ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ
Tumkurnews
ತುಮಕೂರು: ಬಡತನದ ಕಾರಣಕ್ಕಾಗಿ ದಯಾಮರಣ ಬೇಡಿದ್ದ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಜಿಲ್ಲೆಯ ಶಿರಾದಲ್ಲಿ ಗುರುವಾರ ನಡೆದಿದೆ. ಶಿರಾ ನಗರದ ಡಿಪ್ಲೊಮಾ ಕಾಲೇಜು ಹಿಂಭಾಗದ ಆಶ್ರಯ ಬಡಾವಣೆ ನಿವಾಸಿ ರಾಬಿಯಾ(೩೫), ಈಕೆಯ ಮಕ್ಕಳಾದ ತಮನ್ನ(೧೦) ಹಾಗೂ ಸಿಮ್ರಾನ್(೫) ಮೃತ ದುರ್ದೈವಿಗಳು. ಎಲ್ಲರೂ ಈದ್ ಮಿಲಾದ್ ಸಂಭ್ರಮದಲ್ಲಿದ್ದಾಗ ಈ ತಾಯಿ, ತನ್ನಿಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ತಿನ್ನಿಸಿ, ತಾನೂ ತಿಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಹೊಸ ಮನೆಯಲ್ಲೇ ಸಾವು: ಮೃತ ಮಹಿಳೆ ಕೆಲ ತಿಂಗಳ ಹಿಂದಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಎದುರು ಕಣ್ಣೀರು ಹಾಕಿ ದಯಾಮರಣ ಬೇಡಿದ್ದಳು. ಬಡತನದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಪತಿ ಮರಣಾನಂತರ ಮಕ್ಕಳನ್ನು ಸಾಕಲು ಆಗುತ್ತಿಲ್ಲ. ಸರ್ಕಾರದಿಂದ ಮನೆ ಹಾಗೂ ಜೀವನ ನಿರ್ವಹಣೆಗೆ ಸಹಾಯ ಬೇಕು ಎಂದು ಮನವಿ ಮಾಡಿದ್ದಳು. ಬಳಿಕ ಶಿರಾ ನಗರದ ಆಶ್ರಯ ಬಡಾವಣೆಯಲ್ಲಿ ನಿವೇಶನ ನೀಡಿ ಮನೆ ಕಟ್ಟಿಸಿಕೊಡಲಾಗಿತ್ತು.
ಈ ಮೊದಲು ತುಮಕೂರಿನಲ್ಲಿ ನೆಲೆಸಿದ್ದ ರಾಬಿಯಾಯ ಮೊದಲ ಪತಿಯೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದಳು. ಶಿರಾ ನಿವಾಸಿಯಾಗಿದ್ದ ಎರಡನೇ ಪತಿ ಮರಣ ಹೊಂದಿದ್ದಾನೆ, ತುಮಕೂರಿನ ರೌಡಿ ಶೀಟರ್ ಶ್ರೀಕಾಂತ್ ಎಂಬಾತನೊಂದಿಗೆ ಕೆಲ ದಿನಗಳ ಹಿಂದಷ್ಟೇ ಮೂರನೇ ವಿವಾಹವಾಗಿದ್ದಳು. ಸರ್ಕಾರದಿಂದ ನೀಡಲಾಗಿದ್ದ ಹೊಸ ಮನೆಗೆ ನಾಲ್ಕು ದಿನಗಳ ಹಿಂದಷ್ಟೇ ಮಕ್ಕಳೊಂದಿಗೆ ಸ್ಥಳಾಂತರಗೊಂಡಿದ್ದಳು. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಶ್ರೀಕಾಂತ್ನ ಪ್ರಚೋದನೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ನೀಡಿದ ದೂರಿನ ಮೇರೆಗೆ ಶ್ರೀಕಾಂತ್ನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ತಿಳಿಸಿದ್ದಾರೆ. ಸರ್ಕಾರದ ನೆರವಿನ ನಂತರವೂ ಮಹಿಳೆ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದು ದುರಂತ.
What do you feel about this post?
Like
Love
Happy
Haha
Sad
