ನ.28 ಮತ್ತು 29ರಂದು ಸಮಾಜಮುಖಿ ಸಾಹಿತ್ಯ ಸಮ್ಮೇಳನ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ನ.28 ಮತ್ತು 29ರಂದು ಸಮಾಜಮುಖಿ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ, ಭಾಷೆ, ಕಲೆ ಹಾಗೂ ಸಾಮಾಜಿಕ ಚಿಂತನೆಗಳ ಮಹಾಸಂಗಮ

Tumkurnews.in

ತುಮಕೂರು: ಸಮಾಜಮುಖಿ ಪ್ರಕಾಶನದ ವತಿಯಿಂದ 2026ನೇ ಸಾಲಿನ ಸಮಾಜಮುಖಿ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ 28 ಮತ್ತು 29ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಬಾ.ಹ. ರಮಾಕುಮಾರಿ, ಎರಡು ದಿನಗಳ ಸಮ್ಮೇಳನದಲ್ಲಿ ನಾಲ್ಕು ವೇದಿಕೆಗಳಲ್ಲಿ ಒಟ್ಟು 42 ಗೋಷ್ಠಿಗಳು ನಡೆಯಲಿದ್ದು, ಕನ್ನಡ ಸಾಹಿತ್ಯ, ಭಾಷೆ, ಕಲೆ ಹಾಗೂ ಸಮಾಜವನ್ನು ವಿವಿಧ ಆಯಾಮಗಳಿಂದ ಚರ್ಚೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂಪನಾ, ಎಂ. ವೀರಪ್ಪ ಮೊಯ್ಲಿ, ಆರ್. ಸುನಂದಮ್ಮ, ಎನ್.ಆರ್. ವಿಶ್ವಕುಮಾರ್ ಹಾಗೂ ಜೈರಾಮ್ ರಾಮೇಗೌಡ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿ, ವಿಜಯಮ್ಮ ಬಂಜಗೆರೆ ಜಯಪ್ರಕಾಶ್, ಕೆ.ವೈ. ನಾರಾಯಣಸ್ವಾಮಿ ಹಾಗೂ ಎಚ್.ಆರ್. ಸುಜಾತಾ ಪಾಲ್ಗೊಳ್ಳಲಿದ್ದಾರೆ.

ವಿವಿಧ ಗೋಷ್ಠಿಗಳಲ್ಲಿ ಎಚ್.ಎಸ್. ಶಿವಪ್ರಕಾಶ್, ಓ.ಎಲ್. ನಾಗಭೂಷಣಸ್ವಾಮಿ, ಬಿ. ಜಯಶ್ರೀ, ಸುದೇಶ್ ಮಹಾನ್, ಶಶಿಧರ ಅಡಪ, ಅರವಿಂದ ಚೊಕ್ಕಾಡಿ, ಸುರೇಶ್ ಅನಗಳ್ಳಿ, ಬಿ. ಸುರೇಶ್, ಜಿ.ಎನ್. ದೇವಿ, ಎಸ್.ಎನ್. ಶ್ರೀಧರ್, ಎಸ್.ಜಿ. ಸಿದ್ದರಾಮಯ್ಯ, ಜಯಪ್ರಕಾಶಗೌಡ, ಕೃಪಾಕರ ಸೇನಾನಿ, ನಟರಾಜ್ ಹುಳಿಯಾರ್, ರಾಜೇಂದ್ರ ಚೆನ್ನಿ, ಚ.ಹ. ರಘುನಾಥ್, ಎಂ.ಎಸ್. ಆಶಾದೇವಿ, ಎಸ್. ನಟರಾಜ್ ಬೂದಾಳ್, ಎಸ್.ಆರ್. ವಿಜಯಶಂಕರ್, ವಸುಂಧರಾ ಭೂಪತಿ, ವೈಜಯಂತಿಕಾಶಿ, ಹಿ.ಚಿ. ರಾಮಚಂದ್ರೇಗೌಡ, ಬಾ.ಹ. ರಮಾಕುಮಾರಿ, ತಮಿಳುಸೆಲ್ವಿ, ಬೈರಮಂಗಲ ರಾಮೇಗೌಡ, ಎನ್.ಆರ್. ಲಲಿತಾಂಬ, ಮೇಟಿ ಮಲ್ಲಿಕಾರ್ಜುನ, ಆರ್. ಪೂರ್ಣಿಮಾ ಹಾಗೂ ಕೆಮಲಾಕರ ಭಟ್ ಸೇರಿದಂತೆ ಹಲವು ಸಾಹಿತಿಗಳು ಮತ್ತು ಚಿಂತಕರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಲೇಖಕಿ ಹಾಗೂ ಇಂಗ್ಲಿಷ್ ಉಪನ್ಯಾಸಕಿ ಡಾ. ಜ್ಯೋತಿ ಮಾತನಾಡಿ, ಕನ್ನಡಕ್ಕಾಗಿ ಒಂದು ಸಾಹಿತ್ಯ ಸಮ್ಮೇಳನವು ಎಲ್ಲರನ್ನೂ ಒಳಗೊಳ್ಳುವಂತಹ ಮುಕ್ತ ಚರ್ಚೆಯ ವೇದಿಕೆಯಾಗಬೇಕು ಎಂಬ ಉದ್ದೇಶದಿಂದ ಸಮಾಜಮುಖಿ ಪ್ರಕಾಶನ ಕಳೆದ ವರ್ಷ ಈ ಸಮ್ಮೇಳನವನ್ನು ಆರಂಭಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಆಯೋಜಿಸಿದ್ದ ಮೊದಲ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿದ ಜನಬೆಂಬಲ ಹಾಗೂ ಕನ್ನಡಿಗರ ಪ್ರೋತ್ಸಾಹ ದೊರೆತಿದೆ ಎಂದರು.

ಸಮ್ಮೇಳನದ ಸಂಸ್ಕೃತಿ ಸಂವಾದ ವೇದಿಕೆಯಲ್ಲಿ ನೃತ್ಯ, ರಂಗವಿನ್ಯಾಸ, ರಂಗಸಂಗೀತ, ಚಿತ್ರಕಲೆ, ಅನುವಾದ ಸಾಹಿತ್ಯ, ಪಶ್ಚಿಮ ಘಟ್ಟಗಳ ಪರಿಸರ, ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವ ಕೃತಕ ಬುದ್ಧಿಮತ್ತೆ ಹಾಗೂ ಸಮಕಾಲೀನತೆಯ ಕುರಿತ ಸಂವಾದಗಳು ನಡೆಯಲಿವೆ. ಮಕ್ಕಳಲ್ಲಿ ಕನ್ನಡ ಸಾಹಿತ್ಯ ಓದುವ ಆಸಕ್ತಿ ಕಡಿಮೆಯಾಗುತ್ತಿರುವುದಕ್ಕೆ ಕಾರಣಗಳೇನು ಎಂಬ ವಿಷಯವೂ ಚರ್ಚೆಗೆ ಬರಲಿದೆ. ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಅಂಗವಾಗಿ ವಿಶೇಷ ನಮನ ಗೋಷ್ಠಿಯನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಲೇಖಕ ಲಕ್ಷ್ಮೀಕಾಂತರಾಜೇ ಅರಸು ಮಾತನಾಡಿ, ಸೃಜನಶೀಲ ವೇದಿಕೆಯಲ್ಲಿ ಜಾಗತಿಕ ವಿದ್ಯಮಾನಗಳಿಗೆ ಕನ್ನಡ ಕಾವ್ಯದ ಸ್ಪಂದನೆ, ಕಥೆಗಳಲ್ಲಿ ಕಲ್ಯಾಣ ಕರ್ನಾಟಕ, ಮಹಿಳಾ ಆತ್ಮಕಥೆಗಳು, ವಚನಕಾರ್ತಿಯರು ದಾಖಲಿಸಿದ ಅಸಮಾನತೆ, ನೆಲಮೂಲದ ಸಾಹಿತ್ಯ ರೂಪಕಗಳು, ಕನ್ನಡ ವಿಮರ್ಶೆಯ ಸಾಮಾಜಿಕ ಹಿನ್ನೆಲೆ ಹಾಗೂ ಸಾಹಿತ್ಯ ಚರಿತ್ರೆಯ ಪುನರಾವಲೋಕನ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ. ಕರಿಯಣ್ಣ ಮಾತನಾಡಿ, ಸಮ್ಮೇಳನದಲ್ಲಿ ಬಹುವಚನ ವೇದಿಕೆ, ಸಂಸ್ಕೃತಿ ಸಂವಾದ ವೇದಿಕೆ, ಸೃಜನಶೀಲ ವೇದಿಕೆ ಹಾಗೂ ಶಾಸ್ತ್ರೀಯ ವೇದಿಕೆ ಎಂಬ ನಾಲ್ಕು ವೇದಿಕೆಗಳನ್ನು ರೂಪಿಸಲಾಗಿದೆ. ಬಹುವಚನ ವೇದಿಕೆಯಲ್ಲಿ ಭಾರತೀಯ ಪ್ರಜಾಪ್ರಭುತ್ವದ ಸ್ಥಿತಿಗತಿ, ಕನ್ನಡಪರ ಹೋರಾಟಗಳ ಇಂದಿನ ಸ್ಥಿತಿ, ಕನ್ನಡದಲ್ಲಿ ಸಂಶೋಧನೆಯ ಹೊಸ ದಾರಿಗಳು, ಜೈನ ಯುಗದ ತಲೆಮಾರಿನ ತಲ್ಲಣಗಳು ಮತ್ತು ತಲ್ಲಣಗಳ ನಡುವಿನ ಭರವಸೆಗಳು, ಕೃತಕ ಬುದ್ಧಿಮತ್ತೆಯ ಸೃಜನಶೀಲ ಸಾಧ್ಯತೆಗಳು, ಭಕ್ತಿ ಮತ್ತು ಅನುಭಾವ, ಭಾಗವತೋದ್ದನ ಬದುಕು ಹಾಗೂ ಅಭಿಘಾತ ಪಠ್ಯಗಳ ಕುರಿತು ಇಂಗ್ಲಿಷ್ ಸಂವಾದಗಳು ನಡೆಯಲಿವೆ ಎಂದು ವಿವರಿಸಿದರು.

ಕನ್ನಡ ಸಾಹಿತ್ಯ, ಭಾಷೆ, ಕಲೆ ಮತ್ತು ಸಾಮಾಜಿಕ ಚಿಂತನೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಸಮ್ಮೇಳನವು ಸಾಹಿತ್ಯಾಸಕ್ತರು, ಸಂಶೋಧಕರು, ಕಲಾವಿದರು ಹಾಗೂ ಕನ್ನಡಾಭಿಮಾನಿಗಳಿಗೆ ವಿಚಾರ ವಿನಿಮಯದ ಮಹತ್ವದ ವೇದಿಕೆಯಾಗಲಿದೆ.

Leave a Reply

Your email address will not be published. Required fields are marked *