ತುಮಕೂರು: ಬಿಜೆಪಿ ಕಾರ್ಯಕರ್ತರಿಂದ ಡಿಸಿ ಕಚೇರಿಗೆ ಮುತ್ತಿಗೆ ಯತ್ನ: ಹಲವರು ಪೊಲೀಸ್ ವಶಕ್ಕೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ರಾಜಕೀಯ

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ

ಬಹುಕೋಟಿ ಹಗರಣದ ಆರೋಪಿ ಸಚಿವರ ವಜಾಕ್ಕೆ ಬಿಜೆಪಿ ಒತ್ತಾಯ

Tumkur news
ತುಮಕೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ ರಾಜೀನಾಮೆ ನಿಡಬೇಕು ಎಂದು ಒತ್ತಾಯಿಸಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಸೋಮವಾರ ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಬಿಜೆಪಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಮುತ್ತಿಗೆ ವಿಫಲಗೊಳಿಸಿರು.
ಇದಕ್ಕೂ ಮೊದಲು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಸಮೀಪ ಕೋಟೆ ಆಂಜನೇಯಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡರು. ಅಲ್ಲಿಂದ ಬಿಜೆಪಿ ಬಾವುಟ ಪ್ರದರ್ಶಿಸುತ್ತಾ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಬಂದು ಧರಣಿ ಆರಂಭಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ, ಪರಿಶಿಷ್ಟ ಜಾತಿ ಸಮಾಜದ ಬಡವರ ಕಲ್ಯಾಣಕ್ಕೆ ಮೀಸಲಾಗಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು ಖಾಸಗಿಯವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಅಕ್ರಮ ಮಾಡಲಾಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ಆಗ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅಲ್ಲದೆ ಜೈಲಿಗೂ ಹೋಗಿ ಬೇಲ್ ಮೇಲೆ ಹೊರಬಂದಿದ್ದಾರೆ. ಆದರೆ ಕಳಂಕ ಹೊತ್ತಿರುವ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಖಂಡನೀಯ, ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ 94 ಕೋಟಿ ರೂ. ಗಳನ್ನು ಖಾಸಗಿಯವರಿಗೆ ವರ್ಗಾವಣೆ ಮಾಡಿರುವ ಪ್ರಕರಣ ಸಿಬಿಐ ತನಿಖೆ ನಡೆಸುತ್ತಿದೆ. ವಿವಿಧ ಖಾತೆಗೆ ವರ್ಗಾವಣೆಯಾದ ಹಣವನ್ನು ತೆಲಂಗಾಣ ಹಾಗೂ ರಾಜ್ಯದ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಸಚಿವ ನಾಗೇಂದ್ರ ಅವರು ಪ್ರಕರಣದ ಆರೋಪಿಯಾಗಿದ್ದಾರೆ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು ಎಂದು ಬಿಜೆಪಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರೂ. ಅವ್ಯವಹಾರದ ಪ್ರಮುಖ ಆರೋಪಿ ಎಂಬ ಆರೋಪದಲ್ಲಿ ನಾಗೇಂದ್ರ ಅವರು ಜೈಲಿಗೆ ಹೋಗಿದ್ದರು. ಅವರನ್ನು ಹಿಂದೆ ಸಚಿವ ಸ್ಥಾನದಿಂದ ಕಿತ್ತುಹಾಕಲಾಗಿತ್ತು. ಆದರೂ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತೆ ನಾಗೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡಿರುವುದು ಖಂಡನೀಯ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡುವವರೆಗೂ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ನಗರ ಬಿಜೆಪಿ ಅಧ್ಯಕ್ಷ ಧನುಷ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ತೆಲಂಗಾಣ, ಕರ್ನಾಟಕ ಚುನಾವಣೆಗೆ ಬಳಸಿಕೊಂಡಿದ್ದು ಖಂಡನೀಯ. ವಾಲ್ಮೀಕಿ ಸಮಾಜಕ್ಕೆ ಮೀಸಲಾಗಿದ್ದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿ ಸಮಾಜದ ಬಡವರಿಗೆ ಅನ್ಯಾಯ ಮಾಡಿದ ಸಚಿವ ನಾಗೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಆಗ್ರಹಿಸಿದರು.
ಮುಖಂಡರಾದ ಎಸ್.ಡಿ. ದಿಲೀಪ್‌ಕುಮಾರ್, ನಂಜೇಗೌಡ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು, ಉಪಾಧ್ಯಕ್ಷರಾದ ನಾಗರತ್ನಮ್ಮ, ಕಾರ್ಯದರ್ಶಿ ಹೆಚ್.ಎಂ. ರವೀಶಯ್ಯ, ಕೆ. ವೇದಮೂರ್ತಿ, ಖಜಾಂಚಿ ಗಣೇಶ್‌ಪ್ರಸಾದ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ವೈ.ಹೆಚ್. ರವಿಚಂದ್ರ, ನಗರ ಪ್ರಧಾನ ಕಾರ್ಯದರ್ಶಿಗಳಾದ ವಿರೂಪಾಕ್ಷಪ್ಪ, ಹನುಮಂತರಾಜು, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಾಜಶೇಖರ್, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ವಸಂತಮ್ಮ, ಮುಖಂಡರಾದ ನಂದೀಶ್, ಬಿ.ಜಿ. ಕೃಷ್ಣಪ್ಪ, ರುದ್ರೇಶ್, ಬನಶಂಕರಿಬಾಬು, ಬಂಬು ಮೋಹನ್, ರಾಕೇಶ್, ಶಂಕರಣ್ಣ, ನಿಟ್ಟೂರು ಪ್ರಕಾಶ್, ವಿನಯ್ ಜೈನ್, ಪ್ರೀತಂ ಜೈನ್, ಹೊಳಕಲ್ಲು ಆಂಜನಪ್ಪ, ಪುರುಷೋತ್ತಮ್, ನಿಸರ್ಗ ರಮೇಶ್, ರವಿ ಚೆಂಗಾವಿ, ಗಂಗೇಶ್ ಹದ್ದಿನಕಲ್ಲು, ಹೆಚ್. ರಾಯಪ್ಪ. ಸಿದ್ಧಲಿಂಗಯ್ಯ, ವೆಂಕಟೇಶಾಚಾರ್, ಅಶೋಕ್, ಮೂರ್ತಿ, ಗಂಗಾಧರ್, ರಾಜಶೇಖರ್ ಮೊದಲಾದವರು ಭಾಗವಹಿಸಿದ್ದರು.
ನಂತರ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ ಬಿಜೆಪಿ ಮುಖಂಡರನ್ನು ಪೊಲೀಸರು ತಡೆದು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *