24 ಗಂಟೆಯಲ್ಲಿ 12 ಜನರ ಧಾರುಣ ಸಾವು; ತುಮಕೂರು ಜಿಲ್ಲೆಯಲ್ಲಿ ಮರಣ ಮೃದಂಗ

1 min read

24 ಗಂಟೆಯಲ್ಲಿ 12 ಜನರ ಧಾರುಣ ಸಾವು! ಜಿಲ್ಲೆಯಲ್ಲಿ ಸಾವಿನ ಸರಣಿ

Tumkur news
ತುಮಕೂರು; ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದಿದ್ದು, ನಾಲ್ವರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಶಿರಾ ತಾಲ್ಲೂಕಿನ ಜೋಗಿಹಳ್ಳಿ ಬಳಿ ಘಟನೆ ಸಂಭವಿಸಿದ್ದು, ಅನಿಲ್(25), ಶರಣ್(28), ಕಿರಣ್(26) ಮೃತ ದುರ್ದೈವಿಗಳು. ಭರತ್(25) ಹಾಗೂ ಶಿವರಾಜು(28) ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ ಬಳಿಕ ಮತ್ತೋರ್ವ ಮೃತಪಟ್ಟಿದ್ದು, ಆತನ ವಿವರ ತಿಳಿದುಬರಬೇಕಿದೆ.

ಹಾಲಿನ ಡೈರಿಗಳಲ್ಲಿ ವರ್ಷಕ್ಕೆ 1 ಕೋಟಿ ರೂ. ವಂಚನೆ! ಹೈನುಗಾರರೇ ಎಚ್ಚರ!
ಕಾರಿನಲ್ಲಿದ್ದವರು ಬೆಂಗಳೂರಿನಿಂದ ಸ್ನೇಹಿತನ ಮದುವೆಗೆಂದು ಸಿಂಧನೂರಿಗೆ ಹೋಗಿದ್ದು, ಮದುವೆ ಮುಗಿಸಿ ವಾಪಾಸು ತೆರಳುತ್ತಿದ್ದರು. ಈ ವೇಳೆ ಶಿರಾ ತಾಲ್ಲೂಕಿನ ರಾ.ಹೆ 48ರ ದೊಡ್ಡ ಆಲದಮರದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಯಿಂದ ಕೆಳಗೆ ಬಿದ್ದಿದೆ. ಕಾರಿನಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು, ಮೃತರೆಲ್ಲರೂ ಬೆಂಗಳೂರು ನಿವಾಸಿಗಳು. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ನಾಲ್ವರು ಸಾವು; ಇಂಡಿಕಾ ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಗುಬ್ಬಿ ತಾಲ್ಲೂಕು ಕೊಂಡ್ಲಿ ಕ್ರಾಸ್’ನಲ್ಲಿ ಅಪಘಾತ ಸಂಭವಿಸಿದ್ದು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನಡುವಿನಹಳ್ಳಿಯ ರಾಮಣ್ಣ(58), ನಾರಾಯಣಪ್ಪ(54), ಸಾಗರ್(23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಿಸದೆ ನಾಗರತ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರೆಲ್ಲರೂ ಒಂದೇ‌ ಕುಟುಂಬದವರಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದಾಗ ಅಪಘಾತವಾಗಿದೆ.
ತುಮಕೂರು ಕಡೆಯಿಂದ ಕೆ.ಬಿ ಕ್ರಾಸ್ ಕಡೆಗೆ ತೆರಳುತ್ತಿದ್ದ ಕ್ಯಾಂಟರ್ ಎದುರಿನಿಂದ ಬಂದ ಕಾರಿಗೆ ಮುಖಾಮುಳಿ ಡಿಕ್ಕಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ನಾಲ್ವರ ಧಾರುಣ ಸಾವು
ಕೆರೆ ಕೋಡಿಗೆ ಬಿದ್ದು ಮಗು ಸಾವು;
ತಾಯಿ ಮತ್ತು ಮಗು ಕೆರೆ ಕೋಡಿಗೆ ಬಿದ್ದು, ಮಗು ಮೃತಪಟ್ಟಿರುವ ಘಟನೆ ನಡೆದಿದೆ. ಕುಣಿಗಲ್ ತಾಲೂಕಿನ ಕೊತ್ತಗೆರೆ ಕೆರೆಯಲ್ಲಿ ಅವಘಡ ಸಂಭವಿಸಿದ್ದು,
ತುರುವೇಕೆರೆ ತಾಲೂಕು ಪುರ ಗ್ರಾಮದ ಶಿವಕುಮಾರ್ (4) ವರ್ಷ ಮೃತ ಮಗುವಾಗಿದ್ದು, ಈತನ ತಾಯಿ ವಿಜಯ ಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ.
ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿ ಜಾಣಗೆರೆ ಹೊಸಹಳ್ಳಿ ಗ್ರಾಮದ ವಿಜಯಲಕ್ಷ್ಮಿಯನ್ನು ತುರುವೇಕೆರೆ ತಾಲೂಕು ಪುರ ಗ್ರಾಮದ ಲೋಕೇಶ್ ಎಂಬುವರೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು. ಬುಧವಾರ ಸಂಜೆ 4 ಗಂಟೆ ಸಮಯದಲ್ಲಿ ತಾಯಿ ಮಗು ಕೊತ್ತಗೆರೆ ಕೋಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಇಬ್ಬರನ್ನೂ ಕೋಡಿಯಿಂದ ಮೇಲೆತ್ತಿದ್ದು, ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.‌ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಕರಡಿ ದಾಳಿಗೆ ರೈತ ಬಲಿ; ಕರಡಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ಕುಣಿಗಲ್ ತಾಲೂಕಿನಲ್ಲಿ ಬುಧವಾರ ನಡೆದಿದೆ. ಇಲ್ಲಿನ ಹುಲಿಯೂರುದುರ್ಗ ಹೋಬಳಿ ಎಲೆಕಡಕಲು ಗ್ರಾಮದಲ್ಲಿ ಬುಧವಾರ ಸಂಜೆ 4.30ರ ವೇಳೆಗೆ ಘಟನೆ ಸಂಭವಿಸಿದ್ದು, ಎಲೆಕಡಲು ರಾಜು (33) ಮೃತ ದುರ್ದೈವಿ.
ರಾಜು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಳಿಸಿದೆ. ಕೂಡಲೇ ಅಕ್ಕಪಕ್ಕದ ಜಮೀನಿನವರು ಘಟನಾ ಸ್ಥಳಕ್ಕೆ ಓಡಿ ಬಂದು ಕರಡಿಯನ್ನು ಓಡಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ರಾಜುಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.‌
ಬೈಕ್ ಸವಾರರ ಸಾವು; ಕಳೆದ ರಾತ್ರಿ(ಮಂಗಳವಾರ) ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಬಳಿ ಬೈಕ್ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿದರೆ ಹಟ್ಟಿ ಮುತ್ತಣ್ಣ(32) ಹಾಗೂ ಪ್ರಭು(30) ಮೃತ ದುರ್ದೈವಿಗಳು.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮೂರು ರಸ್ತೆ ಅಪಘಾತ ಸೇರಿದಂತೆ ಒಟ್ಟು 5 ಪ್ರತ್ಯೇಕ ದುರಂತಗಳಲ್ಲಿ 12 ಮಂದಿ ಸಾವಿಗೀಡಾಗಿದ್ದು, ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತಾಗಿದೆ.

About The Author

You May Also Like

More From Author

+ There are no comments

Add yours