ಪೂರೈಕೆಗೂ ಮುನ್ನ ಟ್ಯಾಂಕರ್ ನೀರು ಪರೀಕ್ಷೆಗೊಳಪಡಿಸಲು ಸಿಇಓ ಸೂಚನೆ
Tumkurnews
ತುಮಕೂರು: ಜಿಲ್ಲೆಯಲ್ಲಿ ಮಳೆ ಬಾರದೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಪೂರೈಕೆಗೂ ಮುನ್ನ ಕುಡಿಯಲು ಯೋಗ್ಯವಿರುವ ಬಗ್ಗೆ ನೀರನ್ನು ಪರೀಕ್ಷೆಗೊಳಪಡಿಸಿರಬೇಕು ಎಂದು ಜಿಪಂ ಸಿಇಒ ಜಿ.ಪ್ರಭು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಮಂಗಳವಾರ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಸಿದ್ಧಪಡಿಸಿರುವ ಕ್ರಿಯಾ ಯೋಜನೆಯ ಅನುಮೋದನೆಗಾಗಿ ಜರುಗಿದ ನೀರು ಮತ್ತು ನೈರ್ಮಲ್ಯ ಮಿಷನ್ ಜಿಲ್ಲಾ ಮಟ್ಟ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಪ್ರಸ್ತುತ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯಾತ್ಮಕ 23 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ನೀರನ್ನು ಜನರಿಗೆ ಒದಗಿಸುವ ಮುನ್ನ ನೀರಿನ ಮಾದರಿಯನ್ನು ಮೂರು ದಿನಗಳಿಗೊಮ್ಮೆ ಪರೀಕ್ಷೆಗೊಳಪಡಿಸಬೇಕೆಂದು ಟ್ಯಾಂಕರ್ ಮಾಲೀಕರಿಗೆ ನಿರ್ದೇಶನ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ದೃಷ್ಟಿಯಿಂದ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಹಂತ-ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಸಮಸ್ಯಾತ್ಮಕ ಗ್ರಾಮಗಳಿಗೆ ಈ ಹಣವನ್ನು ವಿನಿಯೋಗಿಸಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಂಡು ಶಾಶ್ವತ ಪರಿಹಾರ ನೀಡಬೇಕೆಂದು ಸೂಚನೆ ನೀಡಿದರು.
ಹೊಸ ಕೊಳವೆ ಬಾವಿಗಳಿಗೆ ಅನುಮೋದನೆ: ಸಭೆಯಲ್ಲಿ ಗುಬ್ಬಿ, ತುರುವೇಕೆರೆ, ಶಿರಾ ಹಾಗೂ ತುಮಕೂರು ತಾಲ್ಲೂಕಿನ 12 ಸಮಸ್ಯಾತ್ಮಕ ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಸಿದ್ಧಪಡಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಗುಬ್ಬಿ ತಾಲ್ಲೂಕಿನ ಮಣಿಕುಪ್ಪೆ ಹಾಗೂ ಬಿದರೆ; ತುಮಕೂರಿನ ಅಪ್ಪಿನಾಯಕನಹಳ್ಳಿ; ತುರುವೇಕೆರೆ ತಾಲ್ಲೂಕಿನ ಮಂಕಿಕುಪ್ಪೆ, ಕಣತೂರು; ಶಿರಾ ತಾಲ್ಲೂಕಿನ ಸಾಕ್ಷಿಹಳ್ಳಿ, ರಾಮನಹಳ್ಳಿ, ಯರದಕಟ್ಟೆ, ಸೋರೆಕುಂಟೆ, ಜಿ. ರಂಗನಹಳ್ಳಿ, ಶಾಖದಡು ಹಾಗೂ ಅಂತಾಪುರ ಸೇರಿದಂತೆ ಒಟ್ಟು 12 ಗ್ರಾಮಗಳಲ್ಲಿ ಹೊಸ ಕೊಳವೆಬಾವಿ ಕೊರೆಯಲು ಅನುಮೋದನೆ ನೀಡಲಾಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರವೀಶ್ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ 80 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಹಾಗೂ 23 ಗ್ರಾಮಗಳಲ್ಲಿ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರಸ್ತುತ ನೀರಿನ ಬವಣೆ ಹೆಚ್ಚಾಗಿ ಕಂಡು ಬಂದಿರುವ 12 ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿ ಕೊರೆಯಲು 32.62ಲಕ್ಷ ರೂ.ಗಳ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ಸಭೆಗೆ ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಂತರ ಜಿಪಂ ಸಿಇಒ ಜಿ.ಪ್ರಭು ಅವರು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಿಡಿಓಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಆದ್ಯತೆ ಮೇಲೆ ಹೊಸ ಕೊಳವೆ ಬಾವಿಗಳಿಗೆ ಅನುಮತಿ ನೀಡಲಾಗಿದೆ. ಹೊಸ ಕೊಳವೆ ಬಾವಿ ಕೊರೆಯುವ ಮುನ್ನ ಹಿರಿಯ ಭೂವಿಜ್ಞಾನಿಗಳಿಂದ ಜಲಬಿಂದು ಗುರುತಿಸಿ ನೀರಿನ ಇಳುವರಿ ಇರುವ ಕಡೆ ಕೊಳವೆಬಾವಿ ಕೊರೆಸಲು ಸಲಹೆ ನೀಡಿದರು.
ಚುನಾವಣೆ ಕಾರ್ಯದ ಒತ್ತಡ ಬಹುತೇಕ ಪೂರ್ಣಗೊಂಡಿರುವುದರಿಂದ ಎಲ್ಲಾ ಪಂಚಾಯತಿಗಳು ತೆರಿಗೆ ಸಂಗ್ರಹಣೆ, ನರೇಗಾ ಕಾಮಗಾರಿಗಳಿಗೆ ಪ್ರಾರಂಭಿಸಲು ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ಹಾಲಸಿದ್ದಪ್ಪ ಪೂಜೇರಿ, ಉಪ ಕಾರ್ಯದರ್ಶಿ(ಅಭಿವೃದ್ಧಿ) ವಿಜಯ್‍ಕುಮಾರ್, ಶಾಲಾ ಶಿಕ್ಷಣ ಇಲಾಖೆ ರಂಗಧಾಮಯ್ಯ, ಕೃಷಿ ಜಂಟಿ ನಿರ್ದೇಶಕ ರಮೇಶ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಚಂದ್ರಶೇಖರ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಶಿರಾ ತಾಲ್ಲೂಕಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎ.ಆರ್. ಮಂಜುಪ್ರಸಾದ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
+ There are no comments
Add yours