ಕೊರೋನಾ ಸೋಂಕಿತರನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ ಮೇಯರ್ ಫರಿದಾ ಬೇಗಂ

1 min read

ತುಮಕೂರು ನ್ಯೂಸ್.ಇನ್
Tumkurnews.in

ಕೊರೋನಾ ಸೋಂಕಿತರನ್ನು ಜನರು ಭಯದ ಕಣ್ಣುಗಳಿಂದ ನೋಡುತ್ತಿದ್ದಾರೆ. ಸೋಂಕಿತರು ಗುಣಮುಖರಾಗಿ ಬಂದ ಬಳಿಕವೂ ಅವರ ಹತ್ತಿರಕ್ಕೆ ಸುಳಿಯಲು ಜನರು ಹೆದರುತ್ತಿದ್ದಾರೆ. ಆದರೆ ತುಮಕೂರು ಮಹಾನಗರ ಪಾಲಿಕೆ ಮೇಯರ್ ಫರಿದಾ ಬೇಗಂ ಸೋಂಕಿತರನ್ನು ಖುದ್ದಾಗಿ ಭೇಟಿ ಮಾಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ತುಮಕೂರು ನಗರದಲ್ಲಿ ದಿನೇ ದಿನೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಗರದಲ್ಲಿ ಅತಿ ಹೆಚ್ಚು ಪಾಸಿಟಿವ್ ಕಂಡು ಬಂದಿದೆ. ಆಸ್ಪತ್ರೆಗೆ ಸೇರುವ ನಗರದ ಜನತೆಯ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ವೇಳೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಸೋಂಕಿತರ ಪೈಕಿ ಕೆಲವರು ತಮಗೆ ಸರಿಯಾದ ಮೂಲ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಮೇಯರ್ ಗೆ ದೂರವಾಣಿ ಮೂಲಕ ದೂರು ಹೇಳಿದ್ದಾರೆ.
(Tumkurnews.in)
ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸುವುದಕ್ಕಿಂತಲೂ ತಾವೇ ಕಣ್ಣಾರೆ ನೋಡಿ ಮಾತನಾಡುವುದು ಸರಿ ಎಂದು ನಿರ್ಧರಿಸಿದ ಮೇಯರ್, ಗುರುವಾರ ದಿಢೀರನೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ತೆರಳಿದ್ದಾರೆ.
ಇದಕ್ಕಿದ್ದಂತೆ ಕೋವಿಡ್ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾದ ಮೇಯರ್ ಅವರನ್ನು ಕಂಡು ಆಸ್ಪತ್ರೆಯ ವೈದ್ಯಾಧಿಕಾರಿಗಳು ಶಾಕ್ ಆಗಿದ್ದಾರೆ.
ತಾವು ಬಂದ ಉದ್ದೇಶವನ್ನು ವಿವರಿಸಿದ ಮೇಯರ್, ಪಿಪಿಇ ಕಿಟ್ ಧರಿಸಿ ವೈದ್ಯಾಧಿಕಾರಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಸೀದಾ ಕೊರೋನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ವಾರ್ಡಿಗೆ ತೆರಳಿದ್ದಾರೆ.
ಅಲ್ಲಿ ಎಲ್ಲಾ ರೋಗಿಗಳನ್ನು ಖುದ್ದಾಗಿ ಭೇಟಿ ಮಾಡಿದ ಅವರು ಸಮಸ್ಯೆಗಳನ್ನು ಆಲಿಸಿ, ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವಂತೆ ಆತ್ಮವಿಶ್ವಾಸ ತುಂಬಿದ್ದಾರೆ.
ಹತಾಶೆಯಿಂದ ಕುಳಿತಿದ್ದ ರೋಗಿಗಳನ್ನು ಕಂಡು ಖುಷಿಯಿಂದ ಇರುವಂತೆ ಧೈರ್ಯ ತುಂಬಿದ್ದಾರೆ. ಬಳಿಕ‌ ಶೌಚಾಲಯ, ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯಗಳನ್ನು ಪರಿಶೀಲಿಸಿದ ಅವರು ಅಧಿಕಾರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಿದ್ದಾರೆ.
ಮೇಯರ್ ಜೊತೆಗೆ ಡಿಎಚ್ಒ ಡಾ.ನಾಗೇಂದ್ರಪ್ಪ ಮತ್ತು ಡಾ.ವೀಣಾ ಸಹ ಪಿಪಿಇ ಕಿಟ್ ಧರಿಸಿ‌ ಸಾಥ್ ನೀಡಿದ್ದಾರೆ. ಇದೇ ವೇಳೆ ವೈದ್ಯಾಧಿಕಾರಿಗಳ ಶ್ರಮವನ್ನು ಮೇಯರ್ ಶ್ಲಾಘಿಸಿದ್ದಾರೆ.
ಓರ್ವ ಮಹಿಳೆಯಾಗಿ ಕೊಂಚವೂ ಅಂಜಿಕೆ, ಭಯ‌ವಿಲ್ಲದೇ ಕೋವಿಡ್ ಆಸ್ಪತ್ರೆಗೆ ತೆರಳಿ ಖುದ್ದಾಗಿ ರೋಗಿಗಳಿಗೆ ಆತ್ಮವಿಶ್ವಾಸ ತುಂಬಿರುವ ತುಮಕೂರಿನ ಮೇಯರ್ ಫರೀದಾ ಬೇಗಂ ಅವರ ಕಾರ್ಯಕ್ಕೆ ಜನರು ಫಿದಾ ಆಗಿದ್ದು, ವ್ಯಾಪಕವಾದ ಪ್ರಶಂಸೆ ವ್ಯಕ್ತವಾಗಿದೆ.

About The Author

You May Also Like

More From Author

+ There are no comments

Add yours