ಸಂಭ್ರಮದ ಸ್ವಾತಂತ್ಯ ದಿನಾಚರಣೆಗೆ ಸಕಲ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿ ಶುಭ ಸೂಚನೆ
Tumkurnews
ತುಮಕೂರು: ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲರೂ ಒಗ್ಗೂಡಿ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಯನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು: ಶಿಕ್ಷಕರಿಗೆ ಜಿಪಂ ಸಿಇಒ ತರಾಟೆ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರುವ ಆಗಸ್ಟ್ 15ರಂದು ನಾವೆಲ್ಲರೂ ಸಂತಸದಿಂದ ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ತಿಳಿಸಿದರು.
ಇಂದಿನಿಂದಲೇ ಪೂರ್ವ ತಯಾರಿಗೆ ಸೂಚನೆ: ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬವನ್ನು ಆಚರಿಸಲು ಇಂದಿನಿಂದಲೇ ಪೂರ್ವ ತಯಾರಿ ನಡೆಸಬೇಕು. ಖಾಸಗಿ ಸೇರಿದಂತೆ ಸರ್ಕಾರಿ ಶಾಲಾ-ಕಾಲೇಜು, ವಸತಿ ನಿಲಯಗಳ ಮಕ್ಕಳಿಂದ ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು, ಸ್ವಚ್ಛತೆ, ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ, ಜೀವಜಲ ಸಂರಕ್ಷಣೆಯಂತಹ ವಿಷಯಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಉತ್ತಮ ಪ್ರದರ್ಶನ ನೀಡಿದ ಶಾಲಾ ಮಕ್ಕಳಿಗೆ ಬಹುಮಾನ ನೀಡಬೇಕು, ಅಗ್ನಿಶಾಮಕ ಇಲಾಖೆಯಿಂದ ಅನಿಲ ಸೋರಿಕೆ, ಅಗ್ನಿ ದುರಂತ ಕುರಿತು ಅಣುಕು ಪ್ರದರ್ಶನ ಏರ್ಪಡಿಸಬೇಕೆಂದು ಸೂಚಿಸಿದರು.
ತುಮಕೂರು: ಮಕ್ಕಳು ಕಲಿಕೆಯಲ್ಲಿ ಹಿಂದುಳಿದರೆ ಶಿಕ್ಷಕರ ವೇತನ, ಬಡ್ತಿ ಕಟ್!
ಬೆಳಿಗ್ಗೆ 9 ಗಂಟೆಗೆ ಸಚಿವರಿಂದ ಧ್ವಜಾರೋಹಣ: ಜಿಲ್ಲಾಡಳಿತ, ವಿವಿಧ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ, ಗೌರವ ರಕ್ಷೆ ಸ್ವೀಕಾರ, ಸಂದೇಶ ನೀಡುವ ಕಾರ್ಯಕ್ರಮ ನಡೆಯಲಿದೆ. ನಂತರ ಜಿಲ್ಲೆಯ ಕಂದಾಯ ಪ್ರಗತಿಗೆ ಕಾರಣರಾದ ಗ್ರಾಮಾಡಳಿತ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೆ ಸನ್ಮಾನಿಸಿ ಗೌರವಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸಿದರು.
ಕಾರ್ಯಕ್ರಮ ನಡೆಯಲಿರುವ ಜಿಲ್ಲಾ ಕ್ರೀಡಾಂಗಣದ ಸುತ್ತ-ಮುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಸೂಚಿಸಿದರು, ಆಗಸ್ಟ್ 15ರಂದು ಕಾರ್ಯಕ್ರಮ ಸ್ಥಳದಲ್ಲಿ ಪಾಲಿಕೆಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಹಾಗೂ ನಗರದ ಚರ್ಚ್ ಸರ್ಕಲ್, ಟೌನ್ ಹಾಲ್ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತಗಳನ್ನು ತಳಿರು ತೋರಣಗಳೊಂದಿಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಬೇಕು ಎಂದರು. ಲೋಕೋಪಯೋಗಿ ಇಲಾಖೆ ವತಿಯಿಂದ ವೇದಿಕೆ ನಿರ್ಮಾಣ, ಧ್ವಜ ಸ್ಥಂಭ ನಿರ್ಮಾಣ, ಆಸನದ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ತೋಟಗಾರಿಕೆ ಇಲಾಖೆಯಿಂದ ವೇದಿಕೆ ಸುತ್ತ-ಮುತ್ತ ಹೂಕುಂಡಗಳಿಂದ ಅಲಂಕರಿಸಬೇಕು. ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗೃಹಲಕ್ಷ್ಮಿ ಯೋಜನೆ: ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸ್ಥಾಪನೆ
ಸಭೆಯಲ್ಲಿ ಸ್ವಾಗತ ಸಮಿತಿ, ಪೇರೆಡ್ ಸಮಿತಿ, ಸನ್ಮಾನ ಸಮಿತಿ, ಸಿಹಿ ವಿತರಣೆ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಗಳನ್ನು ರಚಿಸಿ ವಿವಿಧ ಕೆಲಸ-ಕಾರ್ಯಗಳನ್ನು ಹಂಚಿಕೆ ಮಾಡಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಡಿವೈಎಸ್‍ಪಿ ಪರಮೇಶ್, ಡಿಡಿಪಿಐ ಕೆ. ಮಂಜುನಾಥ, ಉಪವಿಭಾಗಾಧಿಕಾರಿ ಗೌರವ್‍ಕುಮಾರ್ ಶೆಟ್ಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಹೇಮಲತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಾರದಮ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್. ಮಂಜುನಾಥ, ನಿರ್ಮಿತಿ ಕೇಂದ್ರದ ರಾಜಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ್, ಕೃಷಿ ಜಂಟಿ ನಿರ್ದೇಶಕ ರಮೇಶ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
+ There are no comments
Add yours