Law – ವಿಲ್ ನೋಂದಣಿ ಕಡ್ಡಾಯವಲ್ಲ: ನೋಂದಣಿ ಇಲ್ಲದಿದ್ದರೂ ಮಾನ್ಯ— ಸುಪ್ರೀಂ ಮಹತ್ವದ ತೀರ್ಪು

ಜಿಲ್ಲಾ ಸುದ್ದಿ ಪ್ರಮುಖ ಸುದ್ದಿ ರಾಜ್ಯ

ನವದೆಹಲಿ: ವಿಲ್ ಅಥವಾ ಮರಣಶಾಸನಗಳ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿದೆ. “ದೇಶದ ಯಾವುದೇ ಕಾನೂನು ಕೂಡ ವಿಲ್ ಅನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಹೇಳುವುದಿಲ್ಲ. ಕೇವಲ ನೋಂದಣಿ ಆಗಿಲ್ಲ ಎಂಬ ಕಾರಣಕ್ಕೆ ಅದರ ಸಿಂಧುತ್ವವನ್ನು ಪ್ರಶ್ನಿಸಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಆಸ್ತಿ ವಿವಾದ ಪ್ರಕರಣವೊಂದರ ಅಪೀಲಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ Hima Kohli ಹಾಗೂ Ahsanuddin Amanullah ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ ಪ್ರಕರಣದಲ್ಲಿ ಮೂಲ ವಿಲ್ ಅನ್ನು ಸಬ್-ರೆಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿರಲಿಲ್ಲ. ಇದೇ ಕಾರಣವನ್ನು ಆಧಾರ ಮಾಡಿಕೊಂಡು ಕೆಳಹಂತದ ನ್ಯಾಯಾಲಯಗಳು ವಿಲ್‌ನ ದೃಢತೆಯನ್ನು ಪ್ರಶ್ನಿಸಿದ್ದವು. ಆದರೆ ಇದನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ವಿಲ್‌ಗೆ ಸಂಬಂಧಿಸಿದ ಕಾನೂನು ವಿನಾಯಿತಿಗಳನ್ನು ಉಲ್ಲೇಖಿಸಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಭಾರತೀಯ ಉತ್ತರಾಧಿಕಾರ ಕಾಯ್ದೆ, 1925 ಮತ್ತು ಭಾರತೀಯ ನೋಂದಣಿ ಕಾಯ್ದೆ, 1908 ಪ್ರಕಾರ ವಿಲ್ ನೋಂದಣಿ ಕಡ್ಡಾಯವಲ್ಲ; ಅದು ಸಂಪೂರ್ಣ ಐಚ್ಛಿಕ ಪ್ರಕ್ರಿಯೆ ಎಂದು ನ್ಯಾಯಾಲಯ ಹೇಳಿದೆ.

“ಒಬ್ಬ ವ್ಯಕ್ತಿಗೆ ತನ್ನ ಸ್ವಂತ ಕಷ್ಟಾರ್ಜಿತ ಆಸ್ತಿಯನ್ನು ತನ್ನಿಷ್ಟದಂತೆ ಯಾರಿಗಾದರೂ ಹಂಚಿಕೊಡುವ ಹಕ್ಕಿದೆ. ವಿಲ್ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಕಾನೂನುಬದ್ಧವಾಗಿ ಬರೆಯಲ್ಪಟ್ಟು, ಅವರು ಅದನ್ನು ದೃಢಪಡಿಸಿದರೆ, ನೋಂದಣಿ ಇಲ್ಲದಿದ್ದರೂ ಅದು ಮಾನ್ಯವಾಗುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಇದರ ಜೊತೆಗೆ, “ವಿಲ್ ನೋಂದಣಿ ಆಗಿಲ್ಲ ಎಂಬುದೊಂದೇ ಕಾರಣಕ್ಕೆ ಅದನ್ನು ನಕಲಿ ಅಥವಾ ಸಂಶಯಾಸ್ಪದ ಎಂದು ಹೇಳಲಾಗುವುದಿಲ್ಲ. ವಿಲ್ ಬರೆಯುವ ಸಂದರ್ಭ, ಸಾಕ್ಷಿಗಳ ಹೇಳಿಕೆ ಮತ್ತು ವಿಲ್ ಬರೆದ ವ್ಯಕ್ತಿಯ ಮಾನಸಿಕ ಸ್ಥಿತಿ ಮುಖ್ಯವಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಈ ತೀರ್ಪು ದೇಶದಾದ್ಯಂತ ಬಾಕಿ ಇರುವ ಸಾವಿರಾರು ಆಸ್ತಿ ಮತ್ತು ಉತ್ತರಾಧಿಕಾರ ವಿವಾದ ಪ್ರಕರಣಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಿಳಿ ಹಾಳೆಯ ಮೇಲೆ ಸಾಕ್ಷಿಗಳ ಸಮ್ಮುಖದಲ್ಲಿ ಬರೆಯಲ್ಪಟ್ಟಿರುವ ವಿಲ್‌ಗಳಿಗೆ ಈ ತೀರ್ಪು ದೊಡ್ಡ ಕಾನೂನುಬದ್ಧ ರಕ್ಷಣೆಯಾಗಿ ಪರಿಣಮಿಸಲಿದೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *