ತುಮಕೂರು: ಕಾರ್ಯಾರಂಭಕ್ಕೂ ಮುನ್ನವೇ ಹೊಸ ಬಸ್ ನಿಲ್ದಾಣದಲ್ಲಿ ಬಿರುಕು! ಅರೆಬರೆ ಆರಂಭಕ್ಕೆ ಸಿದ್ಧತೆ

1 min read

 

ಕಾರ್ಯಾರಂಭಕ್ಕೂ ಮುನ್ನವೇ ಹೊಸ ಬಸ್ ನಿಲ್ದಾಣದಲ್ಲಿ ಬಿರುಕು!

ಅರೆಬರೆ ಕಾಮಗಾರಿಯೊಂದಿಗೆ ಆರಂಭಕ್ಕೆ ಚಿಂತನೆ: ಸಾರ್ವಜನಿಕರ ವಿರೋಧ

Tumkurnews
ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕೆ.ಎಸ್.ಆರ್.ಟಿ.ಸಿ ನೂತನ ಬಸ್ ನಿಲ್ದಾಣವು ಕಾರ್ಯಾರಂಭಕ್ಕೆ ಮುನ್ನವೇ ಬಿರುಕು ಬಿಟ್ಟಿದೆ!
ಹೌದು, ನೂತನ ಬಸ್‌ ನಿಲ್ದಾಣದ ಆರಂಭಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ತರಾತುರಿ ತೋರುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುತ್ತಿಲ್ಲ. ಪರಿಣಾಮ ಸುಮಾರು 80 ಕೋಟಿ ರೂಪಾಯಿ ವೆಚ್ಚದ ಬಸ್ ನಿಲ್ದಾಣವು ಮುಂದಿನ ಎಷ್ಟು ವರ್ಷಗಳು ಬಾಳಿಕೆ ಬರುತ್ತದೆ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

(ಚಿತ್ರ: ಬಸ್ ನಿಲ್ದಾಣದ ಒಳಾಂಗಣ ಕಾಮಗಾರಿ ಬಾಕಿ ಇರುವುದು)
ತರಾತುರಿಯಿಂದ ಗುಣಮಟ್ಟ ಕುಸಿತ?: ಅಧಿಕಾರಿಗಳು, ಜನಪ್ರತಿನಿಧಿಗಳು ಬಸ್ ನಿಲ್ದಾಣದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಗುತ್ತಿಗೆದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಗುತ್ತಿಗೆದಾರರು ತುರ್ತಾಗಿ ಕಾಮಗಾರಿ ಮುಗಿಸುವ ಒತ್ತಡದಲ್ಲಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಪರಿಣಾಮವಾಗಿ ಬಸ್ ನಿಲ್ದಾಣ ಇನ್ನೂ ಕಾರ್ಯಾರಂಭವಾಗಿಲ್ಲ. ಆಗಲೇ ಅಲ್ಲಲ್ಲಿ ಬಿರುಕು ಬಿಟ್ಟುಕೊಂಡಿದ್ದು, ಪ್ಯಾಚ್ ಹಾಕುವ ಕೆಲಸ ನಡೆಯುತ್ತಿದೆ.
ಅರೆ ಬರೆ ಹಸ್ತಾಂತರಕ್ಕೆ ಸಿದ್ಧತೆ: ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕನಿಷ್ಠ ಮೂರ್ನಾಲ್ಕು ತಿಂಗಳು ಕಾಲಾವಕಾಶ ಬೇಕು ಎನ್ನಲಾಗಿದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಬಸ್‌ ನಿಲ್ದಾಣದಲ್ಲಿ ಶತಾಯಗತಾಯ ಮುಂದಿನ ತಿಂಗಳು ಬಸ್’ಗಳ ಕಾರ್ಯಾಚರಣೆ ಆರಂಭಿಸುವ ಯೋಚನೆಯಲ್ಲಿದ್ದಾರೆ. ಹೀಗಾಗಿ ಅರೆಬರೆ ಕಾಮಗಾರಿಯೊಂದಿಗೆ ಬಸ್ ನಿಲ್ದಾಣವನ್ನು ಕೆ.ಎಸ್.ಆರ್.ಟಿ.ಸಿಗೆ ಹಸ್ತಾಂತರಿಸುವ ಸಿದ್ಧತೆಗಳು ನಡೆಯುತ್ತಿವೆ.

ತುಮಕೂರು: KSRTC ಹೊಸ ಬಸ್‌ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಭೇಟಿ: ಇನ್ನೂ ಏನೇನು ಕೆಲಸ ಬಾಕಿ ಇದೆ ಗೊತ್ತೇ?
ಇಷ್ಟೊಂದು ಕೆಲಸ ಬಾಕಿ ಇದೆ: ಹೊಸ ಬಸ್ ನಿಲ್ದಾಣದಲ್ಲಿ ಲಿಫ್ಟ್ ಕಾರ್ಯಾಚರಣೆ, ಪ್ಲಂಬಿಂಗ್ ಕೆಲಸ, ಮುಂಭಾಗದ ಆವರಣ ಗೋಡೆ, ಶೌಚಾಲಯ, ವಿದ್ಯುತ್ ಸಂಪರ್ಕ, ಫಾಲ್ ಸೀಲಿಂಗ್, ಸೈನ್ ಬೋರ್ಡ್, ಸಿಸಿಟಿವಿ ಕ್ಯಾಮೆರಾ, ಅಗ್ನಿಶಾಮಕ ಯಾಂತ್ರಿಕ ಕೆಲಸ, ಹೊರ ಹೋಗುವ ಹಾಗೂ ಒಳ ಬರುವ ಮಾರ್ಗ ನಿರ್ಮಾಣ, ಲ್ಯಾಂಡ್ ಸ್ಕೇಪಿಂಗ್ ಕೆಲಸ, ಅಂತಿಮ ಕೋಟ್ ಪೇಂಟ್, ರ್ಯಾಂಪ್ ಕೆಲಸ, ಸ್ಟ್ರಕ್ಚರಲ್ ಮೆರುಗು ಕೆಲಸ, ಟಿಸಿ ಪಾಯಿಂಟ್ ಮತ್ತು ಪೊಲೀಸ್ ಚೌಕಿ ನಿರ್ಮಾಣ ಕಾಮಗಾರಿಗಳು ಬಾಕಿ ಇವೆ.
ತರಾತುರಿ ಏಕೆ?: ಬಾಕಿ ಇರುವ ಮೇಲ್ಕಂಡ ಕಾಮಗಾರಿಗಳನ್ನು ಮುಂದಿನ ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಮುಗಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಒಂದೇ ಬಾರಿಗೆ ಗುತ್ತಿಗೆದಾರರಿಂದ ಕೆ.ಎಸ್.ಆರ್.ಟಿ.ಸಿಗೆ ಬಸ್ ನಿಲ್ದಾಣವನ್ನು ಹಸ್ತಾಂತರ ಮಾಡಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಅರೆಬರೆ ಕಾಮಗಾರಿಯೊಂದಿಗೆ ಬಸ್ ಕಾರ್ಯಾಚರಣೆ ಆರಂಭವಾದಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳಿಗೆ ತೊಂದರೆಯಾಗುತ್ತದೆ. ಜೊತೆಗೆ ಬಾಕಿ ಕಾಮಗಾರಿಗಳಿಗೂ ಹಿನ್ನಡೆಯಾಗುತ್ತದೆ. ಫ್ಲಾಟ್ ಫಾರಂ, ಶೌಚಾಲಯ, ಕುಡಿಯುವ ನೀರು, ನಿಗಮದ ಕಚೇರಿ, ಹೋಟೆಲ್, ಅಂಗಡಿಗಳು ಸೇರಿದಂತೆ ಎಲ್ಲಾ ಬಗೆಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ ಬಳಿಕವೇ ಹಾಗೂ ಸಂಪೂರ್ಣವಾಗಿ ಕಾಮಗಾರಿ ಮುಗಿದ ನಂತರ ಒಂದೇ ಹಂತದಲ್ಲಿ ಬಸ್ ಸಂಚಾರ ಆರಂಭಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರು, ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಉಂಟಾಗುತ್ತದೆ. ಹಂತ ಹಂತವಾಗಿ ಬಸ್ ನಿಲ್ದಾಣವನ್ನು ಆರಂಭಿಸುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಕೆಳ ಅಂತಸ್ತಿನಲ್ಲಿ ಬಸ್ ಸಂಚಾರ ಆರಂಭಿಸಿ, ಮೇಲಂತಸ್ತಿನಲ್ಲಿ ಕಾಮಗಾರಿ ನಡೆಸುವುದರಿಂದ ಅಪಾಯವೇ ಹೆಚ್ಚು. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದ್ದು, ಜಿಲ್ಲಾಡಳಿತ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂದು ಕಾದು ನೋಡಬೇಕಿದೆ.

ಚಿತ್ರ: ಕಾರ್ಯಾರಂಭಕ್ಕೆ ಮುನ್ನವೇ ನೂತನ ಬಸ್ ನಿಲ್ದಾಣ ಅಲ್ಲಲ್ಲಿ ಬಿರುಕು ಬಿಟ್ಟಿರುವುದು

About The Author

You May Also Like

More From Author

+ There are no comments

Add yours