ಬಡವರ ಬದುಕಿಗೆ ಬರೆ ಎಳೆದ ಸರ್ಕಾರ: ಬಿಜೆಪಿ ಟೀಕೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ ರಾಜಕೀಯ ರಾಜ್ಯ

ಬಡವರ ಬದುಕಿಗೆ ಬರೆ ಎಳೆದ ಸರ್ಕಾರ: ಬಿಜೆಪಿ ಟೀಕೆ

Tumkurnews.in

ತುಮಕೂರು: ಹಾಲು, ಮೊಸರು ಹಾಗೂ ವಿದ್ಯುತ್ ದರ ಏರಿಕೆ ಮೂಲಕ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿರುವ ಕಾಂಗ್ರೆಸ್ ಸರ್ಕಾರ ಇದೀಗ ಬಸ್ ಪ್ರಯಾಣ ದರವನ್ನೂ ಹೆಚ್ಚಿಸಿ ಬಡವರ ಮೇಲೆ ಮತ್ತೊಂದು ಹೊರೆ ಹೊರಿಸಿದೆ ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕೆ. ವೇದಮೂರ್ತಿ ಟೀಕಿಸಿದ್ದಾರೆ.

ದಿನಬಳಕೆಯ ಅಗತ್ಯ ವಸ್ತುಗಳಾದ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಸಿರುವ ಸರ್ಕಾರ, ಇದೀಗ ಬಸ್ ಪ್ರಯಾಣ ದರವನ್ನೂ ಹೆಚ್ಚಿಸುವ ಮೂಲಕ ರಾಜ್ಯದ ಜನರಿಗೆ ದೀಪಾವಳಿ ಆಘಾತ ನೀಡಿದೆ. ಸರ್ಕಾರದ ಆಡಳಿತದಿಂದ ಇನ್ನೆಷ್ಟು ಅನಾಹುತಗಳು ಕಾದಿವೆಯೋ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಕನಿಷ್ಠ ಬಸ್ ಟಿಕೆಟ್ ದರವನ್ನು 6 ರೂ.ನಿಂದ 10 ರೂ.ಗೆ ಹೆಚ್ಚಿಸುವ ಮೂಲಕ ಸುಮಾರು ಶೇ.67ರಷ್ಟು ಏರಿಕೆ ಮಾಡಲಾಗಿದೆ. ಕೆಎಸ್‌ಆರ್‌ಟಿಯಲ್ಲಿ ಗರಿಷ್ಠ 9 ರೂ. ಹಾಗೂ ಒಟ್ಟಾರೆ 4ರಿಂದ 20 ರೂ.ವರೆಗೆ ಪ್ರಯಾಣ ದರ ಹೆಚ್ಚಿಸಲಾಗಿದೆ. ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ 5,650.95 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಈ ಹಣವನ್ನು ಪಾವತಿಸಿದ್ದರೆ ಪ್ರಯಾಣ ದರ ಏರಿಸುವ ಅಗತ್ಯವಿರಲಿಲ್ಲ ಎಂದು ಆರೋಪಿಸಿದ್ದಾರೆ.

ದುಡಿಯಲು ತೆರಳುವ ಕಾರ್ಮಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗುವ ಬಡ ರೋಗಿಗಳು ಸೇರಿದಂತೆ ಸಾಮಾನ್ಯ ಜನರು ಸರ್ಕಾರದ ಕೆಟ್ಟ ಆರ್ಥಿಕ ನಿರ್ವಹಣೆಗೆ ಬೆಲೆ ತೆರಬೇಕಾಗಿದೆ. ಒಂದೆಡೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ ಮಾಡಿ, ಮತ್ತೊಂದೆಡೆ ಬೆಲೆ ಏರಿಕೆ ಮೂಲಕ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣವನ್ನೂ ದುಬಾರಿಗೊಳಿಸಿರುವ ಸರ್ಕಾರ ಜನಸಾಮಾನ್ಯರ ದೈನಂದಿನ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಕೆ. ವೇದಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *