ಕೋಮಿನವರಿಂದ ವಿಶೇಷ ಪೂಜೆ; ಡಿಸೆಂಬರ್ 12 ಮತ್ತು 13ರಂದು ಅದ್ಧೂರಿ ಗಣೇಶ ಜಾತ್ರೆ
Tumkurnews.in
ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಮಹಾಗಣಪತಿ ಮೂರ್ತಿಯನ್ನು ಬಲಿಪಾಡ್ಯಮಿ ದಿನದಂದು 18 ಕೋಮಿನ ಜನರು ಒಗ್ಗೂಡಿ ವಿವಿಧ ಧಾರ್ಮಿಕ ವಿಧಿವಿಧಾನ ಹಾಗೂ ಸಂಪ್ರದಾಯಗಳೊಂದಿಗೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದರೊಂದಿಗೆ ಒಂದು ತಿಂಗಳ ಕಾಲ ನಡೆಯುವ ಮಹಾಗಣಪತಿ ದರ್ಶನೋತ್ಸವಕ್ಕೆ ಚಾಲನೆ ದೊರೆತಿದೆ.
ಕಾರ್ತಿಕ ಮಾಸದಲ್ಲಿ ಒಂದು ತಿಂಗಳ ಕಾಲ ಗೂಳೂರು ಮಹಾಗಣಪತಿಯನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಲಿಪಾಡ್ಯಮಿ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಗಣೇಶ ಮೂರ್ತಿಗೆ ಕಣ್ಣುಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಬೃಹತ್ ಗಣೇಶ ಮೂರ್ತಿಗೆ ಐತಿಹಾಸಿಕ ಹಿನ್ನೆಲೆ ಹಾಗೂ ವಿಶೇಷ ಐತಿಹ್ಯವಿದೆ. ಒಂದು ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ. ಪ್ರತಿದಿನ ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು, 18 ಕೋಮಿನವರು ವಿವಿಧ ಸೇವೆಗಳನ್ನು ಸಲ್ಲಿಸಲಿದ್ದಾರೆ.
ಗಣೇಶ ಚತುರ್ಥಿಯ ಬದಲಾಗಿ ಕಾರ್ತಿಕ ಮಾಸದಲ್ಲಿ ಗೂಳೂರಿನಲ್ಲಿ ಗಣೇಶೋತ್ಸವ ನಡೆಯುವುದು ವಿಶೇಷ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಮೂರ್ತಿಯ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ಆಯುಧಪೂಜೆ ಹಾಗೂ ವಿಜಯದಶಮಿಯ ವೇಳೆಗೆ ಮೂರ್ತಿ ಪೂರ್ಣ ರೂಪ ಪಡೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಮೂರ್ತಿಯ ನಾಭಿಯಲ್ಲಿ ಚಿಕ್ಕ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಕಾರ್ತಿಕ ಪಾಡ್ಯದ ವೇಳೆಗೆ ಸರ್ವಾಲಂಕಾರಭೂಷಿತನಾಗಿ ಸಿದ್ಧಗೊಳ್ಳುವ ಮಹಾಗಣಪತಿಗೆ ಬಲಿಪಾಡ್ಯಮಿಯಂದು ಕಣ್ಣುಧಾರಣೆ ಮಾಡಿ ಪೂಜಾ ಕೈಂಕರ್ಯ ಆರಂಭಿಸಲಾಗುತ್ತದೆ.
ಎರಡು ದಿನಗಳ ಕಾಲ ಗಣೇಶ ಜಾತ್ರೆ
ಡಿಸೆಂಬರ್ 12 ಮತ್ತು 13ರಂದು ಗೂಳೂರು ಗಣೇಶ ಜಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿನಿತ್ಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಜೊತೆಗೆ ಸುಗಮ ಸಂಗೀತ, ಪೌರಾಣಿಕ ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಗೂಳೂರು ಶ್ರೀ ಮಹಾಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಎಸ್. ಶಿವಕುಮಾರ್ ಮತ್ತು ದೇವಾಲಯದ ಅರ್ಚಕ ಶಿವಕುಮಾರ ಶಾಸ್ತ್ರಿಗಳು ತಿಳಿಸಿದರು.
ಡಿಸೆಂಬರ್ 12ರಂದು ರಾತ್ರಿ 18 ಕೋಮಿನ ಜನರ ಸಮ್ಮುಖದಲ್ಲಿ ಗಣೇಶ ಮೂರ್ತಿಯನ್ನು ದೇವಾಲಯದಿಂದ ಹೊರತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಗುವುದು. ಡಿಸೆಂಬರ್ 13ರಂದು ಸಂಜೆ 5 ಗಂಟೆಯ ನಂತರ ಗೂಳೂರು ಕೆರೆಯಲ್ಲಿ ವೈಭವಯುತ ವಿಸರ್ಜನಾ ಮಹೋತ್ಸವ ನಡೆಯಲಿದೆ. ಈ ವರ್ಷವೂ ಗೂಳೂರು ಕೆರೆ ಭರ್ತಿಯಾಗಿದ್ದು, ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ ಎಂದು ತಿಳಿಸಿದರು.
ಒಂದು ತಿಂಗಳ ಕಾಲ ನಡೆಯುವ ಗಣೇಶ ದರ್ಶನೋತ್ಸವಕ್ಕೆ ತುಮಕೂರು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಗೌರಿ ಗಣೇಶ ಹಬ್ಬದಿಂದ ನಿರಂತರವಾಗಿ ಮೂರ್ತಿಯನ್ನು ಸಿದ್ಧಪಡಿಸಿ, ಬಲಿಪಾಡ್ಯಮಿಯಂದು ಕಣ್ಣುಧಾರಣೆ ಮಾಡಿ ಪೂಜಾ ಕೈಂಕರ್ಯ ಆರಂಭಿಸಲಾಗಿದೆ. ಒಂದು ತಿಂಗಳ ಕಾಲ ಭಕ್ತರಿಗೆ ಪ್ರತಿನಿತ್ಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅರ್ಚಕ ಶಿವಕುಮಾರ ಶಾಸ್ತ್ರಿಗಳು ತಿಳಿಸಿದರು.
