ತುಮಕೂರು ಜೆಡಿಎಸ್ ನಲ್ಲಿ ನಾಯಕತ್ವ ಬದಲಾವಣೆಯ ಕೂಗು!

1 min read

ತುಮಕೂರು(ಜೂ.27) tumkurnews.in

ಬಿಜೆಪಿಯಲ್ಲಿ ಜಿಲ್ಲಾ ನಾಯಕತ್ವ ಬದಲಾದ ಬೆನ್ನಲ್ಲೇ ಜೆಡಿಎಸ್ ಪಕ್ಷದಲ್ಲಿಯೂ ನಾಯಕತ್ವ ಬದಲಾಗಬೇಕೆಂಬ ಕೂಗೆದ್ದಿದೆ.
ಜಿಲ್ಲೆಯಲ್ಲಿ ನಾಲ್ವರು ಜೆಡಿಎಸ್ ಶಾಸಕರಿದ್ದರೂ ಎಲ್ಲರೂ ಅವರವರ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಓಡಾಡಿಕೊಂಡು ಪಕ್ಷವನ್ನು ಸಂಘಟಿಸುವಂತಹ ಛಾತಿ ಇರುವವರಿಗೆ ಈವರೆಗೆ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಈ ಬಾರಿ ಯುವ, ಉತ್ಸಾಹಿ ನಾಯಕರಿಗೆ ಪಕ್ಷದ ಚುಕ್ಕಾಣಿ ಕೊಡಬೇಕು, ಆ ಮೂಲಕ ಪಕ್ಷ ಸಂಘಟನೆಗೆ ಹಿರಿಯರು ಬಲ ತುಂಬಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆದ ನಾಡ ಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಕಾರ್ಯಕರ್ತರು, ಮುಖಂಡರು ಜಿಲ್ಲೆಯಲ್ಲಿ ಪಕ್ಷದ ನಾಯಕತ್ವ ಬದಲಾಗಬೇಕು ಎಂದು ಆಗ್ರಹವನ್ನು ಮುಂದಿರಿಸಿದ್ದಾರೆ.

ಯಾರಾಗಬೇಕು ಅಧ್ಯಕ್ಷ: ಜಿಲ್ಲೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್, ಮಧುಗಿರಿ ಶಾಸಕ ಎಂ.ವಿ ವೀರಭದ್ರಯ್ಯ, ಶಿರಾ ಶಾಸಕ ಬಿ.ಸತ್ಯನಾರಾಯಣ, ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಸೇರಿ ನಾಲ್ವರು ಶಾಸಕರಿದ್ದಾರೆ. ಈ ಪೈಕಿ ಯಾರನ್ನು ಜೆಡಿಎಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡಬೇಕು ಎಂದು ಕೂಡ ಕಾರ್ಯಕ್ರಮದಲ್ಲಿ ಪ್ರಸ್ತಾಪವಾಗಿದೆ.

ಕಾರ್ಯಕರ್ತರ ಒಮ್ಮತದ ಅಭಿಪ್ರಾಯದ ಪ್ರಕಾರ ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಅವರೇ ಪಕ್ಷದ ಜಿಲ್ಲಾ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಏಕೆಂದರೆ ಕೊರೋನಾ ರೋಗ ಕಾಣಿಸಿಕೊಂಡ ಸಂದರ್ಭದಲ್ಲಿ ಇಡೀ ದೇಶದಲ್ಲಿ ಯಾರು ಕೂಡ ಮಾಡದಂತಹ ಸಹಾಯವನ್ನು ಗೌರಿಶಂಕರ್, ತಮ್ಮ ಕ್ಷೇತ್ರದ ಜನರಿಗೆ ಮಾಡಿದ್ದಾರೆ. ಸುಮಾರು 60 ಸಾವಿರಕ್ಕೂ ಅಧಿಕ ಮನೆಗಳಿಗೆ ಎರಡು ಸುತ್ತಿನಲ್ಲಿ ಪಡಿತರ ಕಿಟ್ ಗಳನ್ನು ನೀಡಿದ್ದಾರೆ. ಈ ಮೂಲಕ ಇಂತಹ ಶಾಸಕ ನಮ್ಮ ಕ್ಷೇತ್ರದಲ್ಲೂ ಇರಬೇಕಿತ್ತು ಎಂದು ಜನರು ಮಾತನಾಡಿಕೊಳ್ಳುವಂತೆ ಮಾಡಿದ್ದಾರೆ. ರಾಜ್ಯ, ರಾಷ್ಟ್ರದ ನಾಯಕರ ಗಮನ ಸೆಳೆಯುವಂತೆ ಕ್ಷೇತ್ರದ ಜನತೆಯ ನೋವು ನಲಿವಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ನಾಯಕತ್ವ ಗುಣ ಹೊಂದಿರುವ ವ್ಯಕ್ತಿಯ ಸೇವೆ ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಬಾರದು, ಅವರ ಸೇವೆ ಇಡೀ ರಾಜ್ಯದ ಜನತೆಗೆ ಸಿಗಬೇಕು, ಆ ನಿಟ್ಟಿನಲ್ಲಿ ಅವರಿಗೆ ಜಿಲ್ಲೆಯ ನಾಯಕತ್ವ ವಹಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಕುರಿತು ಶೀಘ್ರದಲ್ಲೇ ಪಕ್ಷದ ವರಿಷ್ಟರಾದ ಎಚ್.ಡಿ ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ಕಾರ್ಯಕರ್ತರು ಮುಂದಾಗಿದ್ದಾರೆ. ಹಾಲಿ ಜಿಲ್ಲಾಧ್ಯಕ್ಷರನ್ನು ರಾಜ್ಯ ಮಟ್ಟದ ಸಂಘಟನೆಗೆ ತೊಡಗಿಸಿಕೊಳ್ಳುವಂತೆಯೂ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಜೆಡಿಎಸ್ ಕಾರ್ಯಕರ್ತರ ಮನವಿಗೆ ಯಾವ ರೀತಿಯ ಸ್ಪಂದನೆ ದೊರೆಯುತ್ತದೆ ಎನ್ನುವುದು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಲಿದೆ.

About The Author

You May Also Like

More From Author

+ There are no comments

Add yours