ಉದ್ಯೋಗದಲ್ಲಿ ಕನ್ನಡಿಗರಿಗೆ ಉನ್ನತ ಸ್ಥಾನಮಾನ ದೊರೆಯುವಂತಾಗಬೇಕು; ಡಾ.ಎಂ.ವಿ ನಾಗರಾಜರಾವ್

1 min read

ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ಸಮರ್ಪಕವಾಗಿ ಅನುಷ್ಠಾನವಾಗಬೇಕು

Tumkurnews
ತುಮಕೂರು; ಕನ್ನಡ ಒಂದು ಭಾವನೆ, ಕನ್ನಡ ಒಂದು ಆತ್ಮ. ಅದು ನಮಗೆ ಅನ್ನ, ವಸತಿ, ನೆಮ್ಮದಿಯನ್ನು ಕೊಟ್ಟಿದೆ. ಈ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಯೋಚಿಸುವಂತಾಗಬೇಕು. ವರ್ಷಕ್ಕೊಮ್ಮೆ ಕನ್ನಡ ಎನ್ನದೆ ಎಲ್ಲಾ ದಿನಗಳಲ್ಲೂ ಕನ್ನಡ ನಮ್ಮ ಭಾಷೆ, ಕನ್ನಡವೇ ನಮ್ಮ ಬದುಕು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷ ಡಾ.ಎಂ.ವಿ ನಾಗರಾಜರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಜಿಲ್ಲಾ ಕನ್ನಡ¸ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದು ಒತ್ತಾಯಿಸಿದರು.

ರಾಗಿ ಖರೀದಿಗೆ ಎರಡು ಷರತ್ತು ವಿಧಿಸಿದ ಸರ್ಕಾರ; ಇಂದಿನಿಂದ ನೋಂದಣಿ ಆರಂಭ
ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಕನ್ನಡ ಭಾಷೆ ತನ್ನ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಉನ್ನತ ಸ್ಥಾನಮಾನ ದೊರೆಯುವಂತಾಗಬೇಕು. ಅಲ್ಲಿಯವರೆಗೂ ಕನ್ನಡಕ್ಕೆ ಸಂಕಟ ಇದ್ದದ್ದೇ ಎಂದು ಅವರು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

20 ಸಾವಿರ ಉದ್ಯೋಗ, SSCಯಿಂದ ಹಿಂದಿ, ಇಂಗ್ಲೀಷ್’ನಲ್ಲಿ ಪರೀಕ್ಷೆ; ಕನ್ನಡದಲ್ಲೂ ಪರೀಕ್ಷೆಗೆ ಎಚ್ಡಿಕೆ ಆಗ್ರಹ
ಕನ್ನಡವನ್ನು ಪ್ರಮುಖ ಭಾಷೆಯನ್ನಾಗಿ ಕಲಿಯುವ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಹೋಗಲಾಡಿಸುವ ಪ್ರಯತ್ನವಾಗಬೇಕು. ಕನ್ನಡವನ್ನು ನಾವು ನಿರ್ಲಕ್ಷಿಸಬಹುದು ಎಂಬ ತಪ್ಪು ಕಲ್ಪನೆಯನ್ನು ಕಳೆಯಬೇಕು. ಇದರಲ್ಲಿ ಪೋಷಕರ ಪಾತ್ರವು ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಕನ್ನಡದ ವಿಷಯದಲ್ಲಿ ಪ್ರೀತಿ, ಗೌರವ ಮತ್ತು ವಿಶ್ವಾಸವನ್ನು ಹೊಂದುವವರೆಗೆ ಭಾಷೆಯ ಕಡೆಗಣನೆ ನಡೆಯುತ್ತಲೇ ಇರುತ್ತದೆ. ಬೇರೆ ಬೇರೆ ರಾಜ್ಯಗಳಿಂದ ಬಂದ ಅಧಿಕಾರಿಗಳು ಕನ್ನಡವನ್ನು ಮನತುಂಬಿ ಒಪ್ಪಿಕೊಳ್ಳುತ್ತಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಹೊರ ರಾಜ್ಯದ ಅಧಿಕಾರಿಗಳು ಕನ್ನಡ ಕಲಿಯದಿದ್ದರೆ ಅವರ ಮೇಲೆ ಶಿಸ್ತು ಕ್ರಮದ ಬಗ್ಗೆಯೂ ಯೋಚಿಸಬೇಕಿದೆ ಎಂದರು.
ಜಾಗತೀಕರಣ ಮತ್ತು ಉದಾರೀಕರಣದ ಪ್ರಭಾವ ನಮ್ಮ ಬದುಕಿನ ಮೇಲೆ ಗಾಢವಾಗಿ ಬೀರುತ್ತಿದೆ. ನಮ್ಮ ಸಂಸ್ಕೃತಿ ಮತ್ತು ಬದುಕಿನ ವಿಶಿಷ್ಟ ಲಕ್ಷಣಗಳು ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ದೇಸಿ ಭಾವನೆಯನ್ನು ತಿಳಿಯದಿದ್ದರೆ ನಮ್ಮ ಅಸ್ತಿತ್ವ ಡೋಲಾಯಮಾನವಾಗುವ ಸಾಧ್ಯತೆ ಇದೆ. ಹಾಗಾಗಿ ಕನ್ನಡಿಗರಿಗೆ ಕನ್ನಡದ ಮೂಲಕ ಬದುಕುವ ಆತ್ಮವಿಶ್ವಾಸವನ್ನು ಮೂಡಿಸಬೇಕಾಗಿದೆ ಎಂದರು.

‘ಇಂಗ್ಲೀಷ್ ಕಲಿತರೆ ಮಾತ್ರ ಹೊಟ್ಟೆಪಾಡು’; ಕನ್ನಡಿಗರು ಭ್ರಮೆಯಿಂದ ಹೊರ ಬರಲಿ ಎಂದ ಮನು ಬಳಿಗಾರ್
ಕನ್ನಡ ಭಾಷೆ ಮತ್ತು ಬದುಕುಗಳ ನಡುವೆ ನಿಕಟ ಬಾಂಧವ್ಯವನ್ನು ಬೆಸೆಯುವ ಭಾವವೇ ನಿಜವಾದ ಕನ್ನಡಾಭಿಮಾನವೆಂದು ಅರಿತುಕೊಳ್ಳುವ ಅಗತ್ಯವಿದೆ. ಕನ್ನಡವನ್ನು ಬಳಸುವ, ಬೆಳೆಸುವ ಕೆಲಸವನ್ನು ಮಾಡಬೇಕು. ಕರ್ನಾಟಕದ ಪ್ರತಿ ಮನೆಯಲ್ಲೂ ಕನ್ನಡ ಜ್ಯೋತಿ ಬೆಳಗಬೇಕು ಎಂದರು.
ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ಶಾಲೆಗಳಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸಬೇಕು. ಕಟ್ಟಡ, ಪೀಠೋಪಕರಣ, ಪಾಠೋಪಕರಣ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗ್ರಂಥಾಲಯ, ಸಮಯಕ್ಕೆ ಸರಿಯಾಗಿ ಪುಸ್ತಕ, ಬಟ್ಟೆ ಸೇರಿದಂತೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ವಿಳಂಬ ಇಲ್ಲದೆ ಒದಗಿಸಬೇಕಾಗಿದೆ ಎಂದರು.

ಹಾಲಿನ ಡೈರಿಗಳಲ್ಲಿ ವರ್ಷಕ್ಕೆ 1 ಕೋಟಿ ರೂ. ವಂಚನೆ! ಹೈನುಗಾರರೇ ಎಚ್ಚರ!
ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಇದು ಮಹೋನ್ನತ ಆಶಯಗಳನ್ನು ಹೊಂದಿದ್ದು, ಕೌಶಲ್ಯಾಧಾರಿತವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಶಿಕ್ಷಣ ದೊರೆಯುವಂತಾಗಬೇಕು ಎಂದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹತ್ತು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಹೆಮ್ಮೆಪಡುವಂತೆ ಅನಾವರಣಗೊಳಿಸುವ ಕೆಲಸವನ್ನು ಸಮರ್ಥವಾಗಿ ನಡೆಸುತ್ತಾ ಬಂದಿವೆ. ಹೋಬಳಿ, ನಗರದ ಪ್ರತ್ಯೇಕ ವಾರ್ಡ್‌ಗಳಲ್ಲಿ ಮತ್ತು ತಾಲ್ಲೂಕು ಸಮ್ಮೇಳನಗಳು, ವಿಚಾರ ಸಂಕಿರಣಗಳು, ಪುಸ್ತಕ ಬಿಡುಗಡೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಚುರುಕಾಗಿ ಜನ ಮೆಚ್ಚುವಂತೆ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ. ಹಂ.ಪ ನಾಗರಾಜಯ್ಯ ಮಾತನಾಡಿ, ಕನ್ನಡ ಸಮ್ಮೇಳನಗಳು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ. ಸಮ್ಮೇಳನಗಳು ಕನ್ನಡಿಗರ ಹಬ್ಬ, ಉತ್ಸಾಹದ ಚಿಲುಮೆ ಎಂದರು.
ಸಮಾಜದಲ್ಲಿ ಮತ ಬೇಕು, ಮತಾಂಧತೆ ಬೇಡ. ಜಾತಿ ಬೇಕು, ಜಾತಿಯಾಂಧತೆ ಬೇಡ. ದೇಶದ ಐಕ್ಯತೆಗೆ ಧಕ್ಕೆ ತರುವಂತಹ ಕೆಲಸವನ್ನು ಯಾರೂ ಮಾಡಬಾರದು. ಸಮಾನತೆ ಸೌಹಾರ್ದತೆಯೊಂದಿಗೆ ಎಲ್ಲರನ್ನು ಕೊಂಡೊಯ್ಯುವ ಶಕ್ತಿ ಇಂತಹ ಸಾಹಿತ್ಯ ಸಮ್ಮೇಳನಗಳಿಗೆ ಇದೆ ಎಂದರು.

ಜಿಲ್ಲೆಯಲ್ಲಿ ಎರಡು ದಿನಗಳ ನುಡಿ‌ಹಬ್ಬ; ಅಕ್ಷರ ಜಾತ್ರೆಗೆ ಕ್ಷಣಗಣನೆ
ಸಮಾಜಕ್ಕೆ ಕಂದರ, ಪ್ರಪಾತಗಳು ಬೇಡ. ಬದಲಾಗಿ ಎಲ್ಲರ ಮನಸ್ಸುಗಳನ್ನು ಒಂದುಗೂಡಿಸುವ ಸೇತುವೆಗಳು ಬೇಕು. ಆಗ ಮಾತ್ರ ಮನಸ್ಸುಗಳು ಹತ್ತಿರವಾಗುತ್ತವೆ ಎಂದ ಅವರು, ಮನುಷ್ಯ ಎಷ್ಟೇ ಸಂಪಾದಿಸಿದರೂ ತ್ಯಾಗ ಮಾಡುವ ಗುಣ ಹೊಂದಿರಬೇಕು. ಜತೆಗೆ ಸಮಾಜಕ್ಕೆ ಅರ್ಪಿಸುವಂತಹ ಶ್ರೀಮಂತ ಅಂತಃಕರಣವೂ ಇರಬೇಕು ಎಂದು ಹೇಳಿದರು.


ಸ್ಮರಣ ಸಂಚಿಕೆ ಕಲ್ಪನುಡಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ, ಸಾಹಿತ್ಯಕ್ಕೆ ಮಹತ್ವ ಕೊಡುವ ರಾಜ್ಯ, ಜಿಲ್ಲೆ ಹಾಗೂ ಜನರಿಂದ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ. ನಮಗೆ ಸಾಹಿತ್ಯ, ಸಂಗೀತ, ನಾಟಕ ಬಹಳ ಮುಖ್ಯ ಎಂದರು.
ನಡೆದಾಡುವ ದೇವರ ಊರು ತುಮಕೂರು ಇಡೀ ಜಗತ್ತೇ ತಿರುಗಿ ನೋಡುವಂತಹ ತಾಣವಾಗಿದೆ. ಈ ನೆಲದಲ್ಲಿ ಸಾಹಿತ್ಯಕ್ಕೂ ಅಷ್ಟೇ ಮನ್ನಣೆ ದೊರೆತಿದೆ ಎಂದು ಅವರು ಹೇಳಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಎಸ್.ಜಿ ಸಿದ್ದರಾಮಯ್ಯ ಅವರು ಸಮ್ಮೇಳನಾಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡಿ ಮಾತನಾಡಿದರು.
ಸಮಾರಂಭದ ಸಾನ್ನಿಧ್ಯವನ್ನು ಹಿರೇಮಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಆಶಯ ನುಡಿಗಳನ್ನಾಡಿದರು.


ಸಮ್ಮೇಳನದಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್, ಜಿ.ಪಂ ಸಿಇಓ ಡಾ.ಕೆ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಟೂಡಾ ಅಧ್ಯಕ್ಷ ಹೆಚ್.ಜಿ. ಚಂದ್ರಶೇಖರ್, ಸಮಾಜ ಸೇವಕ ಚಿದಾನಂದ್ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours