ತುಮಕೂರು: ಮೌಢ್ಯಾಚರಣೆಯಿಂದ ಹೆಣ್ಣು ಮಕ್ಕಳು ಹೊರಬರಬೇಕು: ಡಾ: ನಾಗಲಕ್ಷ್ಮಿ ಚೌಧರಿ

1 min read

 

ಮೌಢ್ಯಾಚರಣೆಯಿಂದ ಹೆಣ್ಣು ಮಕ್ಕಳು ಹೊರಬರಬೇಕು: ಡಾ: ನಾಗಲಕ್ಷ್ಮಿ ಚೌಧರಿ

Tumkurnews
ತುಮಕೂರು: ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ತಮ್ಮ ಮೊದಲ ಆಧ್ಯತೆಯಾಗಿದೆ. ಹೆಣ್ಣು ಮಕ್ಕಳು ವಿದ್ಯಾವಂತರಾಗಿ, ಆರೋಗ್ಯವಂತರಾಗಿ ಮೌಢ್ಯರಹಿತ ಸಮಾಜದಲ್ಲಿ ಸಂತೋಷದಿಂದ ಬದುಕಬೇಕು ಎಂಬುದೇ ಆಯೋಗದ ಆಶಯವಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದರು.
ಅವರಿಂದು ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದಲ್ಲಿ ಮೌಢ್ಯಾಚರಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆಯರಿಗೆ ಕುಡಿಯುವ ನೀರು ಮತ್ತು ಶೌಚಾಲಯ ಅತಿ ಮುಖ್ಯ. ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಶೌಚಾಲಯದ ವ್ಯವಸ್ಥೆಯಿದ್ದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ನೆಮ್ಮದಿಯಿಂದ ಇರಲು ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಣಂತಿ ಮತ್ತು ಮಗುವಿಗಾಗಿ ರಾಜ್ಯ ಸರ್ಕಾರ ಕೃಷ್ಣ ಕುಟೀರ ನಿರ್ಮಿಸಿದ್ದು, ಈ ಕುಟೀರದಲ್ಲಿ ಬಾಣಂತಿಯರಿಗೆ ಅಗತ್ಯವಾದ ಬಿಸಿನೀರು, ಶುದ್ಧ ಕುಡಿಯುವ ನೀರು ಮತ್ತು ಇತರೆ ಮೂಲ ಸೌಕರ್ಯಗಳು ಹೆಚ್ಚು ಹೆಚ್ಚು ದೊರೆಯಬೇಕು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಅವರು ತಿಳಿಸಿದರು.
ಮನೆಯಲ್ಲಿ ದೌರ್ಜನ್ಯ ನಡೆದ ಸಂದರ್ಭ ಹೆಣ್ಣು ಮಕ್ಕಳು 112 ಸಹಾಯವಾಣಿಗೆ ಕರೆ ಮಾಡಬೇಕು. ಆಗ ತಕ್ಷಣ ಪೊಲೀಸರ ಪ್ರವೇಶವಾಗುವುದು. ಠಾಣೆಯಲ್ಲಿ ಹೆಣ್ಣು ಮಕ್ಕಳನ್ನು ಸರಿಯಾಗಿ ನಡೆಸಿಕೊಳ್ಳದಿದ್ದಲ್ಲಿ ಅಥವಾ ಸ್ಪಂದಿಸದಿದ್ದಲ್ಲಿ ಮಹಿಳಾ ಆಯೋಗವನ್ನು ಸಂಪರ್ಕಿಸಬಹುದು. ಮಹಿಳೆಯರು ಯಾವುದೇ ಸಂದರ್ಭದಲ್ಲೂ ಸಹ ಸಮಸ್ಯೆ ಉಂಟಾದಲ್ಲಿ ತಮಗೆ ಮೆಸೇಜ್ ಮಾಡುವ ಮೂಲಕ ಅಥವಾ ವಾಟ್ಸಆಪ್ ಮೂಲಕ ಧೈರ್ಯವಾಗಿ ಸಂಪರ್ಕಿಸಬಹುದಾಗಿರುತ್ತದೆ ಎಂದು ತಮ್ಮ ದೂರವಾಣಿ ಸಂಖ್ಯೆಯನ್ನು ಹಂಚಿಕೊಂಡರು.
ಗ್ರಾಮೀಣ ಪ್ರದೇಶದ ಬಹುತೇಕ ಬಡ ಹೆಣ್ಣು ಮಕ್ಕಳು ವಾಸಿಸುವ ಮನೆಗಳು ಸೋರುತ್ತವೆ. ಯಾವಾಗ ಬಿದ್ದು ಹೋಗುತ್ತವೆ ಎಂದು ತಿಳಿಯುವುದಿಲ್ಲ. ಆದುದರಿಂದ ಮೊದಲಿಗೆ ಅರ್ಹ ಮಹಿಳಾ ಫಲಾನುಭವಿಗಳಿಗೆ ವಸತಿ ವ್ಯವಸ್ಥೆಯಾಗಬೇಕು. ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಕರೆಂಟು ಕಂಬಗಳು ಮುಂತಾದ ಮೂಲ ಸೌಕರ್ಯಗಳನ್ನು ಅಧಿಕಾರಿಗಳು ಕಲ್ಪಿಸಿಕೊಡಬೇಕು. 10ನೇ ತರಗತಿಗೆ ಚಿಕ್ಕ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಪದ್ಧತಿಯನ್ನು ಕೈಬಿಡಬೇಕು. ಜನರು ಬದಲಾಗಬೇಕು ಎಂದು ಅವರು ಕರೆ ನೀಡಿದರು.
ಬಿಸಾಡಿಹಟ್ಟಿ ದತ್ತು: ಬಿಸಾಡಿಹಟ್ಟಿಯ ಹೆಣ್ಣು ಮಕ್ಕಳಿಗೆ ಮೂಲ ಸೌಕರ್ಯ ಒದಗಿಸಿ ಅವರನ್ನು ಮೌಢ್ಯಾಚರಣೆಗಳಿಂದ ಹೊರ ತರುವ ನಿಟ್ಟಿನಲ್ಲಿ ಬಿಸಾಡಿಹಟ್ಟಿಯನ್ನು ದತ್ತು ಪಡೆಯುವುದಾಗಿ ಅವರು ಈ ಸಂದರ್ಭ ಘೋಷಿಸಿದರು.
ಇದಕ್ಕೂ ಮುನ್ನ ಹಟ್ಟಿಯ ಕೃಷ್ಣ ಕುಟೀರದಲ್ಲಿ ಇದ್ದಂತಹ ಬಾಣಂತಿ ಮಕ್ಕಳನ್ನು ಭೇಟಿಯಾದ ಅವರು ಅಲ್ಲಿ ಒದಗಿಸಲಾಗುತ್ತಿರುವ ಮೂಲ ಸೌಕರ್ಯ ಮುಂತಾದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಇಓ ಅಪೂರ್ವ, ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours