ತುಮಕೂರಿನ ಜನರಿಗೂ ಚಳ್ಳೆ ಹಣ್ಣು ತಿನ್ನಿಸಿದ್ದ ಡ್ರೋನ್ ಪ್ರತಾಪ್! Big Exclusive

1 min read

ತುಮಕೂರು(ಜು.11) tumkurnews.in

ಡ್ರೋನ್ ಪ್ರತಾಪ್ ಎಂಬ 22 ವರ್ಷದ ಮಂಡ್ಯದ ಹುಡುಗ ತಾನು ಡ್ರೋನ್ ಕಂಡು ಹಿಡಿದಿರುವುದಾಗಿ ಹೇಳಿಕೊಂಡಿರುವುದು ಶುದ್ಧ ಸುಳ್ಳು ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಆತನ ಬಗ್ಗೆ ಮತ್ತಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಬಯಲಾಗಿವೆ.

ನೀವು ಆಶ್ಚರ್ಯ ಪಡಬಹುದು, ಆ ಡ್ರೋನ್ ಪ್ರತಾಪ್ ತುಮಕೂರಿಗೂ ಬಂದು ಹೋಗಿದ್ದಾನೆ. ತುಮಕೂರಿನ ಜನರಿಗೂ ಆತ ಚಳ್ಳೆ ಹಣ್ಣು ತಿನ್ನಿಸಿ ಹೋಗಿದ್ದಾನೆ!

ಚಿರತೆ ಹಿಡಿಯಲು ಬಂದಿದ್ದ:
ಅಚ್ಚರಿ ಎನ್ನಿಸಿದರೂ ಇದು ಸತ್ಯ. ನಿಮಗೆಲ್ಲರಿಗೂ ತಿಳಿದಿರುವಂತೆ ಈ ವರ್ಷದ ಪ್ರಾರಂಭದಿಂದಲೂ ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಚಿರತೆಗಳ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಸಾಕಷ್ಟು ಶ್ರಮ ವಹಿಸಿತ್ತು. ಹೆಬ್ಬೂರು ಹೋಬಳಿಯ ಚಿಕ್ಕಣ್ಣಸ್ವಾಮಿ ದೇವಾಲಯದ ಬಳಿ ಎರಡು ಆನೆಗಳನ್ನು ತಂದು ಚಿರತೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಹರಸಾಹಸ ಪಟ್ಟಿದ್ದರು, ಆನೆಗಳಿಂದ ಚಿರತೆ ಜಾಡು ಹಿಡಿಯಲು ಸಾಧ್ಯವಾಗದೇ ಹೋದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಡ್ರೋನ್ ಪ್ರತಾಪನ ಮೊರೆ ಹೋಗಿದ್ದರು.

ಬರಿಗೈನಲ್ಲಿ ಬಂದಿದ್ದ ಪ್ರತಾಪ್:

ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಡ್ರೋನ್ ಪ್ರತಾಪ್‌ನನ್ನು ಸಂಪರ್ಕಿಸಿ, ‘ಆನೆಗಳಿಂದ ಚಿರತೆ ಇರುವ ಜಾಗ ಪತ್ತೆಯಾಗುತ್ತಿಲ್ಲ, ನಿಮ್ಮ ಡ್ರೋನ್ ನಿಂದ ಪತ್ತೆ ಹಚ್ಚಲು ನೆರವಾಗಬಹುದೇ?’ ಎಂದು ಮನವಿ ಮಾಡಿದ್ದರು. ಅದಕ್ಕೆ ಪ್ರತಾಪ್ ಒಪ್ಪಿಕೊಂಡಿದ್ದರು. ಅದರಂತೆ ಮಾರ್ಚ್ ತಿಂಗಳ ಬಹುಶಃ 20ನೇ ತಾರೀಖಿನಂದು ಡ್ರೋನ್ ಪ್ರತಾಪ್ ತುಮಕೂರಿಗೆ ಬಂದಿದ್ದರು. ಆದರೆ ತಮ್ಮೊಂದಿಗೆ ಯಾವುದೇ ಡ್ರೋನ್ ತಂದಿರಲಿಲ್ಲ, ಬರಿಗೈನಲ್ಲಿ ಬಂದಿದ್ದರು! (Tumkurnews.in)

ಹೋದವರು ಬಳಿಕ ಬರಲೇ ಇಲ್ಲ:
ಚಿರತೆ ಹಾವಳಿ ಇದ್ದ ತುಮಕೂರಿನ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದ ಡ್ರೋನ್ ಪ್ರತಾಪ್, ಅರಣ್ಯ ಇಲಾಖೆ ಹಾಗೂ ಚಿರತೆ ಕಾರ್ಯಾಚರಣೆ ತಂಡದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದರು. ಚಿರತೆಗಳ ಜಾಡು ಪತ್ತೆ ಹಚ್ಚಲು ಪ್ರತ್ಯೇಕವಾದ ಡ್ರೋನ್ ತಯಾರಿಸಬೇಕು, ಅದನ್ನು ತಯಾರಿಸಿಕೊಂಡು ಬರುತ್ತೇನೆ ಎಂದು ವಾಪಸು ಹೋದ ಪುಣ್ಯಾತ್ಮ ಮತ್ತೆ ವಾಪಸು ಬರಲೇ ಇಲ್ಲ. ಇತ್ತ, ಡ್ರೋನ್ ಪ್ರತಾಪ್ ಇವತ್ತು ಬರ್ತಾರೆ.. ನಾಳೆ ಬರ್ತಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಕಾದಿದ್ದೇ ಬಂತು. ಈವರೆಗೂ ಆತನ ಸುಳಿವಿಲ್ಲ.
ಒಟ್ಟಾರೆ ಇಡೀ ವಿವಾದದ ಬಗ್ಗೆ ಮಾಹಿತಿ ಪಡೆಯಲು ಅವರಿಗೆ ಫೋನ್ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಇಡೀ ಜಗತ್ತೇ ಬೆರಗುಗಣ್ಣಿನಿಂದ ನೋಡಿದ್ದ ಆತನ ಡ್ರೋನ್ ಕಂಡು‌ ಹಿಡಿದ ಸಾಧನೆ ಸುಳ್ಳು, ಆತ ಯಾವುದೇ ಡ್ರೋನ್ ತಯಾರಿಸಿಲ್ಲ ಎಂಬ ಸುದ್ದಿಯನ್ನು ಜನರಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಿ, ಆತ ನಿಜಕ್ಕೂ ವಂಚನೆ ಮಾಡಿದ್ದೇ ಆದರೆ ಖಂಡಿತವಾಗಿ ಕಾನೂನಿನ ಪಾಠ ಕಲಿಸಬೇಕಾಗುತ್ತದೆ. ಆತ ನಿಜಕ್ಕೂ ಸಾಧನೆ ಮಾಡಿದ್ದೇ ಆದಲ್ಲಿ ದಾಖಲೆಗಳನ್ನು ಬಹಿರಂಗ ಪಡಿಸಬೇಕಾಗುತ್ತದೆ. ಸಾಧನೆ ನಿಜವೇ ಆಗಿದ್ದರೆ ಅವರ ಮೇಲಿನ‌ ಅಭಿಮಾನ ಮತ್ತಷ್ಟು ಹೆಚ್ಚಾಗುತ್ತದೆ.

About The Author

You May Also Like

More From Author

+ There are no comments

Add yours