ಕೆಪಿಎಸ್ಸಿ ಹಗರಣ: ಬಸವರಾಜ್ ಕನ್ನಾಳೆ ವಿರುದ್ಧ ಎಬಿವಿಪಿ ಪ್ರತಿಭಟನೆ
ತುಮಕೂರು ವಿವಿ ವಿಸಿ ಕಚೇರಿ ಮುಂದೆ ಪ್ರತಿಭಟನೆ; ಕನ್ನಾಳೆ ವಜಾಗೆ ಆಗ್ರಹ
Tumkurnews.in
ತುಮಕೂರು: ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಯಲ್ಲಿ ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ್ ಕನ್ನಾಳೆ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಕಚೇರಿ ಮುಂಭಾಗ ಎಬಿವಿಪಿ ವಿಭಾಗ ಸಂಚಾಲಕ ಎಚ್.ಆರ್. ಗುರುಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಕಾರ್ಯಕರ್ತರು ಬಸವರಾಜ್ ಕನ್ನಾಳೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕನ್ನಾಳೆ ಅವರ ಭಾವಚಿತ್ರವನ್ನು ದಹಿಸಿ ಪ್ರತಿಭಟನೆ ನಡೆಸಿದರು.
ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಬಸವರಾಜ್ ಕನ್ನಾಳೆ ಅವರ ಹೆಸರು ಕೇಳಿ ಬಂದಿದೆ. ಇಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯೊಬ್ಬರು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮುಂದುವರಿಯುವುದು ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತರುವ ವಿಚಾರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಸವರಾಜ್ ಕನ್ನಾಳೆ ಅವರನ್ನು ಕೂಡಲೇ ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕು. ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಎಬಿವಿಪಿ, ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರನ್ನು ಒತ್ತಾಯಿಸಿತು. ಅಲ್ಲದೆ, ಬಸವರಾಜ್ ಕನ್ನಾಳೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದ ಅವಧಿಯಲ್ಲಿ ನಡೆದಿರುವ ಸಾಧ್ಯತೆಯಿರುವ ಅಕ್ರಮಗಳು ಮತ್ತು ಅವ್ಯವಹಾರಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿಂಡಿಕೇಟ್ ಸಭೆ ಕರೆದು ಬಸವರಾಜ್ ಕನ್ನಾಳೆ ಅವರನ್ನು ಸದಸ್ಯತ್ವದಿಂದ ವಜಾಗೊಳಿಸುವ ಕುರಿತು ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ತುಮಕೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ನಾಗಭೂಷಣ್, ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ವಿಭಾಗ ಸಂಚಾಲಕ ಎಚ್.ಆರ್. ಗುರುಪ್ರಸಾದ್, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಯಮುನಾ, ನಗರ ಸಂಘಟನಾ ಕಾರ್ಯದರ್ಶಿ ಸಮನ್ವಿತ್ ಕೆ., ಕಾರ್ಯಕರ್ತರಾದ ರಂಗನಾಥ್ ಜೆ.ಬಿ., ಅಪ್ಪು, ಗಣಪತಿ, ಚಿರಂಜೀವಿ, ಪ್ರಶಾಂತ್, ಶರಣ್, ಮನೋಜ್, ಅಭಿಷೇಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತುಮಕೂರು: ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ: ಪಾಲಿಕೆ ಆಯುಕ್ತೆ ಪರಿಶೀಲನೆ
What do you feel about this post?
Like
Love
Happy
Haha
Sad
