ಜನಗಣತಿ: ಏ.15ರವರೆಗೆ ಸ್ವಯಂ ಗಣನೆಗೆ ಡಿ.ಸಿ ಕರೆ
Tumkur News
ತುಮಕೂರು: ಭಾರತ ಸರ್ಕಾರದ ಜನಗಣತಿ-2026 ಕಾರ್ಯದ ಅಂಗವಾಗಿ ತುಮಕೂರು ಜಿಲ್ಲೆಯಲ್ಲಿ ಏಪ್ರಿಲ್ 15ರವರೆಗೆ ಸ್ವಯಂ ಗಣನೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಕುಟುಂಬಗಳು ತಮಗೆ ಸಂಬಂಧಿಸಿದ ಜನಗಣತಿ ಮಾಹಿತಿಯನ್ನು ಸ್ವಯಂವಾಗಿ ಆನ್‌ಲೈನ್ ಮೂಲಕ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವಯಂ ಗಣನೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ಜನಗಣತಿ ಕಾರ್ಯವು ವೇಗವಾಗಿ, ಸುಲಭವಾಗಿ ಮತ್ತು ಶುದ್ಧತೆಯಿಂದ ಪೂರ್ಣಗೊಳ್ಳಲು ಸಹಕಾರಿ ಆಗುತ್ತದೆ.
ಸ್ವಯಂ ಗಣನೆ ಮಾಡುವ ವಿಧಾನ:
ಭಾರತ ಸರ್ಕಾರದ ಅಧಿಕೃತ ಪೋರ್ಟಲ್, ಮೊಬೈಲ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಪ್ರಶ್ನಾವಳಿಯನ್ನು ಭರ್ತಿ ಮಾಡಬಹುದು. ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒಂದು ಕೋಡ್ ರಚನೆಯಾಗುತ್ತದೆ. ನಂತರ ಗಣತಿ ಸಿಬ್ಬಂದಿ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ, ಈ ಕೋಡ್ ಅನ್ನು ಸ್ಕ್ಯಾನ್ ಮಾಡಿ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ. ಸ್ವಯಂ ಗಣನೆ ಮಾಡದ ಕುಟುಂಬಗಳಿಗೆ ನಂತರ ಜನಗಣತಿ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸುವರು.
ಜಿಲ್ಲೆಯ ಎಲ್ಲಾ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಸಮಯಕ್ಕೆ ಸರಿಯಾಗಿ ಸ್ವಯಂ ಗಣನೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸರ್ಕಾರದ ಮಹತ್ವದ ಕಾರ್ಯಕ್ಕೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಮಾಂತರ ವ್ಯಾಪ್ತಿಯ ಸಮೀಪದ ತಾಲ್ಲೂಕು ಕಚೇರಿ ಮತ್ತು ನಗರ ಪ್ರದೇಶಗಳ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಜನಗಣತಿ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad
