ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಜನ್ಮ ದಿನವಿಂದು, ಶ್ರೀಗಳ ಸಂಪೂರ್ಣ ವಿವರ ಓದಿ

1 min read

ತುಮಕೂರು ನ್ಯೂಸ್. ಇನ್
Tumkurnews.in

ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಜುಲೈ 22ರ ಇಂದು 57ನೇ ಜನ್ಮ ದಿನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ನಡೆದಾಡುವ ದೇವರು ಶಿವೈಕ್ಯ ಡಾ.ಶ್ರೀ‌ ಶಿವಕುಮಾರ ಸ್ವಾಮಿಗಳ ಅತ್ಯಂತ ಮೆಚ್ಚಿನ ಶಿಷ್ಯರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು 1963ರ ಜುಲೈ 22ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಂಚುಗಲ್ ಬಂಡೇಮಠದಲ್ಲಿ ಜನಿಸಿದರು.
ಶ್ರೀಗಳ ಪೂರ್ವಾಶ್ರಮದ ಹೆಸರು ವಿಶ್ವನಾಥ ಎಂದಾಗಿದ್ದು, ಶ್ರೀಮತಿ ಶಿವರುದ್ರಮ್ಮ ಮತ್ತು ಶ್ರೀ ಸದಾಶಿವಯ್ಯ ಅವರ 8ನೇ ಪುತ್ರರಾಗಿದ್ದಾರೆ.
ಸಿದ್ಧಲಿಂಗ ಶ್ರೀಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಂಡೇಮಠದಲ್ಲಿ, ಪ್ರೌಢಶಿಕ್ಷಣವನ್ನು ಕನಕಪುರದ ದೇಗುಲ ಮಠದಲ್ಲಿ, ಪಿಯುಸಿ ಶಿಕ್ಷಣವನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಪಪೂ ಕಾಲೇಜಿನಲ್ಲಿ ಹಾಗೂ ಬಿ.ಎ ಶಿಕ್ಷಣವನ್ನು ತುಮಕೂರಿನ ಶ್ರೀ ಸಿದ್ಧಗಂಗಾ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.
ಇದರೊಂದಿಗೆ ಸಂಸ್ಕೃತದಲ್ಲಿ ಶಕ್ತಿ ವಿಶಿಷ್ಟಾದ್ವೈತ ಮತ್ತು ವೇದಾಂತ ವಿದ್ವತ್ ಪದವಿಯನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ವೇದ, ಸಂಸ್ಕೃತ ಮಹಾ ವಿದ್ಯಾಲಯದಲ್ಲಿ ಪಡೆದುಕೊಂಡಿದ್ದಾರೆ.
*
ಪಟ್ಟಾಧಿಕಾರ:
ಬಂಡೇಮಠದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಶ್ರೀ ದೇಗುಲಮಠದ ಶ್ರೀ ಮಹಾಲಿಂಗ ಸ್ವಾಮಿಗಳ ಆಶೀರ್ವಾದದಿಂದ ಸಿದ್ಧಗಂಗಾ ಮಠದಲ್ಲಿ ಶಿಕ್ಷಣವನ್ನು ಮುಂದುವರೆಸಿದ ಸಿದ್ಧಲಿಂಗ ಶ್ರೀಗಳು, ತಮ್ಮ ಅಪಾರವಾದ ಜ್ಞಾನ, ಭಕ್ತಿ, ವಿನಯಗಳಿಂದ ಮಠದ ಹಿರಿಯ ಶ್ರೀಗಳಾದ ನಡೆದಾಡುವ ದೈವ ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಗಮನ ಸೆಳೆದರು.

ಮುಂದೆ 1988ರ ಮಾರ್ಚ್ 31ರಂದು ಡಾ.ಶ್ರೀ ಶಿವಕುಮಾರ ಸ್ವಾಮಿಗಳು 25 ವರ್ಷದ ಶ್ರೀ ಸಿದ್ಧಲಿಂಗ ಸ್ವಾಮಿಗಳನ್ನು ಮಠದ ಉತ್ತರಾಧಿಕಾರಿಗಳನ್ನಾಗಿ ನೇಮಿಸಿ, ವಿರಕ್ತಾಶ್ರಮ ಸ್ವೀಕಾರ ನೀಡಿದರು.

ಅಧಿಕಾರ ಹಸ್ತಾಂತರ:
ಆ ಬಳಿಕ 2011ರ ಆಗಸ್ಟ್ 4 ರಂದು ಶ್ರೀ‌ ಶಿವಕುಮಾರ ಸ್ವಾಮಿಗಳು, ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳು ಹಾಗೂ ಕಿರಿಯ ಶ್ರೀಗಳಾದ ಶ್ರೀ ಸಿದ್ಧಲಿಂಗ ಸ್ವಾಮಿಗಳಿಗೆ ಮಠದ ಅಧಿಕಾರವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.

ಈ ಮಹತ್ತರವಾದ ಕಾರ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಮ್ಮುಖದಲ್ಲಿ ನಡೆಸಲಾಯಿತು. ತಮ್ಮ 48ನೇ ವಯಸ್ಸಿನಲ್ಲಿ ಶ್ರೀ ಸಿದ್ಧಲಿಂಗ ಸ್ವಾಮಿಗಳು ಸಿದ್ಧಗಂಗಾ ಮಠದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಹಿರಿಯ ಶ್ರೀಗಳ ಆಜ್ಞೆಯಂತೆ ಮಠವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.

ಹಿರಿಯ ಶ್ರೀಗಳು ಶಿವೈಕ್ಯರಾದ ಬಳಿಕವೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ, ಬಸವಣ್ಣನವರ ತತ್ವದಲ್ಲಿ ಶ್ರೀಗಳು ಶ್ರೀ ಮಠದ ಉತ್ತರೋತ್ತರ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ.

About The Author

You May Also Like

More From Author

+ There are no comments

Add yours