ವೈದ್ಯರು ಬಯೋಮೆಟ್ರಿಕ್ ನೀಡಿ ಹೋಗ್ತಾರೆ; ವೈದ್ಯರ ಚಕ್ಕರ್ ಬಗ್ಗೆ ಸಚಿವ ಗುಂಡೂರಾವ್ ಗರಂ
Tumkurnews
ತುಮಕೂರು; ಜಿಲ್ಲಾಸ್ಪತ್ರೆ ಹೊರತುಪಡಿಸಿ ಪಿಹೆಚ್‍ಸಿ ಮತ್ತು ಸಿಹೆಚ್‍ಸಿಗಳಲ್ಲಿ ಕೆಲವೆಡೆ ಕೇವಲ ಬಯೋಮೆಟ್ರಿಕ್ ಹಾಜರಾತಿ ನೀಡಿ ವೈದ್ಯರು ಹೊರಹೋಗುತ್ತಾರೆ ಎನ್ನುವ ದೂರುಗಳಿದ್ದು, ಇದು ಸಲ್ಲದು. ಕಡ್ಡಾಯವಾಗಿ ವೈದ್ಯರು 8 ತಾಸು ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಬೇಕು. ಜಿಲ್ಲಾ ಪಂಚಾಯತ್ ಸಿಇಓ ಈ ಕುರಿತಂತೆ ಗಮನ ಹರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದ ಜಿಲ್ಲಾ ಆಸ್ಪತ್ರೆಗೆ ಇಂದು ಭೇಟಿ ನೀಡಿ, ವಿವಿಧ ವಿಭಾಗಗಳ ಪರಿಶೀಲನೆ ನಡೆಸಿದ ನಂತರ ವೈದ್ಯಾಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಔಷಧ ದಾಸ್ತಾನು ನಿಗಮದ ಕಾರ್ಯ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಸಕಾಲದಲ್ಲಿ ಜಿಲ್ಲೆಗಳಿಗೆ ಔಷಧಿ ಒದಗಿಸುವ ಕ್ರಮಕೈಗೊಳ್ಳಲಾಗುವುದು ಎಂದರು.
ಎಬಿಎಆರ್‍ಕೆ ಯೋಜನೆಗೆ ಹೆಚ್ಚು ಜನ ನೋಂದಣಿಯಾಗುವ ಹಾಗೆ ನೋಡಿಕೊಳ್ಳಬೇಕು. ಇದರಿಂದ ಜಿಲ್ಲಾಸ್ಪತ್ರೆಗೆ 10ಕೋಟಿ ಆದಾಯ ಬಂದಲ್ಲಿ ಎಲ್ಲಾ ಮೂಲ ಸೌಲಭ್ಯಗಳನ್ನು ನಿಮ್ಮ ಹಂತದಲ್ಲಿಯೇ ಮಾಡಿಕೊಳ್ಳಲು ಅನುಕೂಲವಾಗಲಿದೆ.
2 ಸಾವಿರ ಉದ್ಯೋಗ, ಈ ಬಾರಿ ಸ್ವಾತಂತ್ರ್ಯ ದಿನ ಹೇಗಿರುತ್ತೆ ಗೊತ್ತೇ? ಜಿಲ್ಲಾಧಿಕಾರಿ
ಕೇಂದ್ರ ಕಚೇರಿಯಿಂದ ಔಷಧ ಪೂರೈಕೆ ಸಕಾಲದಲ್ಲಿ ಆಗದಿದ್ದಲ್ಲಿ ಸ್ಥಳೀಯವಾಗಿಯೇ ಔಷಧಿ ಖರೀದಿಸಿ ರೋಗಿಗಳಿಗೆ ಪೂರೈಸಲು ಅವಕಾಶ ನೀಡಲಾಗಿದೆ. ಅನಾವಶ್ಯಕವಾಗಿ ರೋಗಿಗಳನ್ನು ಹೊರಗಡೆಯಿಂದ ಔಷಧಿ ಖರೀದಿಸುವಂತೆ ಸೂಚಿಸಬಾರದು ಮತ್ತು ಆಸ್ಪತ್ರೆಯ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ಪೂರೈಸುವಂತೆ ಸೂಚಿಸಿದರು.
ಸಿ ಸೆಕ್ಷನ್ ಹೆರಿಗೆ ಪ್ರಕರಣಗಳನ್ನು ಕಡಿಮೆ ಮಾಡಬೇಕು ಹಾಗೂ ಸಹಜ ಹೆರಿಗೆಗೆ ಪ್ರೋತ್ಸಾಹಿಸಬೇಕು. ಜಿಲ್ಲೆಯಲ್ಲಿ ಸಿ ಸೆಕ್ಷನ್ ಹೆರಿಗೆ ಪ್ರಕರಣ ಶೇ.50ರಷ್ಟಿದ್ದು, ಇದು ಕಡಿಮೆಯಾಗಬೇಕು. ಇನ್ನು ಮುಂದೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಸಿ ಸೆಕ್ಷನ್ ಪ್ರಕರಣ ಕುರಿತಂತೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಗೃಹಲಕ್ಷ್ಮೀ; ತುಮಕೂರು ಜಿಲ್ಲೆಯಲ್ಲಿ ನೋಂದಣಿ ಯಾವಾಗ? ಎಲ್ಲಿ? ಹೇಗೆ? ಇಲ್ಲಿದೆ ಮಾಹಿತಿ
ಕೀಲು ಮೂಳೆ ವಿಭಾಗದಲ್ಲಿ ಅನಸ್ತೇಷಿಯ ಕೊರತೆ ಇದ್ದು, ಎನ್.ಹೆಚ್.ಎಂ. ಅಡಿಯಲ್ಲಿ ಅನಸ್ತೇಷಿಯ ತಜ್ಞರನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ವೀಣಾ ಅವರಿಗೆ ಸೂಚಿಸಿದ ಅವರು, ಜಿಲ್ಲೆಯಲ್ಲಿ ಹೆಚ್.ಐ.ವಿ. ಪ್ರಕರಣಗಳು ಹೆಚ್ಚಾಗದಂತೆ ಲೈಂಗಿಕ ಕಾರ್ಯಕರ್ತೆಯರಿಗೆ ಆರೋಗ್ಯದ ಕುರಿತು ಅರಿವು ಮೂಡಿಸಬೇಕು. ಟ್ರಾಮಾ ಕೇರ್ ಸೆಂಟರ್‌ನ ಸಿಬ್ಬಂದಿ ನೇಮಕಾತಿ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ, ಜಿಲ್ಲಾ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಒಬ್ಬರು ಇದ್ದು, ಮತ್ತೊಬ್ಬರನ್ನು ನೇಮಕ ಮಾಡುವ ಸಂಬಂಧ ಪರಿಶೀಲಿಸುವುದಾಗಿ ತಿಳಿಸಿದರು.
ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್‍ನಲ್ಲಿ ಇಬ್ಬರು ತಂತ್ರಜ್ಞರು ಇದ್ದು, ಕನಿಷ್ಟ ಮೂರು ತಂತ್ರಜ್ಞರನ್ನು ನೇಮಕ ಮಾಡುವ ಸಂಬಂಧ ಪರಿಶೀಲಿಸುವುದಾಗಿ ತಿಳಿಸಿದ ಅವರು, ಜಿಲ್ಲೆಯಲ್ಲಿ ಟಿಬಿ ಖಾಯಿಲೆಯಿಂದ ಮರಣ ಹೊಂದುವ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿಯಬೇಕು ಎಂದು ಸೂಚಿಸಿದರು.
ಸಿದ್ದಾರ್ಥ ಸೂಪರ್ ಸ್ಪೆಷಾಲಿಟಿ OPD ಹಾಗೂ ಸಿಬ್ಬಂದಿ ವಸತಿ ಗೃಹ ಉದ್ಘಾಟನೆ
ಬೀದಿ ನಾಯಿ ಕಡಿತ ಪ್ರಕರಣಗಳು ಹೆಚ್ಚಿರುವ ಕುರಿತು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದಾಗ, ಸಾಕಷ್ಟು ಔಷಧಿ ದಾಸ್ತಾನು ಹೊಂದಬೇಕು ಹಾಗೂ ಪಾಲಿಕೆಯಿಂದ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮಗಳನ್ನು ಆಯೋಜಿಸಿ ಚುಚ್ಚು ಮದ್ದು ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಹೋಬಳಿ ಮಟ್ಟದಲ್ಲಿ ಸುಸಜ್ಜಿತವಾದ ಆಂಬುಲೆನ್ಸ್ ವಾಹನಗಳನ್ನು ಒದಗಿಸಿಕೊಡಬೇಕು. ವೈದ್ಯರು ಕೇಂದ್ರ ಸ್ಥಾನದಲ್ಲಿರಬೇಕಾದರೆ ಅವರಿಗೆ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸುಧಾರಿತ ವಸತಿ ಗೃಹ ವ್ಯವಸ್ಥೆಯಾಗಬೇಕು. 400 ಹಾಸಿಗೆಗಳುಳ್ಳ ತುಮಕೂರು ಜಿಲ್ಲಾಸ್ಪತ್ರೆಗೆ ಪ್ರತಿ ದಿನ ಓಪಿಡಿ ವಿಭಾಗಕ್ಕೆ 1000ಕ್ಕೂ ಹೆಚ್ಚು ರೋಗಿಗಳು ಬರುವ ಕಾರಣ ಮತ್ತಷ್ಟು ಹಾಸಿಗೆಗಳನ್ನು ನೀಡುವ ವ್ಯವಸ್ಥೆಯಾಗಬೇಕು, ಜಿಲ್ಲೆಯ ಕೈಗಾರಿಕಾ ಕಾರಿಡಾರ್ ಮತ್ತು ಹೆಚ್‍ಎಎಲ್ ಫ್ಯಾಕ್ಟರಿ ಘಟಕಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಜನರು ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ವಾಸ್ತವ್ಯ ಮಾಡುವ ಕಾರಣ ಮುಂದಿನ ದೂರದೃಷ್ಟಿ ಇಟ್ಟುಕೊಂಡು ಸೂಕ್ತ ಆರೋಗ್ಯ ಯೋಜನೆಯನ್ನು ತಯಾರಿಸಿಕೊಂಡುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.
ಆರೋಗ್ಯ ಇಲಾಖೆಯಲ್ಲಿ ಉದ್ಯೋಗ; ಆಕಾಂಕ್ಷಿಗಳಿಗೆ ಶುಭ ಸುದ್ದಿ
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್ ಗೌಡ, ಡಾ.ರಂಗನಾಥ್, ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್, ಆರೋಗ್ಯ ಇಲಾಖೆಯ ಪ್ರಿನ್ಸಿಪಾಲ್ ಸೆಕ್ರೆಟರಿ ಅನಿಲ್ ಕುಮಾರ್, ಎನ್‍ಹೆಚ್‍ಎಂ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್, ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ ಸಿಇಓ ಜಿ. ಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ ಹಾಗೂ ಇತರೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
+ There are no comments
Add yours