ಬಲಿಷ್ಠ ರಾಷ್ಟ್ರ ನಿರ್ಮಾಣದ ಶಿಲ್ಪಿಗಳಾದ ಶಿಕ್ಷಕರು: ಡಾ.ಜಿ ಪರಮೇಶ್ವರ್
Tumkurnews.in
ತುಮಕೂರು: ಬಲಿಷ್ಠ ರಾಷ್ಟ್ರ ನಿರ್ಮಾಣದ ಶಿಲ್ಪಿಗಳಾದ ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಬಹಳ ದಿನಗಳ ಬೇಡಿಕೆಯಾದ ಹಳೇ ಪಿಂಚಣಿ ಪದ್ದತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ನಗರದ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಕೃಷ್ಣನ್ ಅವರ 139ನೇ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ಪುರಸ್ಕೃತ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಪಿಂಚಣಿ ಪದ್ದತಿ ರದ್ದುಗೊಳಿಸಿ ಹಳೇ ಪಿಂಚಣಿ ಪದ್ದತಿಯನ್ನು ಜಾರಿಗೊಳಿಸುವ ಕುರಿತು ತಾವು ಮತ್ತು ಮುಖ್ಯಮಂತ್ರಿಗಳು ಈಗಾಗಲೇ ಚರ್ಚಿಸಿದ್ದು, ಸದ್ಯದಲ್ಲೇ ಈ ತೀರ್ಮಾನ ಹೊರ ಬೀಳಲಿದೆ. ಇದು ಸರ್ಕಾರದ ಬಹಳ ದೊಡ್ಡ ತೀರ್ಮಾನವಾಗಲಿದೆ ಎಂದರು.
ಹಳೇ ಪಿಂಚಣಿ ಪದ್ದತಿ ಜಾರಿಯಿಂದ ಶಿಕ್ಷಕರು, ಸರ್ಕಾರಿ ನೌಕರರು ಸೇರಿದಂತೆ ಬಹಳಷ್ಟು ಮಂದಿಗೆ ಅನುಕೂಲವಾಗಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ದೊಡ್ಡ ಹೊರೆಯೂ ಆಗಲಿದೆ ಎಂದು ಅವರು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಸಿದ್ದಪಡಿಸುವಾಗ ಶಿಕ್ಷಕರ ಸಂಘದ ಪದಾಧಿಕಾರಿಗಳು ತಮ್ಮನ್ನು ಭೇಟಿಯಾಗಿ ಓಪಿಎಸ್ ಜಾರಿಗೊಳಿಸುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ಕಾರಣಾಂತರಗಳಿಂದ ಮೂರು ವರ್ಷ ವಿಳಂಬವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು. ಆರ್ಥಿಕ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಕೂಡ ಈ ತೀರ್ಮಾನವನ್ನು ನಿಮಗಾಗಿ ತೆಗೆದುಕೊಂಡಿದ್ದೇವೆ ಎಂದರು.
ನಮ್ಮ ಸರ್ಕಾರವು ಶಿಕ್ಷಕರಿಗಾಗಿ ಅನೇಕ ತೀರ್ಮಾನಗಳನ್ನು ತೆಗೆದುಕೊಂಡಿದೆ. ನೇಮಕಾತಿ ಪ್ರಾರಂಭಿಸಿದ್ದೇವೆ. 15,000 ಸಾವಿರ ನೇಮಕಾತಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಶಿಕ್ಷಕರ ದಿನಾಚರಣೆಯು ದೇಶದಾದ್ಯಂತ ಗುರುಗಳಿಗೆ ಗೌರವ ಸಲ್ಲಿಸುವ ದಿನವಾಗಿದೆ. ಡಾ. ರಾಧಾಕೃಷ್ಣನ್ ಅವರು ತತ್ವಜ್ಞಾನಿ, ಮಹಾನ್ ಶಿಕ್ಷಕ ಹಾಗೂ ಭಾರತದ ಉಪ ರಾಷ್ಟ್ರಪತಿಯಾಗಿದ್ದರು. ವಿದ್ಯಾರ್ಥಿಗಳು ಅವರ ಹುಟ್ಟುಹಬ್ಬವನ್ನು ಆಚರಿಸಲು ಬಯಸಿದಾಗ ಈ ಗೌರವ ನನಗೆ ಅಲ್ಲ, ದೇಶದ ಪ್ರತಿಯೊಬ್ಬ ಶಿಕ್ಷಕರಿಗೂ ಸಲ್ಲಬೇಕು ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸೆ.5ರಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತವು ಇಂದು ಶೇ.80 ರಷ್ಟು ಸಾಕ್ಷರತೆ ಹೊಂದಿದ ರಾಷ್ಟ್ರವಾಗಿದೆ. ಈ ಸಾಕ್ಷರತಾ ಪ್ರಮಾಣವು ವಿವಿಧ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಗೆ ಕಾರಣವಾಗಿದೆ. ಶಿಕ್ಷಣದ ಬುನಾದಿಯೇ ಭಾರತವನ್ನು ಈ ಮಟ್ಟಕ್ಕೆ ತಂದಿದೆ ಎಂದರು.
ಭಾರತದಂತೆ ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ಗುರುವಿಗೆ ಗೌರವಿಸಿರುವ ಉದಾಹರಣೆಗಳನ್ನು ನೋಡಲು ಸಾಧ್ಯವಿಲ್ಲ. ನಮ್ಮದು ಇಂತಹ ಉದಾತ್ತ ಆದರ್ಶಗಳನ್ನು ಹೊಂದಿರುವ ಸಮಾಜ ಎಂದರು.
ಪ್ರತಿಯೊಬ್ಬರ ಬದುಕಿನಲ್ಲೂ ಕೂಡ ಒಬ್ಬ ಗುರುವಿದ್ದಾನೆ. ಆ ಗುರುವಿನಿಂದ ಕಲಿತ ಅನೇಕ ವಿಚಾರಗಳು ಅವರ ಬದುಕಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ತಿಳಿಸಿದರು.
ನಾನು ಗೊಲ್ಲಹಳ್ಳಿಯಲ್ಲಿ ಓದುವಾಗ ರಾಮಣ್ಣ ಎಂಬ ಕನ್ನಡ ಮೇಷ್ಟ್ರು ಇದ್ದರು. ಕನ್ನಡ ಪಾಠ ಮಾತ್ರ ಮಾಡಿದ್ದರೆ ಅವರನ್ನು ಓರ್ವ ಸಾಮಾನ್ಯ ಶಿಕ್ಷಕರಾಗಿ ಸೀಮಿತ ಮಾಡಬಹುದಿತ್ತು. ಅದರೆ, ಅವರು ಕಲಿಸಿದ ಅನೇಕ ವಿಚಾರಗಳನ್ನು, ಜೀವನ ಪಾಠವನ್ನು ನಾನು ನಿತ್ಯ ಸ್ಮರಿಸುತ್ತೇನೆ. ಎರಡನೇಯವರು ವಿಶ್ವವಿದ್ಯಾಲಯದಲ್ಲಿ ಕೃಷ್ಣಶಾಸ್ತ್ರಿ ಅವರು. ಒಂದು ವೇಳೆ ಇವರು ನನ್ನನ್ನು ತಿದ್ದದೆ ಹೋಗಿದ್ದರೆ, ಈ ಸ್ಥಾನದಲ್ಲಿ ನಾನು ಇರುತ್ತಿರಲಿಲ್ಲ. ನನ್ನ ಜೀವನ ಪಯಣದ ಶ್ರೇಯಸ್ಸನ್ನು ಅವರಿಗೆ ಮುಡಿಪಾಗಿಟ್ಟಿದ್ದೇನೆ ಎಂದು ತಮ್ಮ ಬದುಕಿನಲ್ಲಿ ಬಂದು ಹೋದ ಗುರುಗಳನ್ನು ಸ್ಮರಿಸಿದರು.
ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮಗೆ ತಿಳಿದ ವಿಚಾರಧಾರೆಗಳನ್ನು ಪ್ರಪಂಚದ ಮುಂದೆ ಇಟ್ಟರು. ಅಂತಾರಾಷ್ಟ್ರಿಯ ಮಟ್ಟದ ವಿಚಾರವಂತರು, ತಿಳಿದಂತವರು ರಾಧಾಕೃಷ್ಣನ್ ಅವರನ್ನು ಕೊಂಡಾಡುವುದನ್ನು ನೋಡಿದರೆ ಸಮಾಜಕ್ಕೆ ಅವರ ಕೊಡುಗೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದರು.
ಪ್ರತಿಯೊಬ್ಬ ಶಿಕ್ಷಕನು ಕೂಡ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಪಾಲಿಸಬೇಕು. ತನ್ನ ವಿದ್ಯಾರ್ಥಿಗೆ ಜೀವನದ ಮೌಲ್ಯಗಳನ್ನು ಅರ್ಥೈಸಬೇಕು, ಬದುಕಿನ ದಾರಿ ಮತ್ತು ಆತನೊಳಗಿನ ಸಾಮರ್ಥ್ಯವನ್ನು ತೋರಿಸುವುದು ಬಹಳ ಮುಖ್ಯ. ಅದಕ್ಕಾಗಿ ಶಿಕ್ಷಕರಿಗೆ ಗುರುವಿನ, ದೇವರ ಸ್ಥಾನ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಆಧುನಿಕ ಜಗತ್ತಿನಲ್ಲಿ ಜ್ಯೋತಿಬಾ ಫುಲೆ ಅವರಿಂದ ಹಿಡಿದು ಲಕ್ಷಾಂತರ ಶಿಕ್ಷಕರು ದೇಶವನ್ನು ಕಟ್ಟಿದ್ದಾರೆ. ಭಾರತ ಬಲಿಷ್ಠ ಭಾರತವಾಗಿ ತಯಾರಾಗುತ್ತಿದ್ದರೆ ಅದಕ್ಕೆ ಶಿಕ್ಷಕರು ಕಾರಣ. ಶಿಕ್ಷಕರು ಹಾಕಿಕೊಟ್ಟ ದಾರಿಯಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾಗಿರುವುದರಿಂದ ಭಾರತ ಈ ಸ್ಥಾನದಲ್ಲಿ ನಿಂತಿದೆ ಎಂದರು.
ಪ್ರತಿ ವರ್ಷ ಭಾರತ 10 ಲಕ್ಷ ಇಂಜಿನಿಯರ್ಗಳು, 10 ಲಕ್ಷ ವೈದ್ಯರನ್ನು ಉತ್ಪಾದಿಸುತ್ತಿದೆ. ಯಶಸ್ವಿ ಪದವೀಧರನ ಹಿಂದೆ ಹತ್ತಾರು ಗುರುಗಳು ನಿಂತಿದ್ದಾರೆ. ಭಾರತ ಇಷ್ಟೊಂದು ಬಲಿಷ್ಠವಾಗಿ ಬೆಳೆಯುತ್ತಿರುವುದಕ್ಕೆ ಮೂಲ ಕಾರಣ ಶಿಕ್ಷಕರು ಎಂದು ಶ್ಲಾಘಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಸಮಾಜಕ್ಕೆ ಬಹಳ ಮುಖ್ಯ. ಯುವಕರ ಆಸೆ, ಆಕಾಂಕ್ಷೆಗಳು ಬದಲಾಗಿವೆ. ಯುವಕರು ದಾರಿ ತಪ್ಪದೇ ದೇಶದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವ ಕೆಲಸ ಆಗಬೇಕು. ಯಶಸ್ಸಿಗಾಗಿ ಕವಲುದಾರಿ ಹಿಡಿಯುವಂತ ಮಾರ್ಗದರ್ಶನ ಮಾಡಬಾರದು, ಅದರಿಂದ ಯುವಕರು ದಾರಿ ತಪ್ಪುತ್ತಾರೆ ಎಂಬ ಎಚ್ಚರಿಕೆಯನ್ನು ಅವರು ನೀಡಿದರು.
ಜನರ ಸೇವೆ ಮಾಡುವುದೇ ನಮ್ಮ ಕರ್ತವ್ಯ. ಇದಕ್ಕಾಗಿಯೇ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಈ ವಿಚಾರದಲ್ಲಿ ನಾವು ಬದ್ಧರಾಗಿ ಮುಂದುವರೆಯುತ್ತೇವೆ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಶಿಕ್ಷಕರ ದಿನ ಎಂದರೆ ನಮಗೆ ವಿದ್ಯೆ ಬುದ್ಧಿ ಕಲಿಸಿ ಬದುಕಿನ ಮಾರ್ಗ ತೋರಿದ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನ. ಪ್ರತಿ ವಿದ್ಯಾರ್ಥಿಗಳ ಬಾಳಿನಲ್ಲೂ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ಒಮ್ಮೆ ಶಿಕ್ಷಕರಾದವರು ಜೀವನ ಪರ್ಯಂತ ಶಿಕ್ಷಕರಾಗಿರುತ್ತಾರೆ. ಸಮಾಜಕ್ಕೆ ಅವರು ಒಂದಲ್ಲಾ ಒಂದು ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು ಎಂದು ತಿಳಿಸಿದರು.
ಶಿಕ್ಷಕರು ದೇಶ ಕಟ್ಟುವ ದೊಡ್ಡ ಸಾಧಕರು. ಪ್ರಸ್ತುತ ದೇಶದಲ್ಲಿ ಶೇ.40 ರಿಂದ 50 ರಷ್ಟು ಯುವಕರ ಸಂಖ್ಯೆ ಇದೆ. ಈ ಯುವ ಸಮೂಹಕ್ಕೆ ದೇಶಾಭಿಮಾನ ಮೂಡಿಸುವುದು, ಉತ್ತಮ ಭವಿಷ್ಯ ರೂಪಿಸುವ ದೊಡ್ಡ ಸವಾಲು ಶಿಕ್ಷಕರ ಮುಂದಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲಾ ವಿಭಾಗದಿಂದ 18 ಮಂದಿ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜತೆಗೆ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿರುವ ಮುಖ್ಯ ಶಿಕ್ಷಕರುಗಳು, ನಿವೃತ್ತ ಶಿಕ್ಷಕರುಗಳು, ಖಾಸಗಿ ಶಾಲೆಯ ಶಿಕ್ಷಕರಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶಾಸಕ ಬಿ.ಸುರೇಶ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ಗೌಡ, ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಹಾಲನೂರು ಲೇಪಾಕ್ಷ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಘುಚಂದ್ರ, ಉಪನಿರ್ದೇಶ (ಅಭಿವೃದ್ಧಿ) ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಿ.ಜಿ. ತಿಮ್ಮೇಗೌಡ ಸೇರಿದಂತೆ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಘುಚಂದ್ರ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ ವಂದಿಸಿದರು.
ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ
What do you feel about this post?
Like
Love
Happy
Haha
Sad
