ರಾಗಿ ಖರೀದಿಗೆ ಎರಡು ಷರತ್ತು ವಿಧಿಸಿದ ಸರ್ಕಾರ; ಇಂದಿನಿಂದ ನೋಂದಣಿ ಆರಂಭ

1 min read

Tumkurnews
ತುಮಕೂರು; ಜಿಲ್ಲೆಯಲ್ಲಿ 2022-23ನೇ ಮುಂಗಾರು ಋತುವಿನ ಅವಧಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಇಂದಿನಿಂದ(ಡಿ.15) ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ರಾಗಿ ಖರೀದಿಗೆ ಎರಡು ಷರತ್ತುಗಳನ್ನು ವಿಧಿಸಲಾಗಿದೆ. ರೈತರು ವಿನಾಕಾರಣ ಖರೀದಿ ಕೇಂದ್ರಗಳಿಗೆ ಅಲೆದಾಡದೇ ಸರ್ಕಾರ ವಿಧಿಸಿರುವ ಷರತ್ತುಗಳನ್ನು ತಿಳಿದುಕೊಂಡು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಖರೀದಿ ಕೇಂದ್ರಗಳತ್ತ ಸುಳಿಯುವುದು ಉತ್ತಮವಾಗಿದೆ.
ಐ.ಡಿ ಕಡ್ಡಾಯ; ರೈತರು ನೋಂದಣಿಯನ್ನು ಆಯಾ ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಮಾಡಿಕೊಳ್ಳಬೇಕಾಗುತ್ತದೆ. ಕೃಷಿ ಇಲಾಖೆ ನೀಡಿರುವ ಫ್ರೂಟ್ ಐಡಿಯನ್ನು ಕಡ್ಡಾಯವಾಗಿ ಹಾಜರುಪಡಿಸಿ ನೋಂದಾಯಿಸಿಕೊಳ್ಳಬೇಕು. ಫ್ರೂಟ್ ಐ.ಡಿಯಲ್ಲಿ ನೋಂದಣಿಯಾದ ರೈತರು ಮಾತ್ರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಅವಕಾಶವಿದೆ.
ಗುಣಮಟ್ಟ ನಿಗದಿ; ರಾಗಿ ಖರೀದಿಗೆ ಸರ್ಕಾರ ಗುಣಮಟ್ಟ ನಿಗದಿಪಡಿಸಿದೆ. ಸರ್ಕಾರ ನಿಗದಿಪಡಿಸಿದ ಮಾನದಂಡವನ್ನು ಅನುಸರಿಸಿ ಎಫ್.ಎ.ಕ್ಯೂ. ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿ ಮಾಡಲಾಗುತ್ತದೆ. ಕಳಪೆ ಗುಣಮಟ್ಟದ ರಾಗಿ ಖರೀದಿಯಾದರೆ ಸಂಬಂಧಿಸಿದ ಖರೀದಿ ಅಧಿಕಾರಿ ಮತ್ತು ಕೃಷಿ ಇಲಾಖೆಯ ಗ್ರೇಟರ್‌ಗಳನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ಈಗಾಗಲೇ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಈ ಎರಡು ಷರತ್ತುಗಳನ್ನು ರೈತರು ಗಮನಿಸಬೇಕಿದೆ.
ಖರೀದಿ ಯಾವಾಗಿನಿಂದ?; ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯನ್ನು ಜನವರಿ 1 ರಿಂದ ಪ್ರಾರಂಭಿಸಲಾಗುತ್ತದೆ. ಸರ್ಕಾರದಿಂದ ಪ್ರತಿ ಕ್ವಿಂಟಾಲ್ ರಾಗಿಗೆ 3578 ರೂ.ಗಳ ಖರೀದಿ ದರವನ್ನು ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ ಕನಿಷ್ಠ 10 ಕ್ವಿಂಟಾಲ್‍ನಂತೆ ಗರಿಷ್ಟ 20 ಕ್ವಿಂಟಾಲ್‍ವರೆಗೆ ಮಾತ್ರ ರಾಗಿಯನ್ನು ಖರೀದಿಸಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ರಾಗಿಯನ್ನು ಖರೀದಿಸುವುದಿಲ್ಲ.
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿ ಬೋಗಸ್ ಗ್ರೇಡಿಂಗ್, ಮತ್ತಿತರ ಲೋಪವೆಸಗುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆಯಿಂದ ರಾಗಿ ಖರೀದಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಎಷ್ಟು ಖರೀದಿ ಕೇಂದ್ರ; ಜಿಲ್ಲೆಯ ಪಾವಗಡ ಹಾಗೂ ಕೊರಟಗೆರೆ ತಾಲೂಕುಗಳನ್ನು ಹೊರತುಪಡಿಸಿ ಕುಣಿಗಲ್ ತಾಲ್ಲೂಕಿನಲ್ಲಿ 2, ತಿಪಟೂರು-2 ಹಾಗೂ ತುರುವೇಕೆರೆ, ಹುಳಿಯಾರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಮಧುಗಿರಿ, ತುಮಕೂರು, ಶಿರಾ ತಾಲ್ಲೂಕುಗಳಲ್ಲಿ ತಲಾ 1 ಖರೀದಿ ಕೇಂದ್ರ ಸೇರಿದಂತೆ ಒಟ್ಟು 11 ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ.
ಸೌಲಭ್ಯ ಕಲ್ಪಿಸಬೇಕು; ಖರೀದಿ ಕೇಂದ್ರಗಳಿಗೆ ರಾಗಿ ಮಾರಾಟ ಮಾಡಲು ಬರುವ ರೈತರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಲಾಗುತ್ತಿದೆ.
ಖರೀದಿ ಎಷ್ಟಾಗಿತ್ತು‌?; ಜಿಲ್ಲೆಯಲ್ಲಿ ಕಳೆದ 2021-22ನೇ ಸಾಲಿನಲ್ಲಿ 49,634 ರೈತರಿಂದ 7,30,671 ಕ್ವಿಂಟಾಲ್ ರಾಗಿ ಖರೀದಿಯಾಗಿದ್ದು, ಕೃಷಿ ಇಲಾಖೆಯ ಮಾಹಿತಿಯನ್ವಯ ಈ ಸಾಲಿನಲ್ಲಿ 2.73ಲಕ್ಷ ಮೆ.ಟನ್ ರಾಗಿ ಖರೀದಿಗೆ ಬರಬಹುದೆಂದು ಅಂದಾಜಿಸಲಾಗಿದೆ.
ಸಮಿತಿ ರಚನೆ; ಆಯಾ ತಾಲ್ಲೂಕು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಎಪಿಎಂಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಂದಾಯ, ಕೃಷಿ ಇಲಾಖೆ ಸಿಬ್ಬಂದಿಗಳನ್ನೊಳಗೊಂಡ ತಾಲ್ಲೂಕು ಮಟ್ಟದ ಸಮಿತಿ ರಚಿಸಲಾಗಿದ್ದು, ಸಮಿತಿಯು ರೈತರ ನೋಂದಣಿ ಕೇಂದ್ರ ಮತ್ತು ರಾಗಿ ಕೇಂದ್ರಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಖರೀದಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವಂತೆ ಮೇಲ್ವಿಚಾರಣೆ ಮಾಡಬೇಕಿದೆ. ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ರೈತರಿಂದ ನೇರವಾಗಿ ರಾಗಿ ಖರೀದಿಸಬೇಕೆಂದು ಸರ್ಕಾರದ ಸೂಚನೆ ಇದೆ.
ಬೆಂಬಲ ಬೆಲೆ ಹೆಚ್ಚಳ; ಸರ್ಕಾರವು ಪ್ರಸಕ್ತ ಸಾಲಿನಲ್ಲಿ ರಾಗಿ ಖರೀದಿಗೆ ಪ್ರತಿ ಕ್ವಿಂಟಾಲ್‍ಗೆ 3578 ರೂ.ಗಳ ದರವನ್ನು ನಿಗದಿಪಡಿಸಲಾಗಿದೆ. ಇದರಿಂದ ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷದ ರಾಗಿ ಖರೀದಿ ದರ 201 ರೂ.ಗಳಷ್ಟು ಹೆಚ್ಚಳವಾದಂತಾಗಿದೆ.

About The Author

You May Also Like

More From Author

+ There are no comments

Add yours