ತುಮಕೂರಿನ ರೈಲು ನಿಲ್ದಾಣ ರಸ್ತೆ ಸ್ಮಾರ್ಟ್ ಆಗುತ್ತಿದೆ

1 min read

ತುಮಕೂರು,(ಜೂ.24) tumkurnews.in

ಬಿಎಚ್ ರಸ್ತೆಗೆ ಪರ್ಯಾಯವಾಗಿರುವ ರೈಲ್ವೆ ಸ್ಟೇಷನ್ ರಸ್ತೆಯನ್ನು ಸ್ಮಾರ್ಟ್‍ಸಿಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು.
ಸಿಎಸ್‍ಐ ಬಡಾವಣೆ, ವಿದ್ಯಾನಿಕೇತನ ಶಾಲೆ, ಪದವಿ ಕಾಲೇಜು, ಹಾಸ್ಟೆಲ್‍ಗಳಿರುವ
ನಗರದ ರೈಲ್ವೆಸ್ಟೇಷನ್ ರಸ್ತೆಯ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಬಿ.ಎಚ್.ರಸ್ತೆಯ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಿಷ್ಕಿಂದೆಯಾಗಿದ್ದ ಈ ರಸ್ತೆಯನ್ನು ಅಗಲೀಕರಣ ಮಾಡಲು ಇಲ್ಲಿನ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಅಗಲೀಕರಣಕ್ಕೆ ಸಹಕಾರ ನೀಡಿದ್ದಾರೆ ಎಂದರು.
ರೈಲ್ವೆ ಸ್ಟೇಷನ್‍ನಿಂದ ವಿದ್ಯಾನಿಕೇತನ ಶಾಲೆವರೆಗೆ ದ್ವಿಪಥ ರಸ್ತೆ ನಂತರ ಚರ್ತುಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದರಿಂದ ಬಿ.ಎಚ್.ರಸ್ತೆಯ ಮೇಲಿನ ಒತ್ತಡ ಶೇ.40ರಷ್ಟು ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ಮಾರ್ಟ್‍ಸಿಟಿ ಮೂಲಕ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ತುಮಕೂರು ನಗರದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
15ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತನಾಡಿ, 30 ವರ್ಷಗಳಿಂದ ಅಭಿವೃದ್ಧಿ ಕಾಣದ ಈ ರಸ್ತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ನಾಲ್ಕೈದು ವಾರ್ಡ್‌ ಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅತ್ಯುತ್ತಮವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.ಇದರಿಂದ ಈ ಭಾಗದಲ್ಲಿರುವ ಶಾಲಾ ಕಾಲೇಜುಗಳು, ಆಸ್ಪತ್ರೆ, ಹಾಸ್ಟೆಲ್‍ಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ರೈಲ್ವೆ ಸ್ಟೇಷನ್ ರಸ್ತೆಯನ್ನು ಮಾದರಿಯಾಗಿ ರೂಪಿಸುವ ದೃಷ್ಠಿಯಿಂದ ಕಾಮಗಾರಿಯನ್ನು ನಡೆಸುತ್ತಿದ್ದು, ರಾಧಾಕೃಷ್ಣ ರಸ್ತೆಯಿಂದ ಟೌನ್‍ಹಾಲ್ ರಸ್ತೆವರೆಗೆ ಇದು ಸಂಪರ್ಕ ಕಲ್ಪಿಸಲಿದೆ. ಈ ರಸ್ತೆಯಲ್ಲಿಯೇ ಸೈಕಲ್ ಟ್ರ್ಯಾಕ್, ವೆಂಡರ್ ಜೋನ್, ಆಟೋ ಸ್ಟ್ಯಾಂಡ್ ಮತ್ತು ಬೈಕ್ ಪಾರ್ಕಿಂಗ್ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡಲಾಗುತ್ತಿದೆ, ಇದಕ್ಕೆ ಸಹಕರಿಸಿದ ಸಿಎಸ್‍ಐ ಬಡಾವಣೆ ನಿವಾಸಿಗಳಿಗೂ ಹಾಗೂ ಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಧನ್ಯವಾದಗಳು ಎಂದರು.
ಈ ವೇಳೆ ಎಂಜನಿಯರ್ ಗಳಾದ ಅಶೋಕ್, ರಶ್ಮಿ, ರವಿವರ್ಮಕುಮಾರ್ ಮತ್ತು ಎಸ್‍ಡಿಎಲ್ ಅಶೋಕ್ ಸ್ಥಳೀಯರಾದ ನಾಗರಾಜಪ್ಪ, ರವೀಶ್ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಸ್ಮಾರ್ಟ್‍ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours