ಇಂದಿರಾಗಾಂಧಿ ಬಡವರು, ದೀನದಲಿತರ ಪಾಲಿನ ಆದರ್ಶ: ಡಾ. ಎಸ್. ಷಫಿ ಅಹಮದ್

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ ರಾಜಕೀಯ

ಇಂದಿರಾಗಾಂಧಿ ಬಡವರು, ದೀನದಲಿತರ ಪಾಲಿನ ಆದರ್ಶ: ಡಾ. ಎಸ್. ಷಫಿ ಅಹಮದ್

Tumkurnews.in

ತುಮಕೂರು: ದೇಶದಲ್ಲಿ ಸಮಾನತೆ ತರಲು ಬ್ಯಾಂಕ್ ಹಾಗೂ ಸಾರಿಗೆ ರಾಷ್ಟ್ರೀಕರಣದಂತಹ ಮಹತ್ವದ ಕಾರ್ಯಗಳನ್ನು ಕೈಗೊಂಡ ಉಕ್ಕಿನ ಮಹಿಳೆ, ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರು ಬಡವರು, ದೀನದಲಿತರು ಹಾಗೂ ಮಹಿಳೆಯರ ಪಾಲಿನ ಆದರ್ಶವಾಗಿದ್ದಾರೆ ಎಂದು ಮಾಜಿ ಶಾಸಕ ಡಾ. ಎಸ್. ಷಫಿ ಅಹಮದ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಇಂದಿರಾಗಾಂಧಿ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮಗಳು ಬಡವರ ಪಾಲಿಗೆ ವರದಾನವಾಗಿದ್ದವು. ಸಾಲಮೇಳಗಳ ಮೂಲಕ 50 ಸಾವಿರ ರೂ.ವರೆಗೆ ಯಾವುದೇ ಆಧಾರವಿಲ್ಲದೆ ಸಾಲ ನೀಡುವ ಮೂಲಕ ಬಡವರಿಗೆ ನೆರವಾಗಿದ್ದರು. ಅವರ ಆಡಳಿತದ ವೈಖರಿ ಎಷ್ಟೊಂದು ಪರಿಣಾಮಕಾರಿಯಾಗಿತ್ತೆಂದರೆ, ಅಂದಿನ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರೇ ಇಂದಿರಾಗಾಂಧಿ ಅವರನ್ನು ದುರ್ಗಿ ಎಂದು ಬಣ್ಣಿಸಿದ್ದರು ಎಂದರು.

ಕಾಂಗ್ರೆಸ್ ಪಕ್ಷ ಕೆಲವು ಕಡೆಗಳಲ್ಲಿ ದುರ್ಬಲವಾಗಿದ್ದು, ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಪುನಶ್ಚೇತನಗೊಳಿಸುವ ಅಗತ್ಯವಿದೆ. ಪಕ್ಷದ ಕೆಲಸವನ್ನು ತಮ್ಮದೇ ಕೆಲಸವೆಂದು ಭಾವಿಸಿ ಒಗ್ಗಟ್ಟಿನಿಂದ ದುಡಿಯುವ ನಾಯಕರು ಮುಂದೆ ಬರಬೇಕು. ಮುಂಬರುವ ಚುನಾವಣೆಗಳಿಗೆ ಕಾರ್ಯಕರ್ತರು ಹಾಗೂ ಮುಖಂಡರು ಸಜ್ಜಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಹೆಚ್.ಸಿ. ಹನುಮಂತಯ್ಯ ಮಾತನಾಡಿ, ಸರ್ಕಾರ ನಮಗೆ ಯಾವುದೇ ಅಧಿಕಾರ ನೀಡಿಲ್ಲ ಎಂದು ಪ್ರಶ್ನಿಸುವ ಕಾರ್ಯಕರ್ತರು, ಪಕ್ಷದ ಕಾರ್ಯಕ್ರಮಗಳನ್ನು ಎಷ್ಟು ಪರಿಣಾಮಕಾರಿಯಾಗಿ ಸಂಘಟಿಸಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. 26 ಶಾಸಕರಿದ್ದರೂ ಬಿಜೆಪಿ ಅಭ್ಯರ್ಥಿಗೆ 23 ಸಾವಿರ ಮತಗಳ ಮುನ್ನಡೆ ಸಿಕ್ಕಿರುವುದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಬಲವರ್ಧನೆಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನರಸಿಯಪ್ಪ ಮಾತನಾಡಿ, ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಜನಸಾಮಾನ್ಯರ ಹಿತಕ್ಕಾಗಿ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದರು. ಬರಗಾಲದ ಸಂದರ್ಭದಲ್ಲಿ ವಿದೇಶದಿಂದ ಕೆಂಪು ಜೋಳ ಹಾಗೂ ಗೋಧಿ ನುಚ್ಚು ತರಿಸಿ ದೇಶದ ಜನರಿಗೆ, ಮಕ್ಕಳಿಗೆ ಆಹಾರ ಒದಗಿಸುವ ಮೂಲಕ ಬಡವರ ನೆರವಿಗೆ ನಿಂತಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಲು ಇಂದಿರಾಗಾಂಧಿ ಅವರು ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದರು. ದೇಶದ ಗೆಲುವು ಹಾಗೂ ಜನರ ಆರೋಗ್ಯಕ್ಕಾಗಿ ಕೈಗೊಂಡ ಲಸಿಕಾ ಕಾರ್ಯಕ್ರಮಗಳನ್ನು ಎಂದಿಗೂ ಪ್ರಚಾರಕ್ಕಾಗಿ ಬಳಸಿಕೊಂಡವರಲ್ಲ. ಇದು ನಿಜವಾದ ದೇಶಪ್ರೇಮದ ಸಂಕೇತ ಎಂದರು.

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ 26 ಶಾಸಕರಿದ್ದರೂ ಪಕ್ಷದ ಅಭ್ಯರ್ಥಿ ಸೋಲು ಕಂಡಿರುವುದು ಬೇಸರದ ಸಂಗತಿ. ನಮ್ಮದೇ ಸರ್ಕಾರವಿದ್ದರೂ ಕಾರ್ಯಕರ್ತರಿಗೆ ಅಧಿಕಾರ ಸಿಗದಿರುವ ಹತಾಶೆಯೂ ಸೋಲಿಗೆ ಕಾರಣವಾಗಿದೆ. ಮುಂಬರುವ ಚುನಾವಣೆಗಳಲ್ಲಿ ಇದೇ ಫಲಿತಾಂಶ ಮರುಕಳಿಸದಂತೆ ಪಕ್ಷದ ಹಿರಿಯರು ಎಚ್ಚೆತ್ತುಕೊಂಡು ಅರ್ಹರಿಗೆ ಪಕ್ಷದಲ್ಲಿ ಹಾಗೂ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸುಜಾತ, ಕುಮಾರಸ್ವಾಮಿ, ಶಿವಾಜಿ, ಬೈಲಸ್ವಾಮಿ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫೈಯಾಜ್, ಮಹೇಶ್, ವಿವಿಧ ಘಟಕಗಳ ಅಧ್ಯಕ್ಷರಾದ ಇರ್ಫಾನ್ ಅಹಮದ್, ಕೆಂಪಣ್ಣ, ವಿಜಯಲಕ್ಷ್ಮಿ, ಲಕ್ಷ್ಮಿದೇವಮ್ಮ, ನಟರಾಜಶೆಟ್ಟಿ, ಆದಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *