2 ಸಾವಿರ ಉದ್ಯೋಗ, ಈ ಬಾರಿ ಸ್ವಾತಂತ್ರ್ಯ ದಿನ ಹೇಗಿರುತ್ತೆ ಗೊತ್ತೇ? ಜಿಲ್ಲಾಧಿಕಾರಿ

1 min read

ಅರ್ಥಪೂರ್ಣ ಸ್ವಾತಂತ್ಯ ದಿನಾಚರಣೆ ಆಚರಣೆಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಕರೆ

Tumkurnews
ತುಮಕೂರು; ಆಗಸ್ಟ್ 15, 2023ರ ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲರೂ ಒಗ್ಗೂಡಿ ಉತ್ಸುಕತೆಯಿಂದ ಆಚರಿಸುವ ಸಂಬಂಧ ಸಕಲ ಸಿದ್ದತೆಯನ್ನು ಕೈಗೊಳ್ಳುವಂತೆ ಮತ್ತು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ, ದೇಶಭಕ್ತಿ ಬಿಂಬಿಸುವ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಂದಿನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ಸ್ವಾತಂತ್ರ್ಯ ದಿನಾಚರಣೆಯ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆಯಂದು ನಾವೆಲ್ಲರೂ ಸಂತಸದಿಂದ ಭಾಗವಹಿಸಿ ಅರ್ಥಪೂರ್ಣವಾಗಿ ಹಬ್ಬದ ರೀತಿ ಅಂದಿನ ದಿನವನ್ನು ಆಚರಿಸಬೇಕು ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೈಗಾರಿಕಾ ಇಲಾಖೆ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸುಮಾರು ಎರಡು ಸಾವಿರ ಯುವಕರಿಗೆ ಉದ್ಯೋಗವನ್ನು ಒದಗಿಸುವ ಪ್ರಮಾಣ ಪತ್ರವನ್ನು ವಿತರಿಸಬೇಕು. ಈ ನಿಟ್ಟಿನಲ್ಲಿ ವಿವಿಧ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಿ ಉದ್ಯೋಗ ದೊರಕಿಸಿ ಕೊಡುವ ಸಂಬಂಧ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಕೌಶಲ್ಯಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಹಾಗೂ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಆರೋಗ್ಯ ಇಲಾಖೆಯ ವತಿಯಿಂದ ಎಲ್ಲಾ ತಾಲ್ಲೂಕುಗಳಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಅಗ್ನಿಶಾಮಕ ಇಲಾಖೆಯ ವತಿಯಿಂದ ಒಂದು ವಾರ ಮುಂಚಿತವಾಗಿ ಶಾಲಾ ಕಾಲೇಜುಗಳಲ್ಲಿ ಅನಿಲ ಸೋರಿಕೆ, ಅಗ್ನಿ ದುರಂತ ಮುಂತಾದವುಗಳ ಕುರಿತು ಅಣುಕು ಪ್ರದರ್ಶನವನ್ನು ಏರ್ಪಡಿಸುವಂತೆ ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ಆಗಸ್ಟ್ 1 ರಿಂದ 15ರವರೆಗೆ ಅಂದಾಜು ಹತ್ತು ಸಾವಿರ ಕೂಲಿ ಮತ್ತು ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡಿಸುವಂತೆ ಸೂಚಿಸಿದರಲ್ಲದೆ, ಪಾಲಿಕೆ ವತಿಯಿಂದ ಅಂದಾಜು 275 ಪೌರ ಕಾರ್ಮಿಕರಿಗೆ ಖಾಯಂ ಉದ್ಯೋಗ ಆದೇಶ ಹಾಗೂ ಆರೋಗ್ಯ ಭಾಗ್ಯ ಮತ್ತು ವಿಮೆ ಸೌಲಭ್ಯ ಪ್ರಮಾಣ ಪತ್ರಗಳನ್ನು ಒದಗಿಸುವಂತೆ ಸೂಚಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮಾನಿಕೆರೆಯಲ್ಲಿ ಆಗಸ್ಟ್ 13, 14 ಮತ್ತು 15ರಂದು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಉಚಿತ ಬೋಟಿಂಗ್, ಕಯಾಕಿ ರೈಡ್ ಏರ್ಪಡಿಸುವಂತೆ ಪಾಲಿಕೆ ಉಪ ಆಯುಕ್ತೆ ಸುಮತಿ ಅವರಿಗೆ ಸೂಚಿಸಿದರು.
ಜಿಲ್ಲೆಯ ಕಾರಾಗೃಹಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವಂತೆ ಕಾರಾಗೃಹ ಅಧಿಕಾರಿಗೆ ಸೂಚಿಸಿದ ಅವರು, ಜಿಲ್ಲಾ ಗ್ರಂಥಾಲಯಕ್ಕೆ ನಿಯಮಿತವಾಗಿ ಭೇಟಿ ನೀಡುವ ಅತ್ಯುತ್ತಮ ಓದುಗನನ್ನು ಗುರುತಿಸಿ ‘ಬೆಸ್ಟ್ ರೀಡರ್’ ಪ್ರಶಸ್ತಿ ನೀಡುವಂತೆ ಗ್ರಂಥಾಲಯ ಉಪನಿರ್ದೇಶಕಿಗೆ ಸೂಚಿಸಿದರು.
ಪಾಲಿಕೆಯಿಂದ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣಗಳೊಂದಿಗೆ ವಿದ್ಯುತ್ ದೀಪಾಲಂಕಾರ, ಶಾಮಿಯಾನ, ಆಸನದ ವ್ಯವಸ್ಥೆ, ಲೋಕೋಪಯೋಗಿ ಇಲಾಖೆಯಿಂದ ಧ್ವಜ ಸ್ಥಂಭ ನಿರ್ಮಾಣ, ತೋಟಾಗಾರಿಕೆ ಇಲಾಖೆಯಿಂದ ಹೂಕುಂಡ ವ್ಯವಸ್ಥೆ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅವರ ಇಲಾಖೆಗಳಿಗೆ ಸಂಬಂಧಿಸಿಂತೆ ವಿವಿಧ ಕೆಲಸ ಕಾರ್ಯಗಳನ್ನು ಹಂಚಿಕೆ ಮಾಡಲಾಯಿತು.
ಅಲ್ಲದೆ ಸ್ವಾಗತ ಸಮಿತಿ, ಫೇರೆಡ್ ಸಮಿತಿ, ಸನ್ಮಾನ ಸಮಿತಿ, ಸಿಹಿ ವಿತರಣೆ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಗಳನ್ನು ರಚಿಸಿ ವಿವಿಧ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತೆ ಈ ಸಂದರ್ಭದಲ್ಲಿ ಸೂಚಿಸಲಾಯಿತು.
ಸಭೆಯಲ್ಲಿ ಜಿಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮರಿಯಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಎಲ್ಲಾ ತಾಲ್ಲೂಕುಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ; ಸ್ಥಳ ಹುಡುಕುತ್ತಿದೆ ಜಿಲ್ಲಾಡಳಿತ

About The Author

You May Also Like

More From Author

+ There are no comments

Add yours