ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಧೈರ್ಯವಾಗಿ ಕಳಿಸಿ; ಶಾಸಕ ಗೌರಿಶಂಕರ್ ಮನವಿ

1 min read

ತುಮಕೂರು,ಜೂ.24 tumkurnews.in

ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ರಾಜ್ಯದ ಯಾವ ಕ್ಷೇತ್ರದಲ್ಲೂ ಕೈಗೊಳ್ಳದಂತಹ ಮುಂಜಾಗ್ರತಾ ಕ್ರಮಗಳನ್ನು ಗ್ರಾಮಾಂತರ ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.

ತಾಲ್ಲೂಕಿನ ನಾಗವಲ್ಲಿ ಹೈಸ್ಕೂಲ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಟಚ್‍ಲೆಸ್ ಸ್ಯಾನಿಟೈಸರ್ ಡಿಸ್‍ಪೆನ್ಸರ್, ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಹಾಯಕಿಯರು, ಸ್ವಯಂ ಸೇವಕರು, ಪೊಲೀಸರು ಇರುತ್ತಾರೆ. ಒಂದಲ್ಲ, ಎರಡಲ್ಲ, ಮೂರು ಸಲ ತಪಾಸಣೆ ನಡೆಸಿ ಮಕ್ಕಳು ಪರೀಕ್ಷೆ ಬರೆಯುವಂತೆ ಮುಂಜಾಗ್ರತೆ ವಹಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಮುಖವಾದ ಘಟ್ಟ, ಆದ್ದರಿಂದ ಪೋಷಕರು
ಮಕ್ಕಳನ್ನು ತಪ್ಪದೇ ಪರೀಕ್ಷೆಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಗೆ ಬರುವ 13 ಪರೀಕ್ಷಾ ಕೇಂದ್ರಗಳಲ್ಲಿ 4531 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಬಸ್ ವ್ಯವಸ್ಥೆ:
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕೆಎಸ್‍ಆರ್ ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ, 35 ಖಾಸಗಿ ಬಸ್‍ಗಳನ್ನು ಬಳಸಿಕೊಳ್ಳಲಾಗಿದ್ದು, 577 ಮಕ್ಕಳು ಪರೀಕ್ಷಾ ಕೇಂದ್ರಗಳಿಗೆ ಬರಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಎಲ್ಲಾ ಬಸ್‍ಗಳಿಗೆ ಹಾಗೂ ಕೊಠಡಿಗಳಿಗೆ ಸ್ಯಾನಿಟೈಸೇಷನ್ ಮಾಡಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಥರ್ಮಲ್ ಸ್ಕ್ರೀನಿಂಗ್:
13 ಪರೀಕ್ಷಾ ಕೇಂದ್ರಗಳಿಗೂ ವಿದ್ಯಾರ್ಥಿಗಳ ಆರೋಗ್ಯ ದೃಷ್ಠಿಯಿಂದ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸಲು 20 ಥರ್ಮಲ್ ಸ್ಕ್ರೀನಿಂಗ್ ಕೊಡಿಸಲು ಸಿದ್ದ, ಆರೋಗ್ಯ ಸಹಾಯಕಿಯರು ತಪಾಸಣೆ ನಡೆಸಲಿದ್ದಾರೆ. ಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರದಂತಹ ಲಕ್ಷಣಗಳೂ ಕಂಡು ಬಂದರೆ ಅಂತಹ ವಿದ್ಯಾರ್ಥಿಗಳನ್ನು ಪ್ರತೀ ಕೇಂದ್ರದಲ್ಲಿ ಮೀಸಲಿರಿಸಿರುವ ಎರಡು ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸ್ಯಾನಿಟೈಸರ್ ವಿತರಣೆ:
ಗ್ರಾಮಾಂತರದ ಸಿದ್ಧಗಂಗಾ ಮಠದ 5 ಪರೀಕ್ಷಾ ಕೇಂದ್ರಗಳಿಗೆ ನಾಗವಲ್ಲಿ ಕೆಪಿಎಸ್ ಶಾಲೆ, ಸಿದ್ಧಾರ್ಥ ನಗರ ಸಿದ್ಧಾರ್ಥ ಪ್ರೌಢಶಾಲೆ, ಬೆಳ್ಳಾವಿ ಕೆಪಿಎಸ್, ಹೊನ್ನುಡಿಕೆ ಸ್ವರ್ಣಾಂಬ, ಹೆಬ್ಬೂರು ಗಣಪತಿ, ಗೂಳೂರು ಗಣೇಶ, ಊರುಕೆರೆ ಜಿಜೆಸಿ, ಊರ್ಡಿಗೆರೆ ಸೆಂಟ್ರಲ್ ಪ್ರೌಢಶಾಲೆ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ 30 ಟಚ್‍ಲೆಸ್ ಸ್ಯಾನಿಟೈಸರ್ ಡಿಸ್‍ಪೆನ್ಸರ್ ಯಂತ್ರ, 1 ಸಾವಿರ ಲೀ. ಸ್ಯಾನಿಟೈಸರ್ ಮತ್ತು 10 ಸಾವಿರ ಮಾಸ್ಕ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಎಸ್ಸಿ ಘಟಕದ ಅಧ್ಯಕ್ಷ ಬೆಳಗುಂಬ ವೆಂಕಟೇಶ್, ಮುಖಂಡರಾದ ನರುಗನಹಳ್ಳಿ ವಿಜಯ್‍ಕುಮಾರ್, ತಾಪಂ ಸದಸ್ಯರಾದ ದೀಪು, ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಮಾಜಿ ಉಪಮೇಯರ್ ವೆಂಕಟೇಶ್‍ಗೌಡ, ಹೆಬ್ಬೂರು ಜೆಡಿಎಸ್ ಅಧ್ಯಕ್ಷ ವೈ.ಟಿ.ನಾಗರಾಜ್, ಗೂಳೂರು ಘಟಕದ ಅಧ್ಯಕ್ಷ ಪಾಲನೇತ್ರಯ್ಯ, ಶಶಿ, ಕುಮಾರ್, ವಿಜಯ್‍ಕುಮಾರ್, ಗ್ರೀನ್ ಪಿಜೆಕ್ಟ್ಸ್ ಸಂಸ್ಥೆಯ ಮಧುಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯ್ಕ್, ಗ್ರಾಪಂ ಪಿಡಿಒ ರವಿಕುಮಾರ್ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಸ್ಥರು, ಜೆಡಿಎಸ್ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಪಂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours