ಸಂವಿಧಾನ ದಿನಾಚರಣೆ ಅಂಗವಾಗಿ ಮಾದಕ ವಸ್ತುಗಳ ವಿರುದ್ಧ ವಿದ್ಯಾರ್ಥಿಗಳ ಬೃಹತ್ ಜಾಗೃತಿ ಜಾಥಾ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಸಂವಿಧಾನ ದಿನಾಚರಣೆ ಅಂಗವಾಗಿ ಮಾದಕ ವಸ್ತುಗಳ ವಿರುದ್ಧ ವಿದ್ಯಾರ್ಥಿಗಳ ಬೃಹತ್ ಜಾಗೃತಿ ಜಾಥಾ

ಗ್ಲೋಬಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ತುಮಕೂರಿನಲ್ಲಿ ಜಾಗೃತಿ ಕಾರ್ಯಕ್ರಮ

Tumkurnews.in

ತುಮಕೂರು: ಸಂವಿಧಾನ ದಿನಾಚರಣೆಯ ಅಂಗವಾಗಿ ಮಾದಕ ವಸ್ತುಗಳ ಬಳಕೆ, ಮೊಬೈಲ್ ವ್ಯಸನ ಸೇರಿದಂತೆ ವಿವಿಧ ಸಾಮಾಜಿಕ ಪಿಡುಗುಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಗ್ಲೋಬಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ನಗರದ ದಾನಃ ಪ್ಯಾಲೇಸ್ ಸರ್ಕಲ್‌ನಲ್ಲಿ ವಿದ್ಯಾರ್ಥಿಗಳ ಬೃಹತ್ ಜಾಗೃತಿ ಜಾಥಾ ಹಾಗೂ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗ್ಲೋಬಲ್ ಶಾಹಿನ್ ಕಾಲೇಜು ಹಾಗೂ ಗ್ಲೋಬಲ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಜಾಗೃತಿ ಜಾಥಾವು ನಗರದ ಹೇಮಾವತಿ ಕಚೇರಿ ಮುಂಭಾಗದಿಂದ ಆರಂಭಗೊಂಡು ಸದಾಶಿವನಗರದ ಮುಖ್ಯ ರಸ್ತೆಯ ಮೂಲಕ ರಿಂಗ್ ರಸ್ತೆಯ ರೈಲ್ವೆ ಸೇತುವೆ ಹಾಗೂ ಮಳೆಕೋಟೆ ರಸ್ತೆಯಲ್ಲಿ ಸಾಗಿ, ಬಳಿಕ ರಿಂಗ್ ರಸ್ತೆಯಲ್ಲಿರುವ ನೈಫ್ ಪ್ಯಾಲೇಸ್ ಸಮೀಪದ ಮಾರ್ಗವಾಗಿ ದಾನಃ ಪ್ಯಾಲೇಸ್ ಸರ್ಕಲ್ ತಲುಪಿತು.

ನಗರದ ನಾಲ್ಕು ಪ್ರಮುಖ ರಸ್ತೆಗಳು ಸೇರುವ ದಾನಃ ಪ್ಯಾಲೇಸ್ ಸರ್ಕಲ್‌ನಲ್ಲಿ ವಿವಿಧ ಮಾರ್ಗಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಒಂದೆಡೆ ಸೇರಿ ಮಾದಕ ವಸ್ತುಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಯುವಜನರ ಆರೋಗ್ಯದ ಮೇಲೆ ಬೀರುವ ಗಂಭೀರ ಪರಿಣಾಮಗಳು ಹಾಗೂ ಮೊಬೈಲ್ ವ್ಯಸನದಿಂದ ದೂರವಿರುವ ಅಗತ್ಯತೆಯ ಕುರಿತು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಾತನಾಡಿ, ಆರೋಗ್ಯಕರ ಜೀವನಶೈಲಿ, ಉತ್ತಮ ಚಿಂತನೆ ಮತ್ತು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುವ ಮಹತ್ವವನ್ನು ವಿವರಿಸಿದರು. ಯುವಜನತೆ ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾಗದೆ ಶಿಕ್ಷಣ, ಕ್ರೀಡೆ ಹಾಗೂ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶ ಸಾರಿದರು.

ಸಂವಿಧಾನ ದಿನದ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳು, ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು. ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದರ ಜೊತೆಗೆ ಮಾದಕ ವಸ್ತುಗಳಿಂದ ಮುಕ್ತವಾದ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಯುವಜನತೆ ಸಕ್ರಿಯವಾಗಿ ಕೈಜೋಡಿಸಬೇಕು ಎಂಬ ಆಶಯವನ್ನು ಕಾರ್ಯಕ್ರಮದ ಮೂಲಕ ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ಲೋಬಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ನಿರ್ದೇಶಕ ಡಾ. ಹಜರತ್ ಸಾಹೇಬ್ ನದಾಫ್, ಉಪಪ್ರಾಂಶುಪಾಲ ಗೌಸ್ ಶರೀಫ್, ಜಮೀಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಸೈಯದ್ ಬಿಲಾಲ್, ಉಪಾಧ್ಯಕ್ಷ ಮೌಲಾನಾ ಸೈಯದ್ ಖಾಲಿದ್, ಪ್ರಾಂಶುಪಾಲೆ ಆಯೇಷಾ ಜುಬೇದ ಕೌಸರ್, ತಸ್ನೀಂ ಫಾತಿಮಾ ಸೇರಿದಂತೆ ಶಾಲಾ-ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *