ಶಿರಾಗೇಟ್‍’ಗೆ ಪ್ರತಿ 20 ನಿಮಿಷಕ್ಕೊಮ್ಮೆ ನಗರ ಸಾರಿಗೆ: ಡಿಸಿ ಶುಭ‌ಕಲ್ಯಾಣ್

1 min read

 

ಪ್ರತಿ 20 ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್‍ಗಳ ಸಂಚಾರ: ಡಿಸಿ ಶುಭ ಕಲ್ಯಾಣ್ ಸೂಚನ

Tumkurnews
ತುಮಕೂರು: ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಬಸ್ ನಿಲ್ದಾಣದಿಂದ ಗುಬ್ಬಿ ಗೇಟ್ ಮಾರ್ಗವಾಗಿ ರಾಷ್ಟ್ರಿಯ ಹೆದ್ದಾರಿ ಮೂಲಕ ಶಿರಾಗೇಟ್‍ವರೆಗೂ ಪ್ರತಿ 20 ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್‍ಗಳ ವ್ಯವಸ್ಥೆಯನ್ನು ಇಂದಿನಿಂದ ಕಲ್ಪಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಕಾಮಗಾರಿ ಪ್ರಗತಿ ಕುರಿತ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪ್ರತಿ ದಿನ ದುಡಿಯುವ ಕಾರ್ಮಿಕ ವರ್ಗದವರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮತ್ತು ತುಮಕೂರು ನಗರದ ಬಸ್ ನಿಲ್ದಾಣದಿಂದ ಗುಬ್ಬಿಗೇಟ್ ಮಾರ್ಗವಾಗಿ ರಾಷ್ಟ್ರಿಯ ಹೆದ್ದಾರಿ ಮೂಲಕ ಶಿರಾಗೇಟ್‍ವರೆಗೂ ಪ್ರತಿ 20 ನಿಮಿಷಕ್ಕೊಮ್ಮೆ ಪ್ರತಿ ದಿನ ಬೆಳಿಗ್ಗೆ 7 ರಿಂದ ನಗರ ಸಾರಿಗೆ ಮಿನಿ ಬಸ್‍ಗಳ ವ್ಯವಸ್ಥೆಯನ್ನು ಇಂದಿನಿಂದ ಕಲ್ಪಿಸಿ ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ-4ರ ಸರಪಳಿ 71.29 ಕಿ.ಮೀ.ನಲ್ಲಿ ಅಮಾನಿಕರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯು ಪ್ರಸ್ತುತ ಫೌಂಡೇಷನ್ ಬೆಡ್‍ವರೆಗೂ ಕಾಂಕ್ರೀಟ್ ಪ್ರಗತಿಯಾಗಿರುವ ಬಗ್ಗೆ ಪರಿಶೀಲಿಸಿದ ಅವರು, ಕಾಮಗಾರಿ ಪೂರ್ಣಗೊಳ್ಳಲು ಸುಮಾರು 120 ದಿನಗಳು ಅಗತ್ಯವಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೈಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿ ಬಳಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮವಹಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕಾಮಗಾರಿ ಪೂರ್ಣಗೊಳ್ಳುವವರೆಗೂ ಪ್ರತಿದಿನ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.
ಲಘು ವಾಹನಗಳ ಸಂಚಾರಕ್ಕೆ ಅವಕಾಶ: ವಾಹನ ದಟ್ಟಣೆ ನಿವಾರಿಸುವ ನಿಟ್ಟನಲ್ಲಿ ನಗರದ ಅಮಾನಿಕೆರೆ ಕೋಡಿ ಹಳ್ಳಕ್ಕೆ ಕೈಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿ ಸರ್ವೀಸ್ ರಸ್ತೆಯನ್ನು ಇನ್ನು 7 ದಿನಗಳೊಳಗಾಗಿ ಪೂರ್ಣಗೊಳಿಸಿ ಶಿರಾ ಹಾಗೂ ಮಧುಗಿರಿ ಕಡೆಯಿಂದ ತುಮಕೂರು ನಗರಕ್ಕೆ ಬರುವ ಬ್ಯೆಕ್, ಆಟೋದಂತಹ ಎಲ್ಲಾ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವಿ ಅವರಿಗೆ ಸೂಚಿಸಿದರು. ಲಘು ವಾಹನಗಳ ಸಂಚಾರಕ್ಕೆ ಮುಕ್ತವಾದ ನಂತರ ವ್ಯವಸ್ಥಿತವಾಗಿ ಲಘು ವಾಹನಗಳ ಸುಗಮ ಸಂಚಾರಕ್ಕೆ ಕಲ್ಪಿಸುವಂತೆ ಪೊಲೀಸ್ ಅಧಿಕಾರಿಗಳಗೆ ಸೂಚಿಸಿದ ಅವರು ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವಿದ್ಯುದ್ದೀಪ ಅಳವಡಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ವರ್ತುಲ ರಸ್ತೆ ಮೂಲಕ ಸಂಚರಿಸುತ್ತಿರುವ ಭಾರಿ ವಾಹನಗಳು ಸುಗಮವಾಗಿ ಸಂಚಾರಿಸುವ ನಿಟ್ಟಿನಲ್ಲಿ ರಸ್ತೆಯನ್ನು ಸಮತಟ್ಟುಗೊಳಿಸಬೇಕು ಹಾಗೂ ಮಳೆ ಬಂದಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿದರು. ಮಹಾನಗರಪಾಲಿಕೆ ಆಯುಕ್ತೆ ಅಶ್ವಿಜ, ಡಿಡಿಎಲ್‍ಆರ್ ನಿರಂಜನ್ ಎಂ.ಎನ್., ಡಿವೈಎಸ್‍ಪಿ ಚಂದ್ರಶೇಖರ್, ಎಇಇ ವಿನಯ್, ಉಪ ವಿಭಾಗಾಧಿಕಾರಿ ಸಪ್ತಶ್ರೀ, ಗೋಟೂರು ಶಿವಪ್ಪ, ತಹಸೀಲ್ದಾರ್ ಎಂ. ಸಿದ್ದೇಶ್, ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours