ಮಲೇರಿಯಾ; ಸೂಕ್ತ ಚಿಕಿತ್ಸೆಯಿಂದ ಗುಣಮುಖ

1 min read

 

ಮಲೇರಿಯಾ; ಸೂಕ್ತ ಚಿಕಿತ್ಸೆಯಿಂದ ಗುಣಮುಖ

Tumkurnews
ತುಮಕೂರು: ಮಲೇರಿಯಾ ರೋಗ ಕಂಡು ಬಂದ ಕೂಡಲೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ರೋಗದಿಂದ ಗುಣಮುಖ ಹೊಂದಬಹುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮಂಗಳವಾರ ನಗರದ ಪಾಲಿಕೆ ಆವರಣದಿಂದ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೋಂಕಿತ ಹೆಣ್ಣು ಅನಾಫಿಲೀಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಹರಡಲಿದೆ ಎಂದರು.

ಮಲೇರಿಯಾ ರೋಗದಿಂದ ನಮ್ಮನ್ನು ಮತ್ತು ನಮ್ಮ ಕುಟುಂಬದವರನ್ನು ರಕ್ಷಿಸಿಕೊಳ್ಳಬೇಕು. ಚಳಿ-ನಡುಕ, ಜ್ವರ, ಬೆವರುವಿಕೆಯು ಮಲೇರಿಯಾ ರೋಗದ ಲಕ್ಷಣಗಳಾಗಿದ್ದು, ರೋಗ ಲಕ್ಷಣ ಕಂಡು ಬಂದ ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಬೇಕು. ರೋಗದ ಶೀಘ್ರ ಪತ್ತೆ ಸಂಪೂರ್ಣ ಚಿಕಿತ್ಸೆಯಿಂದ ಮಲೇರಿಯಾ ಗುಣಮುಖವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಮಲೇರಿಯಾ ಅಧಿಕಾರಿ ಡಾ.ಬಿ.ಎಂ. ಚಂದ್ರಶೇಖರ್ ಮಾತನಾಡಿ, ಪ್ರತೀ ವರ್ಷ ಏಪ್ರಿಲ್ 25ರಂದು ಆಚರಿಸಲಾಗುವ ಮಲೇರಿಯಾ ದಿನವನ್ನು ಈ ಬಾರಿ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗುವುದರಿಂದ ನೀರಿನ ಸಂಗ್ರಹವನ್ನು ಭದ್ರವಾಗಿ ಮುಚ್ಚಿಡಬೇಕು. ಮಲೇರಿಯಾ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೊಳ್ಳೆ ಪರದೆ, ಕಿಟಕಿಗಳಿಗೆ ಜಾಲರಿ ಅಳವಡಿಕೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಜಾಥಾ ಕಾರ್ಯಕ್ರಮವು ನಗರದ ಟೌನ್‍ಹಾಲ್ ವೃತ್ತದಿಂದ ಅಶೋಕ ರಸ್ತೆ, ಪಾಲಿಕೆ, ಡಿಹೆಚ್‍ಓ ಕಚೇರಿವರೆಗೂ ಸಾಗಿ ಮಲೇರಿಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿತು.
ಈ ಸಂದರ್ಭದಲ್ಲಿ ಕೀಟಶಾಸ್ತ್ರಜ್ಞ ಸಿದ್ದಪ್ಪಸ್ವಾಮಿ, ಆರೋಗ್ಯ ಮೇಲ್ವಿಚಾರಣಾಧಿಕಾರಿ ಲಕ್ಷ್ಮಿಕಾಂತಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗೇಶ್, ಸತೀಶ್, ಮಂಜೇಗೌಡ, ಚಂದ್ರಶೇಖರ್, ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಜಿಲ್ಲಾ ಶುಶ್ರೂಷಕ ತರಬೇತಿ ಕೇಂದ್ರದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಆಶಾ, ಮಹಿಳಾ ಆರೋಗ್ಯ ಕಾರ್ಯಕರ್ತರು, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours