ತಹಶೀಲ್ದಾರ್ ಕೊಲೆ; ಬೆಚ್ಚಿ ಬಿದ್ದ ತುಮಕೂರು

1 min read

ತುಮಕೂರು(ಜು.9) tumkurnews.in

ಕೋಲಾರ ಜಿಲ್ಲೆಯ ಬಂಗಾರ ಪೇಟೆಯಲ್ಲಿ ಗುರುವಾರ ಹತ್ಯೆಯಾದ ತಹಶೀಲ್ದಾರ್ ಚಂದ್ರಮೌಳಿ ಅವರು ಮೂಲತಃ ತುಮಕೂರು ಜಿಲ್ಲೆಯವರು.

ಕೊರಟಗೆರೆ ತಾಲೂಕಿನವರಾದ ಚಂದ್ರಮೌಳಿ ಅತ್ಯಂತ ಮಿತಭಾಷಿ, ಸೌಮ್ಯ ಸ್ವಭಾವಕ್ಕೆ ಹೆಸರಾದವರು. ಗುರುವಾರ ಬಂಗಾರಪೇಟೆ ತಾಲ್ಲೂಕಿನ ಕಲವಂಚಿ ಗ್ರಾಮದ ಸರಕಾರದ ಜಮೀನೊಂದನ್ನು ಉಳಿಸಲು ಹೋಗಿ ಅನ್ಯಾಯವಾಗಿ ಕೊಲೆಯಾಗಿದ್ದಾರೆ.

ನಿವೃತ್ತ ಶಿಕ್ಷಕ ವೆಂಕಟಾಚಲ ಎಂಬಾತ ಊರಿನ ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ತೆರಳಿದ್ದರು. ಸ್ಥಳದಲ್ಲಿ ಸರ್ವೆ ನಡೆಸುತ್ತಿದ್ದ ವೇಳೆ ಹತ್ತಾರು ಪೊಲೀಸರು, ನೂರಾರು ಗ್ರಾಮಸ್ಥರ ನಡುವೆಯೇ ಕೊಲೆ ನಡೆದಿದೆ. ನಿವೃತ್ತ ಶಿಕ್ಷಕನು, ದಾಖಲೆಗಳನ್ನು ತೋರಿಸುವ ನೆಪದಲ್ಲಿ ತಹಶೀಲ್ದಾರ್ ಮೇಲೆ ಎರಗಿ ಚಾಕುವಿನಿಂದ ಇರಿದಿದ್ದಾನೆ. ಚಿಕಿತ್ಸೆ ಫಲಿಸದೆ ತಹಶೀಲ್ದಾರ್ ಚಂದ್ರಮೌಳಿ ಅವರು ಜಾಲಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಜಿಲ್ಲೆಯಲ್ಲಿ ಕಂಬನಿ, ಖಂಡನೆ:
ತಹಶೀಲ್ದಾರ್ ಬಿ.ಕೆ ಚಂದ್ರಮೌಳಿ ಅವರ ಹತ್ಯೆಗೆ ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ. ಹಾಗೂ ಸರಕಾರಿ ಅಧಿಕಾರಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಘಟನೆಯನ್ನು ಖಂಡಿಸಿ ಜು.10 ರಂದು ರಾಜ್ಯದ ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿಗಳು ತಾಲ್ಲೂಕು ಕಚೇರಿಗಳ ಮುಂದೆ ಮತ್ತು ಜಿಲ್ಲಾ‌ಧಿಕಾರಿಗಳ ಕಚೇರಿ ಮುಂದೆ ಎರಡು ನಿಮಿಷ ಮೌನಾಚರಣೆ ಮಾಡಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧಾರವನ್ನು ಕೈಗೊಂಡಿದ್ದಾರೆ.
ಹಾಗೂ ಹತ್ಯೆ ಮಾಡಿದವನ ವಿರುದ್ಧ ಕಠಿಣ ಶಿಕ್ಷೆ ವಿಧಿಸುವಂತೆ, ಮೃತರ ಕುಟುಂಬಕ್ಕೆ ಹೆಚ್ಚು ಪರಿಹಾರ ನೀಡುವಂತೆ, ರಾಜ್ಯದ ಎಲ್ಲ ತಹಶೀಲ್ದಾರ್ ಗಳಿಗೆ ಗನ್ ಮ್ಯಾನ್ ನೀಡಿ ರಕ್ಷಣೆ ನೀಡುವಂತೆ ಸರಕಾರಿ ನೌಕರರ ಸಂಘ ಆಗ್ರಹಿಸಿದೆ ಎಂದು ತುಮಕೂರು ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ
ಎನ್ .ನರಸಿಂಹರಾಜು ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours