ವೈದ್ಯಕೀಯ ಸಲಕರಣೆ ಖರೀದಿಯಲ್ಲಿ 3,300 ಕೋಟಿ ರೂ. ಅವ್ಯವಹಾರ, ರಾಜ್ಯದ ಜನತೆಗೆ ಶಾಕ್

1 min read

ಬೆಂಗಳೂರು(ಜೂ.28) tumkurnews.in
ಕೊರೋನಾ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಂದಾಜು 3,300 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದು, ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಭಾನುವಾರ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ವೀಟ್ ನಲ್ಲಿ ಏನೇನಿದೆ?:
‘ಕೊರೊನಾ ನಿಯಂತ್ರಣದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ತಕ್ಷಣ ಶ್ವೇತಪತ್ರ ಹೊರಡಿಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರ ಇದೇ ರೀತಿಯ ಉದಾಸೀನತೆ -ಉಡಾಫೆತನವನ್ನು ಮುಂದುವರಿಸಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಂದಾಜು 3,300 ಕೋಟಿ ರೂ.ಗಳ ಅವ್ಯವಹಾರ ನಡೆದಿದ್ದು, ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಪಾವತಿಸಿ ಖರೀದಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಆರ್ಥಿಕ ಇಲಾಖೆ ಆಕ್ಷೇಪಿಸಿದೆ. ಈ ಬಗ್ಗೆ
ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ರಾಜ್ಯಕ್ಕೆ 9200 ವೆಂಟಿಲೇಟರ್ ಬೇಕಾಗಿದೆ, ಇರುವುದು 1500 ಮಾತ್ರ. ಕೇಂದ್ರ ಸರ್ಕಾರಕ್ಕೆ 33,000 ವೆಂಟಿಲೇಟರ್ ಕಳಿಸಲು ಕೇಳಿದರೆ ಬಂದಿರುವುದು 90 ಮಾತ್ರ. 20,000 ಆಕ್ಸಿಜನೇಟೆಡ್ ವೆಂಟಿಲೇಟರ್ ಬೇಕಾಗಿದ್ದು, ಕೇವಲ 7000 ಮಾತ್ರ ಇವೆ. ಇದೆನಾ ತಯಾರಿ ?’ ಎಂದು ಪ್ರಶ್ನೆ ಮಾಡಿದ್ದಾರೆ.

‘ಕೊರೊನಾ ಸೋಂಕು ನಗರ-ಪಟ್ಟಣಗಳಿಂದ ಹಳ್ಳಿಗಳಿಗೆ ಹರಡಿದೆ. ಆದರೆ ಕಳೆದ 15 ದಿನಗಳಿಂದ ಪರೀಕ್ಷೆ ಮಾಡುವ ಪ್ರಮಾಣ 16 ಸಾವಿರದಿಂದ ಸರಾಸರಿ 11000ಕ್ಕೆ ಇಳಿದಿದೆ. ಸೋಂಕು ಸಮುದಾಯಕ್ಕೆ ವ್ಯಾಪಿಸಿಕೊಂಡಿರುವ ಭೀತಿ ಇದೆ. ಏನಾಗಿದೆ ಸರ್ಕಾರಕ್ಕೆ?’ ಎಂದು ಕಿಡಿಕಾರಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

About The Author

You May Also Like

More From Author

+ There are no comments

Add yours