ನಾಟಕ, ಸಾಂಸ್ಕೃತಿಕ ಉತ್ಸವಗಳು ಗ್ರಾಮದಲ್ಲಿ ಒಗ್ಗಟ್ಟು ಮೂಡಿಸುತ್ತವೆ: ಕೆ.ಎಸ್. ಸಿದ್ದಲಿಂಗಪ್ಪ
ಸ್ವಾಂದೇನಹಳ್ಳಿಯಲ್ಲಿ ಕರಿಭಂಟನ ಕಾಳಗ ಮೂಡಲಪಾಯ ಬಯಲಾಟ ಪ್ರದರ್ಶನ
Tumkurnews.in
ತುಮಕೂರು: ನಾಟಕಗಳು ಹಾಗೂ ಸಾಂಸ್ಕೃತಿಕ ಉತ್ಸವಗಳು ಗ್ರಾಮೀಣ ಜನರಲ್ಲಿ ಒಗ್ಗಟ್ಟು ಮೂಡಿಸುವುದರ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ತಿಳಿಸಿದರು.
ತುಮಕೂರು ತಾಲೂಕು ಸ್ವಾಂದೇನಹಳ್ಳಿ ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ರಂಗಸೊಗಡು ಕಲಾ ಟ್ರಸ್ಟ್ (ರಿ.), ಸ್ವಾಂದೇನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಗಣೇಶೋತ್ಸವ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕರಿಭಂಟನ ಕಾಳಗ ಮೂಡಲಪಾಯ ಬಯಲಾಟ ಪ್ರದರ್ಶನಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನಗರಕ್ಕೆ ಸಮೀಪವಿರುವ ಸ್ವಾಂದೇನಹಳ್ಳಿ ಒಂದು ಸಾಂಸ್ಕೃತಿಕ ಕಲಾ ಗ್ರಾಮವಾಗಿದೆ. ಪ್ರತಿವರ್ಷ ಗಣೇಶ ಪ್ರತಿಷ್ಠಾಪನೆ ಹಾಗೂ ಶ್ರೀರಂಗನಾಥಸ್ವಾಮಿ ಉತ್ಸವದ ಸಂದರ್ಭದಲ್ಲಿ ವಾರಗಟ್ಟಲೆ ನಾಟಕ, ಸಂಗೀತ, ನೃತ್ಯ ಮತ್ತು ಜಾನಪದ ಉತ್ಸವಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ರಂಗಸೊಗಡು ಕಲಾ ಟ್ರಸ್ಟ್ನ ಸಿದ್ದರಾಜು ಅವರು ಪ್ರತಿವರ್ಷ ವಿವಿಧ ಕಲಾತಂಡಗಳಿಗೆ ವೇದಿಕೆ ಕಲ್ಪಿಸಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮೊಬೈಲ್ ಮತ್ತು ಟಿವಿಗಳಿಂದ ಹೊರಬಂದು ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಚರಕ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಬಸವರಾಜು ಮಾತನಾಡಿ, ಮನುಷ್ಯನ ಒತ್ತಡ ನಿವಾರಣೆ ಹಾಗೂ ಮನೋವಿಕಾಸಕ್ಕೆ ನಾಟಕ, ಸಿನಿಮಾ, ಸಾಹಿತ್ಯ ಮತ್ತು ಕ್ರೀಡೆಗಳು ಸಹಕಾರಿಯಾಗಿವೆ. ಸುಮಾರು 20 ವರ್ಷಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಸರ್ಜನ್ ಆಗಿದ್ದಾಗ ಪರಿಚಯವಾದ ಆಟೋ ಸಿದ್ದರಾಜು ಅವರು ಇಂದು ಸಮಾಜಸೇವೆ ಹಾಗೂ ರಂಗಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಳಿವಿನಂಚಿನಲ್ಲಿರುವ ಬಯಲಾಟ ಮತ್ತು ದೊಡ್ಡಾಟದಂತಹ ಜಾನಪದ ಕಲಾಪ್ರಕಾರಗಳಿಗೆ ವೇದಿಕೆ ಕಲ್ಪಿಸುತ್ತಿರುವುದು ಮೆಚ್ಚುವಂತಹ ಕಾರ್ಯ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ರವಿಕುಮಾರ್ ನೀ.ಹ. ಮಾತನಾಡಿ, ತುಮಕೂರು ನಗರಕ್ಕೆ ಹತ್ತಿರದಲ್ಲಿದ್ದರೂ ಸ್ವಾಂದೇನಹಳ್ಳಿ ತನ್ನ ಗ್ರಾಮೀಣ ಸಂಸ್ಕೃತಿ ಮತ್ತು ಪರಿಸರವನ್ನು ಉಳಿಸಿಕೊಂಡಿದೆ. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿಯ ಪ್ರತೀಕ. ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೇಲ್ವಿಚಾರಕ ಸುರೇಶ್ ಮಾತನಾಡಿ, ಜಾನಪದ ಕಲಾವಿದರ ಬದುಕು ಇಂದು ದುಸ್ತರವಾಗಿದೆ. ಇಂತಹ ಕಲೆಗಳನ್ನೇ ನಂಬಿಕೊಂಡಿರುವ ಕುಟುಂಬಗಳು ಜೀವನ ನಿರ್ವಹಣೆ ಮಾಡಲು ಕಷ್ಟಪಡುತ್ತಿವೆ. ಆಧುನಿಕತೆಯನ್ನು ಅಳವಡಿಸಿಕೊಂಡು ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ರಾಜ್ಯ ಸಂಗೀತ ಮತ್ತು ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಡಾ. ಕೆ. ಸಣ್ಣಹೊನ್ನಯ್ಯ ಕಂಟಲಗೆರೆ ಮಾತನಾಡಿ, ಗ್ರಾಮೀಣ ಜನರ ಬದುಕಿನಲ್ಲಿ ಜನಪದ ಕಲೆಗಳು ಹಾಸುಹೊಕ್ಕಾಗಿವೆ. ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸಿದರೆ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾಶ್ರೀ ಡಾ. ಲಕ್ಷ್ಮಣದಾಸ್ ಮಾತನಾಡಿ, ಸ್ವಾಂದೇನಹಳ್ಳಿ ಹಲವು ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿದೆ. ರಾಜ್ಯದ ಹಲವಾರು ಕಲಾವಿದರು ಇಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಸಾಧಕರನ್ನು ಸನ್ಮಾನಿಸುವ ಮೂಲಕ ಇತರರಿಗೆ ಪ್ರೇರಣೆ ನೀಡುತ್ತಿರುವ ರಂಗಸೊಗಡು ಕಲಾ ಟ್ರಸ್ಟ್ನ ಸೇವೆ ಅನನ್ಯವಾಗಿದೆ ಎಂದರು.
ಜನಪದ ಕಲಾವಿದ ಹಾಗೂ ಗಾಯಕ ಮೋಹನಕುಮಾರ್ ವಿವಿಧ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ವೇದಿಕೆಯಲ್ಲಿ ಜಲಧಿ ರಾಜು, ಪಣಗಾರ್ ಎಸ್.ಡಿ. ರಮೇಶ್, ಗುತ್ತಿಗೆದಾರ ಕೋದಂಡರಾಮಯ್ಯ, ಸ್ವಾಂದೇನಹಳ್ಳಿ ಸಿದ್ಧಿವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ದಯಾನಂದ, ಕಲಾವಿದ ಕಾಂತರಾಜು ಕೌತಮಾರನಹಳ್ಳಿ ಹಾಗೂ ರಂಗಸೊಗಡು ಕಲಾ ಟ್ರಸ್ಟ್ನ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಬಸವರಾಜು, ಶಿವಕುಮಾರ್ ಕೆ.ಎಂ. (ಆಟೋ ಯಡಿಯೂರಪ್ಪ), ನಾಗಭೂಷಣ್, ಮರಿಸ್ವಾಮಿ, ಸುಬ್ಬೇದಾರ್ ಬಿ. ರಾಜಶೇಖರಯ್ಯ, ವೆಂಕಟೇಶ್, ಆರ್.ಎಸ್. ಗೀತಾ, ಡಾ. ಹೆಚ್.ಡಿ. ನರಸೇಗೌಡ ಹಾಗೂ ಟಿ.ಆರ್. ಮೋಹನಕುಮಾರ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ನಂತರ ಡಿ. ನಾಗರಾಜು ವೀರ್ಲಗೊಂದಿ ಮತ್ತು ತಂಡದವರಿಂದ, ಹೊಟ್ಟೆ ಬೊಮ್ಮನಹಳ್ಳಿ ಹನುಮಂತರಾಯಪ್ಪ ಅವರ ಭಾಗವತಿಕೆಯಲ್ಲಿ ಕರಿಭಂಟನ ಕಾಳಗ ಮೂಡಲಪಾಯ ಬಯಲಾಟ ಪ್ರದರ್ಶನಗೊಂಡಿತು.
