ತುಮಕೂರು ಮಹಾನಗರ ಪಾಲಿಕೆಯ ಈ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಲಾಗಿದೆ. ಅಂತೆಯೇ ಇಂದು ಕಾಂಪೌಂಡ್ ಗೋಡೆಗೆ ಶಿಲಾನ್ಯಾಸ ಮಾಡಲಾದ ಡಾ.ಬಾಬು ಜಗಜೀವನ್‌ರಾಮ್ ಭವನದ ಮುಂಭಾಗ ತಮ್ಮ ಸ್ವಂತ ಖರ್ಚಿನಿಂದ ಜಗಜೀವನ್‌ರಾಮ್ ಪ್ರತಿಮೆ ನಿರ್ಮಿಸಲಾಗುವುದು. -ಡಾ.ಜಿ ಪರಮೇಶ್ವರ್
Tumkur news
ತುಮಕೂರು: ರಾಜ್ಯದಲ್ಲಿ ಶಾಂತಿ, ಅಭಿವೃದ್ಧಿ ಹಾಗೂ ಯುವಕರಿಗೆ ಉದ್ಯೋಗಾವಕಾಶ ಇದು ಉಳಿದ ಎರಡು ವರ್ಷಗಳಲ್ಲಿ ನಮ್ಮ ಆದ್ಯತೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ಜಿಲ್ಲಾಡಳಿತ, ತುಮಕೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಅಭಿವೃದ್ಧಿ ಕೋಶ ವತಿಯಿಂದ ಭಾನುವಾರ ಟೌನ್‌ಹಾಲ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗ ತುಮಕೂರು ಜಿಲ್ಲೆ ವಿವಿಧೆಡೆ ಅಲೆಮಾರಿ, ಅರೆ ಅಲೆಮಾರಿ ಸಮುದಾಯ ವಸತಿರಹಿತ ಕುಟುಂಬಗಳಿಗೆ ಹಕ್ಕುಪತ್ರಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೇತೃತ್ವದ ಸರ್ಕಾರ ಬಂದಿದೆ. ಈ ಸರ್ಕಾರದ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ, ಯುವಕರಿಗೆ ಉದ್ಯೋಗಾವಕಾಶ ಕಲ್ಪಸಿಕೊಡುವುದಾಗಿದೆ ಎಂದು ಅವರು ತಿಳಿಸಿದರು.
ಸಮಾಜದ ಎಲ್ಲ ವರ್ಗಗಳೂ ಸಮಾನವಾಗಿ ಬದುಕಬೇಕು, ಉತ್ತಮ ಜೀವ ಮಾಡಬೇಕೆಂಬ ಉದ್ದೇಶದಿಂದ ಬಡತನ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರ ಪರವಾಗಿ ಕೆಲಸ ಮಾಡಬೇಕಿರುವುದು ನಮ್ಮ ಕರ್ತವ್ಯಕೂಡ. ಕರ್ನಾಟಕ ಇಡೀ ದೇಶದಲ್ಲಿ 25 ವರ್ಷಗಳಿಗೂ ಮುಂದಿರುವುದನ್ನು ತಾವು ಕಾಣಬಹುದು. ಬೇರೆ ರಾಜ್ಯಗಳನ್ನು ಗಮನಿಸಿದಾಗ ಇನ್ನೂ ಶೋಚನೀಯ ಸ್ಥಿತಿಯಲ್ಲಿರುವುದನ್ನು ಗಮನಿಸಬಹುದು ಎಂದರು.
ಸಮಾಜದ ಎಲ್ಲ ಜನರ ರೀತಿ ಅಲೆಮಾರಿ ಸಮುದಾಯದ ಕುಟುಂಬವೂ ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ಅಲೆಮಾರಿ ಸಮುದಾಯದ ಕುಟುಂಬಗಳಿಗೆ 209 ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರಿಗೆ ರಾಜೀವ್‌ಗಾಂಧಿ ವಸತಿ ಯೋಜನೆ ಮೂಲಕ ಮನೆಗಳನ್ನು ಕಟ್ಟಿಸಿಕೊಡಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಅಲೆಮಾರಿ ಸಮುದಾಯ ತಮ್ಮ ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ಮಾಡುವ ಮೂಲಕ ಮುಖ್ಯವಾಹಿನಿಗೆ ತರಬೇಕು ಎಂದ ಅವರು, ಇಂತಹ ಕೆಲಸಗಳಿಗೆ ಸರ್ಕಾರ ಹೊಸ ರೂಪ ಕೊಟ್ಟಿದೆ ಎಂದರು.
ತುಮಕೂರು ಮಹಾನಗರ ಪಾಲಿಕೆಯ ಈ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಲಾಗಿದೆ. ಅಂತೆಯೇ ಇಂದು ಕಾಂಪೌಂಡ್ ಗೋಡೆಗೆ ಶಿಲಾನ್ಯಾಸ ಮಾಡಲಾದ ಡಾ.ಬಾಬು ಜಗಜೀವನ್‌ರಾಮ್ ಭವನದ ಮುಂಭಾಗ ತಮ್ಮ ಸ್ವಂತ ಖರ್ಚಿನಿಂದ ಜಗಜೀವನ್‌ರಾಮ್ ಪ್ರತಿಮೆ ನಿರ್ಮಿಸಲಾಗುವುದು ಎಂದರು.
ಶಾಸಕ ಸುರೇಶ್‌ಗೌಡ ಅವರು ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಉತ್ತಮ ಜನಪರ ಕಾರ್ಯಗಳನ್ನು ಮಾಡಿದೆ. ತುಮಕೂರು ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಪ್ರಶಂಸನೀಯ, ಅಂತೆಯೇ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಹೆಜ್ಜೆ ಗುರುತುಗಳು ಇರುವಂತೆ ಕೆಲಸಗಳು ಅವರಿಂದ ಆಗಬೇಕು ಎಂದು ಆಶಿಸಿದರು.
ಶಾಸಕ ಜ್ಯೋತಿಗಣೇಶ್ ಅವರು, ತುಮಕೂರು ನಗರ ಭಾಗದ ಕೊಳಚೆ ಪ್ರದೇಶದ ಜನರಿಗೂ ಹಕ್ಕುಪತ್ರಗಳನ್ನು ನೀಡುವಂತಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಕೇತ್‌ರಾಜ್ ಎಂ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ.ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿ.ಪಂ.ಉಪ ಕಾರ್ಯದರ್ಶಿ ಸಂಜೀವಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸೋನಿಯಾ ವರ್ಣೇಕರ್, ಮಹಾನಗರ ಪಾಲಿಕೆ ಆಯುಕ್ತೆ ಶುಭ ಉಪಸ್ಥಿತರಿದ್ದರು.
