ವಿದ್ಯಾರ್ಥಿ ವೇತನ ಅರ್ಜಿ‌ ಸಲ್ಲಿಸಲಾಗದೇ ವಿದ್ಯಾರ್ಥಿಗಳ ಪರದಾಟ; ಕುರುಡಾದ ಸರ್ಕಾರ

1 min read

ವಿದ್ಯಾರ್ಥಿ ವೇತನ ಅರ್ಜಿ‌ ಸಲ್ಲಿಸಲಾಗದೇ ವಿದ್ಯಾರ್ಥಿಗಳ ಪರದಾಟ; ಕುರುಡಾದ ಸರ್ಕಾರ

Tumkurnews
ಬೆಂಗಳೂರು; ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ NSP ಮತ್ತು SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪರದಾಡುತ್ತಿದ್ದು, ಸರ್ಕಾರ ವಿದ್ಯಾರ್ಥಿಗಳಿಗೆ ದೋಖಾ ಮಾಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.
2022-23ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ತಿಂಗಳ ಹಿಂದಷ್ಟೇ SSP (ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿತ್ತು. ಆದರೆ ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ‌ವಿದ್ಯಾರ್ಥಿಗಳ ಹೆಸರು ನಮೂದಿಸಿ ಪಾಸ್’ವರ್ಡ್ ನಮೂದಿಸಿದಾಗ ಇನ್‌ ವ್ಯಾಲಿಡ್ ಎಂದು ಬರುತ್ತಿತ್ತು. ಎಷ್ಟೇ ಬಾರಿ ಪ್ರಯತ್ನ ಮಾಡಿದರೂ ಫಲಿತಾಂಶ ಮಾತ್ರ ಶೂನ್ಯ. ಇನ್ನೂ ವಿಚಿತ್ರವೆಂದರೆ ಆಗೊಮ್ಮೆ-ಈಗೊಮ್ಮೆ ಎಂಬಂತೆ ಬೆರಳೆಣಿಕೆಯಷ್ಟು ಅರ್ಜಿಗಳು ಮಾತ್ರ ಸ್ವೀಕೃತವಾಗುತ್ತಿದ್ದವು. ಸೇವಾಸಿಂಧು ತಂತ್ರಾಂಶದಲ್ಲಿರುವ ಸಹಾಯವಾಣಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಹೀಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಈ ಬಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.
ಪೋಸ್ಟ್ ಮೆಟ್ರಿಕ್’ದೂ ಇದೇ ಕಥೆ; ಇದೀಗ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಂದ ಎಸ್.ಎಸ್.ಪಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿದೆ. ಆದರೆ ಸೇವಾ ಸಿಂದು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ವಿದ್ಯಾರ್ಥಿಗಳ ಹೆಸರು ದಾಖಲಿಸಿ ಪಾಸ್ ವರ್ಡ್ ದಾಖಲಿಸುವಾಗಿ ಇನ್ ಕರೆಕ್ಟ್ ಯೂಸರ್ ಐಡಿ ಅಂಡ್ ಪಾಸ್ವರ್ಡ್ ಎಂದು ತೋರಿಸುತ್ತಿದೆ. ಸರಿಯಾದ ಐಡಿ ಪಾಸ್ವರ್ಡ್ ದಾಖಲಿಸಿದಾಗಲೂ ಇದೇ ಸಮಸ್ಯೆಯಾಗುತ್ತಿದೆ. ಹೀಗಾಗಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಕೂಡ ಎಸ್.ಎಸ್.ಪಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲಾಗದೇ ಪರದಾಡುತ್ತಿದ್ದಾರೆ. ಯಥಾಪ್ರಕಾರ ಹೆಲ್ಪ್ ಲೈನ್ ನಂಬರ್’ಗಳು ಕರೆ ಸ್ವೀಕರಿಸುತ್ತಿಲ್ಲ.
ಸ್ಪಂದಿಸದ ಇಲಾಖೆಗಳು; ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪರದಾಡುತ್ತಿದ್ದರೆ ಇತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯಾಗಲಿ, ಪದವಿ ಪೂರ್ವ ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತಿದೆ. ಇನ್ನೂ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳು ಈ ಬಗ್ಗೆ ದಿವ್ಯ ಮೌನ ವಹಿಸಿವೆ.
ದಿಕ್ಕು ತೋಚದಂತಾದ ವಿದ್ಯಾರ್ಥಿಗಳು; ಸೇವಾಸಿಂಧು ತಂತ್ರಾಂಶದ ವೈಫಲ್ಯವೋ ಸರ್ಕಾರದ ವೈಫಲ್ಯವೋ ಒಟ್ಟಾರೆಯಾಗಿ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆಯಂತೂ ಸಾಧ್ಯವಾಗುತ್ತಿಲ್ಲ. ಕೆಲವೆಡೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ದ್ವಿತೀಯ ಪಿಯುಸಿ, ಪದವಿ, ವಿದ್ಯಾರ್ಥಿಗಳ ಅರ್ಜಿ ಸ್ವೀಕಾರವಾಗುತ್ತಿಲ್ಲ. ಹೀಗೆಯೇ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆದಿರುವ ಸಮಾಜ ಕಲ್ಯಾಣ ಇಲಾಖೆಯು ಅರ್ಜಿ ಸಲ್ಲಿಸುವ ಕ್ರಮಗಳ ಬಗ್ಗೆ ಸಣ್ಣ ಮಾಹಿತಿಯನ್ನು ಕೂಡ ವಿದ್ಯಾರ್ಥಿಗಳಿಗೆ ನೀಡಿಲ್ಲ. ಇಲಾಖೆಯ ಬೇಜವಬ್ದಾರಿಗೆ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ವಂಚಿತರಾಗುತ್ತಿದ್ದಾರೆ.
ಎನ್.ಎಸ್.ಪಿ(ನ್ಯಾಷನಲ್ ಸ್ಕಾಲರ್’ಶಿಪ್ ಪೋರ್ಟಲ್); ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಕೊಡಮಾಡುವ ಎನ್.ಎಸ್.ಪಿ ವಿದ್ಯಾರ್ಥಿ ವೇತನದ್ದೂ ಇದೇ ಸಮಸ್ಯೆಯಾಗಿದೆ. ಪ್ರಸಕ್ತ ಸಾಲಿನ ಅರ್ಜಿ ಕರೆದಿದ್ದೇ ವಿದ್ಯಾರ್ಥಿಗಳಿಗೆ ಮಾಹಿತಿ ಇರಲಿಲ್ಲ, ಇದೀಗ ದಿಢೀರನೆ ನವೆಂಬರ್ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಎಂದು ಕಾಲೇಜುಗಳಲ್ಲಿ ಹೇಳಲಾಗುತ್ತಿದೆ. ಹೀಗಾಗಿ ಯಥಾ ಪ್ರಕಾರವಾಗಿ ವಿದ್ಯಾರ್ಥಿಗಳು ಸೈಬರ್ ಸೆಂಟರ್’ಗಳಿಗೆ ಅಲೆದಾಡುತ್ತಿದ್ದಾರೆ. ಅರ್ಜಿ ಸಲ್ಲಿಕೆಗೆ ಒಂದೇ ದಿನ ಬಾಕಿ ಇರುವ ಕಾರಣದಿಂದಾಗಿ ಸೇವಾಸಿಂಧು ತಂತ್ರಾಂಶವು ಸರ್ವರ್ ಬ್ಯುಸಿ ತೋರಿಸುತ್ತಿದೆ.
ದೋಖಾ ಮಾಡಲಾಗುತ್ತಿದೆಯೇ?; ಮೇಲ್ನೋಟಕ್ಕೆ ಸೇವಾಸಿಂಧು ತಂತ್ರಾಂಶದಲ್ಲಿ ದೋಷವಿದ್ದಂತೆ ಕಂಡು ಬಂದರೂ ತಾಂತ್ರಿಕ ತೊಂದರೆಗಳು ಏಕೆ ಆಗುತ್ತಿವೆ? ಇದಕ್ಕೆ ಪರಿಹಾರವೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ. ಇಲಾಖೆಗಳ ಬೇಜವಬ್ದಾರಿ, ಸರ್ಕಾರದ ಜಾಣಕುರುಡು ಗಮನಿಸಿದಾಗ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೇ ವಂಚಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಒಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಈ ಬಗ್ಗೆ ಗಮನ ಹರಿಸಿ ಎಸ್. ಎಸ್.ಪಿ ಸ್ಕಾಲರ್ ಶಿಪ್ ಗೊಂದಲಕ್ಕೆ ತೆರೆ ಎಳೆಯಬೇಕಿದೆ. ಇಲ್ಲವಾದಲ್ಲಿ ಬಡ ವಿದ್ಯಾರ್ಥಿಗಳ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.

About The Author

You May Also Like

More From Author

+ There are no comments

Add yours