‘ಯಡಿಯೂರಪ್ಪನವರನ್ನು ಏಕವಚನದಲ್ಲಿ ಟೀಕಿಸಿದರೆ ಜನರೂ ಮೆಚ್ಚುವುದಿಲ್ಲ, ದೇವರೂ ಮೆಚ್ಚುವುದಿಲ್ಲ’
ಜೆ.ಸಿ. ಮಾಧುಸ್ವಾಮಿ ಹೇಳಿಕೆಗಳಿಗೆ ಶಾಸಕ ಜ್ಯೋತಿಗಣೇಶ್ ಪ್ರತಿಕ್ರಿಯೆ
Tumkurnews.in
ತುಮಕೂರು: ಹಿರಿಯರು ಹಾಗೂ ಸಂಸದೀಯ ಪಟು ಎಂದು ಹೆಸರಾದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದನ್ನು ಜನರೂ ಮೆಚ್ಚುವುದಿಲ್ಲ, ದೇವರೂ ಮೆಚ್ಚುವುದಿಲ್ಲ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ಜೆ.ಸಿ. ಮಾಧುಸ್ವಾಮಿಯವರು ಇತ್ತೀಚೆಗೆ ಬಿಜೆಪಿ ನಾಯಕರನ್ನು ಟೀಕಿಸಿ ಮಾತನಾಡಿರುವ ಬಗ್ಗೆ ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಶಾಸಕರು, ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿಯವರು ತಳಮಟ್ಟದಿಂದ ಬೆಳೆದು ಬಂದಿರುವ ಹಿರಿಯ ನಾಯಕರು ಹಾಗೂ ಉತ್ತಮ ಸಂಸದೀಯ ಪಟು ಎಂದು ಹೆಸರಾದವರು. ಆದರೆ, ಯಡಿಯೂರಪ್ಪನವರನ್ನು ಏಕವಚನದಲ್ಲಿ ಟೀಕಿಸಿರುವುದು ಪಕ್ಷದ ಕಾರ್ಯಕರ್ತರಿಗೆ ಹಾಗೂ ಯಡಿಯೂರಪ್ಪನವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ ಎಂದರು.
ಮಾಧುಸ್ವಾಮಿಯವರು ಶಾಸಕರಾಗಿ, ಸಚಿವರಾಗಲು ಯಡಿಯೂರಪ್ಪನವರ ಸಹಕಾರವೂ ಇದೆ ಎಂಬುದನ್ನು ಮರೆಯಬಾರದು. ನಾನಾಗ ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿದ್ದೆ. ಆಗ ಏನೇನು ಬೆಳವಣಿಗೆಗಳಾದವು ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಉನ್ನತ ಮಟ್ಟಕ್ಕೆ ಏರಲು ಸಹಾಯ ಮಾಡಿದವರನ್ನು ಸ್ಮರಿಸಬೇಕು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಅವರೊಂದಿಗೆ ಆರು ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದ ಜಿಲ್ಲಾಧ್ಯಕ್ಷರಾಗಿ ಪಕ್ಷದ ಹಾಗೂ ಪಕ್ಷದ ಅಭ್ಯರ್ಥಿಗಳ ಪರವಾಗಿ ತಮ್ಮ ಹೊಣೆಗಾರಿಕೆಯನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ಜ್ಯೋತಿಗಣೇಶ್ ಹೇಳಿದರು.
