ತುಮಕೂರು KSRTC ಹೊಸ ಬಸ್ ನಿಲ್ದಾಣ: ಕಾರ್ಯಾರಂಭಕ್ಕೂ ಮುನ್ನವೇ ಮಳೆ ನೀರು ಸೋರಿಕೆ! ವಿಡಿಯೋ

1 min read

ತುಮಕೂರು: KSRTC ಹೊಸ ಬಸ್ ನಿಲ್ದಾಣದಲ್ಲಿ ಮಳೆ ನೀರು ಸೋರಿಕೆ ಆರಂಭ!

ತಾಪಮಾನ ತಡೆದುಕೊಳ್ಳದೇ ಬಿರುಕು: ಇದೀಗ ಮಳೆ ನೀರು ತಡೆಯದೇ ಸೋರಿಕೆ!

Tumkurnews
ತುಮಕೂರು: ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ದೇವರಾಜ ಅರಸು ಕೆ.ಎಸ್. ಆರ್.ಟಿ.ಸಿ ಬಸ್ ನಿಲ್ದಾಣವು ಕಾರ್ಯಾರಂಭಕ್ಕೂ ಮುನ್ನವೇ ಬಿರುಕು ಬಿಟ್ಟಿರುವ ಬಗ್ಗೆ ‘ತುಮಕೂರು ನ್ಯೂಸ್‘ (www.tumkurnews.in) ವಿಸ್ತೃತವಾದ ವರದಿ ಪ್ರಕಟಿಸಿತ್ತು. ಆದರೆ ಇದೀಗ ಬಿರುಕಷ್ಟೇ‌ ಅಲ್ಲ, ಸೋರಿಕೆ ಆರಂಭವಾಗಿದೆ!
ಹೌದು, ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವು ಮಳೆಯಿಂದಾಗಿ ಸೋರುತ್ತಿದೆ. ಅಚ್ಚರಿ ಎನ್ನಿಸಿದರೂ ಇದು ನಿಜ.

ತುಮಕೂರು: ಕಾರ್ಯಾರಂಭಕ್ಕೂ ಮುನ್ನವೇ ಹೊಸ ಬಸ್ ನಿಲ್ದಾಣದಲ್ಲಿ ಬಿರುಕು! ಅರೆಬರೆ ಆರಂಭಕ್ಕೆ ಸಿದ್ಧತೆ
ಜಿಲ್ಲೆಯಲ್ಲಿ ಈಗಷ್ಟೇ ಮಳೆ ಉತ್ತಮವಾಗಿ ಸುರಿಯುತ್ತಿದೆ. ಈ ಮಳೆಗೆ ಸುಮಾರು 100 ಕೋಟಿ ರೂ.ಗಳಿಗೂ‌ ಅಧಿಕ ಮೊತ್ತದ ಹೊಸ ಬಸ್ ನಿಲ್ದಾಣದ ಬಣ್ಣ ಕಳಚಿದೆ. ಹೊಸ ಬಸ್ ನಿಲ್ದಾಣವು ಇನ್ನೂ ನಿರ್ಮಾಣ ಹಂತದಲ್ಲಿದೆ. ಬಸ್’ಗಳ ಕಾರ್ಯಾಚರಣೆ ಆರಂಭವಾಗಿಲ್ಲ. ಅದಾಗಲೇ ಮಳೆಯಿಂದ ಸೋರಿಕೆ ಆರಂಭವಾಗಿದೆ. ಇದು ಕಾಮಗಾರಿ ಎಷ್ಟರ ಮಟ್ಟಿಗೆ ಗುಣಮುಟ್ಟದಿಂದ ಕೂಡಿದೆ ಎಂಬ ಪ್ರಶ್ನೆಯನ್ನು ಮೂಡಿಸಿದೆ.

(ತುಮಕೂರು ದೇವರಾಜ ಅರಸು ನೂತನ ಬಸ್ ನಿಲ್ದಾಣದ ಮೇಲ್ಛಾವಣಿಯಲ್ಲಿ ಮಳೆ ನೀರು ಸೋರುತ್ತಿರುವುದು)

ತಾಪಮಾನ ತಡೆಯದೆ ಬಿರುಕು!: ನೂತನ ಬಸ್ ನಿಲ್ದಾಣವು ಬಿರುಕು ಬಿಟ್ಟಿರುವ ಬಗ್ಗೆ ಮಾಡಿದ್ದ ವರದಿಗೆ ಕೆ.ಎಸ್.ಆರ್.ಟಿ.ಸಿ ಪ್ರತಿಕ್ರಿಯೆ ನೀಡಿದ್ದು, ಬಿರುಕಿಗೆ ತಾಪಮಾನ ಕಾರಣ ಎಂದು ಸ್ಪಷ್ಟನೆ ನೀಡಿದೆ.
“ವರದಿ ಕುರಿತು ನುರಿತ ಕಟ್ಟಡ ವಿನ್ಯಾಸಕಾರರಿಂದ ಪರಿವೀಕ್ಷಣೆ ಮಾಡಿಸಲಾಗಿದೆ. ಅವರ ವಿಶ್ಲೇಷಣೆಯಂತೆ ಯು.ಜೆ.ಎಫ್‌ನಲ್ಲಿ ಈಗ ಬಿಟ್ಟಿರುವ ಬಿರುಕುಗಳು ತಾಪಮಾನ ಬದಲಾವಣೆಯಿಂದ ವ್ಯತ್ಯಾಸದಿಂದ ಮೇಲಿನ ಕಾಂಕ್ರೀಟು ಪದರಿನಲ್ಲಿ ಬಿರುಕು ಬಿಟ್ಟಿರುತ್ತವೆ. ಇವು ಮೂಲ ಕಾಂಕ್ರೀಟ್ ಸ್ಟಾಬ್‌ಗೆ ಯಾವುದೇ ತರಹದ ಧಕ್ಕೆ, ಹಾನಿಯನ್ನುಂಟು ಮಾಡಿರುವುದಿಲ್ಲ. ಕಟ್ಟಡದ ತಾಂತ್ರಿಕತೆಯ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮೇಲೆ ಬಿರುಕುಗಳನ್ನು ಮತ್ತೆ ತೆರೆದು ಡಾಂಬರ್ ರಸಾಯನಿಕದಿಂದ ತುಂಬಿ ಭದ್ರ ಪಡಿಸಲಾಗುವುದು.ಶೇ.95ರಷ್ಟು ಕಾಮಗಾರಿಯು ಪೂರ್ಣಗೊಂಡಿದೆ. ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವ ಕೆಲಸ ಪ್ರಗತಿಯಲ್ಲಿರುತ್ತದೆ” ಎಂದು ಕೆ.ಎಸ್.ಆರ್.ಟಿ.ಸಿ‌ ಕಾರ್ಯನಿರ್ವಾಹಕ ಅಭಿಯಂತರರು ಪ್ರತಿಕ್ರಿಯಿಸಿದ್ದಾರೆ.

(ಹೊಸ ಬಸ್‌ನಿಲ್ದಾಣದಲ್ಲಿ ಮಳೆ ನೀರು ಸೋರಿರುವುದು)

ಜನರಿಗೆ ನಿರಾಸೆ: ಒಟ್ಟಿನಲ್ಲಿ 100 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಮುಗಿಸಲು ರಾಜಕಾರಣಿಗಳು, ಅಧಿಕಾರಿಗಳು ತರಾತುರಿ ತೋರಿದರೇ ಹೊರತು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಕಾಳಜಿ ತೋರಲಿಲ್ಲ ಎನ್ನುವುದು ವಿಪರ್ಯಾಸ‌. ತುಮಕೂರಿಗೆ ಹೆಗ್ಗುರುತಾಗಬೇಕಿದ್ದ ಹೊಸ ಬಸ್‌ನಿಲ್ದಾಣವು ಹೀಗೆ ಕಾರ್ಯಾಚರಣೆಗೆ ಮುನ್ನವೇ ನಿರಾಸೆ ಮೂಡಿಸಿರುವುದು ಜಿಲ್ಲೆಯ ಜನತೆಗೆ ಬೇಸರ ತರಿಸಿದೆ.

(ಮಳೆ ನೀರು ಸೋರುತ್ತಿರುವ ವಿಡಿಯೋ: ನೋಡಿ)

About The Author

You May Also Like

More From Author

+ There are no comments

Add yours