ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖದ ಪರಿಚಯ!?

1 min read

ತುಮಕೂರು(ಜು.12) tumkurnews.in

( ಭಾನುವಾರದ ರಾಜಕೀಯ ಓದು)

ಜಿಲ್ಲೆಯ ರಾಜಕಾರಣದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಕೆಲವೊಂದು ಮಹತ್ವದ ಬದಲಾವಣೆಗಳನ್ನು ತರುವ ಮುನ್ಸೂಚನೆ ಕಂಡು ಬರುತ್ತಿದೆ.
ಬಲ್ಲ ಮೂಲಗಳ ಪ್ರಕಾರ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಹೊಸ ಮುಖ ಪರಿಚಯವಾಗುವ ಸಾಧ್ಯತೆಗಳಿವೆ. ಬಿಜೆಪಿಯಲ್ಲಿನ ಒಳ ಜಗಳದಿಂದಾಗಿ ಬಿಜೆಪಿಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಇಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಹೊಸ ಮುಖಕ್ಕೆ ಟಿಕೆಟ್ ದೊರೆಯುವ ಸಾಧ್ಯತೆಗಳಿವೆ.
ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿಗೆ ಟಿಕೆಟ್ ಹಂಚಿಕೆಯೇ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತಿದೆ. ಇಲ್ಲಿ ಗೊಲ್ಲ ಸಮುದಾಯದ‌ ಜಿ.ಎನ್ ಬೆಟ್ಟಸ್ವಾಮಿ ಪಕ್ಷದಲ್ಲಿ ಹಿರಿಯ ಮುಖಂಡರಾಗಿದ್ದು, ಹಿಂದುಳಿದ ಸಮುದಾಯಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಈ ಕಾರಣದಿಂದಲೇ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಾಗಿತ್ತು. ಆದರೆ ದುರಾದೃಷ್ಟವಶಾತ್ ಕ್ಷೇತ್ರದ ಜನತೆ ಕೈ ಹಿಡಿಯಲಿಲ್ಲ.
ದಿಲೀಪ್ ಬಂಡಾಯ ಎಫೆಕ್ಟ್:
ಕ್ಷೇತ್ರದ ಮತ್ತೋರ್ವ ಯುವ ನಾಯಕ, ವೀರಶೈವ ಲಿಂಗಾಯತ ಸಮುದಾಯದ ಎಸ್.ಡಿ‌ ದಿಲೀಪ್ ಕುಮಾರ್, ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಸಿಗದೇ ಇದ್ದಾಗ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಕ್ಷೇತ್ರದ ಜನತೆ ಇವರನ್ನು ಕೂಡ ಕೈ ಹಿಡಿಯಲಿಲ್ಲ. ಒಂದು ವೇಳೆ ದಿಲೀಪ್ ಕುಮಾರ್, ಬಿಜೆಪಿಗೆ ಕೆಲಸ ಮಾಡಿದಿದ್ದರೆ ಜಿ.ಎನ್ ಬೆಟ್ಟಸ್ವಾಮಿ ಭಾರಿ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದರು.

ಏಕೆಂದರೆ, ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಆರ್ ಶ್ರೀನಿವಾಸ್ ಪಡೆದಿದ್ದು 55,572 ಮತಗಳು, ಬಿಜೆಪಿಯ ಜಿ.ಎನ್ ಬೆಟ್ಟಸ್ವಾಮಿ ಪಡೆದಿದ್ದು 46, 491 ಮತಗಳನ್ನು, ಬಿಜೆಪಿ ಬಂಡಾಯ ಅಭ್ಯರ್ಥಿ ಎಸ್.ಡಿ‌ ದಿಲೀಪ್ ಕುಮಾರ್ ಗಳಿಸಿದ್ದು 30,528 ಮತಗಳನ್ನು. ಇದರಲ್ಲಿ ಬಿಜೆಪಿ ಅಭ್ಯರ್ಥಿ ಬೆಟ್ಟಸ್ವಾಮಿ ಅವರ ಸೋಲಿನ ಅಂತರ ಕೇವಲ 9,081 ಮತಗಳು. ಒಂದು ವೇಳೆ ದಿಲೀಪ್ ಕುಮಾರ್, ಬಿಜೆಪಿಗೆ ಕೆಲಸ ಮಾಡಿದಿದ್ದರೆ ಇಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿತ್ತು. ಆದರೆ ಹಾಗಾಗಲಿಲ್ಲ.

ಮುಂದಿನ ಚುನಾವಣೆಯಲ್ಲಿ ಈ ಇಬ್ಬರಲ್ಲಿ ಯಾರಿಗೇ ಟಿಕೆಟ್‌ ನೀಡಿದರೂ ಈ ಇತಿಹಾಸ, ಅಸಹಕಾರ ರಿಪೀಟ್ ಆಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಪಕ್ಷ ಸಂಘಟನೆಗೆ ಬಳಸಿಕೊಂಡು ಮೂರನೇ ಅಭ್ಯರ್ಥಿಗೆ ಟಿಕೆಟ್ ನೀಡುವ ಚಿಂತನೆ ಬಿಜೆಪಿಯಲ್ಲಿದೆ.
ಸೋಮಣ್ಣ ಪುತ್ರನಿಗೆ ಮಣೆ:
ಇದೀಗ ಕ್ಷೇತ್ರದಲ್ಲಿ ಹೊಸ ಭವಿಷ್ಯದ ಚರ್ಚೆಯಾಗುತ್ತಿದೆ.
ಅದುವೇ ಅರುಣ್ ಸೋಮಣ್ಣ ಎಂಟ್ರಿ!?
ಹೌದು, ಬಲ್ಲ ಮೂಲಗಳ ಪ್ರಕಾರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಲ್ಲಿ ಅರುಣ್ ಸೋಮಣ್ಣ ಎಂಬ ಹೊಸ ಮುಖವನ್ನು ಬಿಜೆಪಿ ಪರಿಚಯಿಸಲಿದೆ. ಅರುಣ್ ಸೋಮಣ್ಣ, ಬಿಜೆಪಿಯ ಹಿರಿಯ ನಾಯಕರಾದ ಸಚಿವ ವಿ.ಸೋಮಣ್ಣ ಅವರ ಪುತ್ರರಾಗಿದ್ದು, ರಾಜ್ಯ ಬಿಜೆಪಿಯ ಯುವಮೋರ್ಚಾ ಉಪಾಧ್ಯಕ್ಷರಾಗಿ ಜವಬ್ದಾರಿ ನಿರ್ವಹಿಸುತ್ತಿದ್ದಾರೆ.

ಹೊಸ ಆಯ್ಕೆ ಏಕೆ?: ಗುಬ್ಬಿ ಕ್ಷೇತ್ರದಲ್ಲಿ ಜಿ.ಎನ್ ಬೆಟ್ಟ ಸ್ವಾಮಿ ಮತ್ತು ಎಸ್.ಡಿ ದಿಲೀಪ್ ಕುಮಾರ್ ಇಬ್ಬರೂ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಆದರೆ ಒಬ್ಬರಿಗೊಬ್ಬರು ಕೆಲಸ ಮಾಡುವುದಿಲ್ಲ. ಬೆಟ್ಟಸ್ವಾಮಿಗೆ ಟಿಕೆಟ್ ಕೊಟ್ಟರೆ ದಿಲೀಪ್ ಕೆಲಸ ಮಾಡಲ್ಲ, ದಿಲೀಪ್ ಗೆ ಟಿಕೆಟ್ ಕೊಟ್ಟರೆ ಬೆಟ್ಟಸ್ವಾಮಿ ಕೆಲಸ ಮಾಡಲ್ಲ ಎನ್ನುವುದು ಪಕ್ಷದ ನಾಯಕರಿಗೆ ಗೊತ್ತಾಗಿದೆ. ಇವರಿಬ್ಬರ ಕಿತ್ತಾಟದಲ್ಲಿ ಜಿಲ್ಲೆಯಲ್ಲಿ ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರವೊಂದು ಬಿಜೆಪಿಯ ಕೈ ತಪ್ಪುತ್ತಿದೆ. ಇದನ್ನು ಪಕ್ಷದ ನಾಯಕರು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಚುನಾವಣೆಯಲ್ಲಿ ಈ ಲೋಪವನ್ನು ಸರಿ ಪಡಿಸುವ ಸಿದ್ಧತೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರಿಗೂ ಟಿಕೆಟ್ ನಿರಾಕರಿಸಿ, ಪಕ್ಷದ ಕಾರ್ಯಕರ್ತರು ಮತ್ತು ಕ್ಷೇತ್ರದ ಜನತೆ ಬಯಸಿದಂತೆ ಹೊಸ ಮುಖಕ್ಕೆ ಆದ್ಯತೆ ನೀಡಲು ಚಿಂತನೆ ನಡೆದಿದೆ‌.

ಮತ್ತೊಂದು ಕಡೆಯಲ್ಲಿ ತಮ್ಮ ಪುತ್ರನಿಗೆ ಸ್ಥಾನ ಭದ್ರಪಡಿಸುವ ಸಲುವಾಗಿ ಸಚಿವ ವಿ.ಸೋಮಣ್ಣ, ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನಕ್ಕೆ ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ. ಆದರೆ ಸದ್ಯ ಕೊರೋನಾ ನಿಯಂತ್ರಣ ತಲೆಬಿಸಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಈ ಬಗ್ಗೆ ಹೆಚ್ಚಾಗಿ ಗಮನ ಹರಿಸಿಲ್ಲ. ಮುಂದಿನ ದಿನಗಳಲ್ಲಿ ಯಾವ್ಯಾವ ಬೆಳವಣಿಗೆಗಳು ಸಂಭವಿಸುತ್ತದೆ ಎಂದು ಕಾದು ನೋಡಬೇಕಿದೆ.

ಮತಗಳ ಹಂಚಿಕೆ ಹೇಗಿದೆ?:
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 1,70,000 ಮತದಾರರಿದ್ದಾರೆ.
ಈ ಪೈಕಿ
ಲಿಂಗಾಯತ- 40,000
ಎಸ್ಸಿ, ಎಸ್ಟಿ- 35,000
ಗೊಲ್ಲ- 30,000
ಒಕ್ಕಲಿಗ- 28,000
ಅಲ್ಪಸಂಖ್ಯಾತ – 10,000
ಕುರುಬ- 10,000
ಉಳಿದ ಮತಗಳು
ತಿಗಳ, ಇತರರಿದ್ದಾರೆ.

About The Author

You May Also Like

More From Author

+ There are no comments

Add yours