ಮುಂಗಾರು ಬಿತ್ತನೆ: ಸಕಲ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ
ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ
Tumkurnews
ತುಮಕೂರು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಮುಂಗಾರು ಬಿತ್ತನೆ ಕಾರ್ಯ ಕೈಗೊಳ್ಳಲು ಅನುವಾಗುವಂತೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಹಾಗೂ ವಿತರಣೆ ಸೇರಿದಂತೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು, ದಾಸ್ತಾನು, ವಿತರಣೆ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಅವರು ಮಾತನಾಡಿದರು.
ರೈತರಿಗೆ ಗುಣಮಟ್ಟದ ಬೀಜವನ್ನು ವಿತರಿಸಬೇಕು, ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಹಾಗೂ ರಸಗೊಬ್ಬರ ದಾಸ್ತಾನು ವಿವರ, ಮಾರಾಟ ದರದ ವಿವರಗಳನ್ನು ಪ್ರದರ್ಶಿಸಬೇಕು, ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬಾರದಂತೆ ಕಾರ್ಯ ನಿರ್ವಹಿಸಬೇಕು. ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರಿಕೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಮಳೆ ಪ್ರಾರಂಭವಾಗಿರುವುದರಿಂದ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಕೃಷಿ, ತೋಟಗಾರಿಕೆ, ತಾಲ್ಲೂಕು ಪಂಚಾಯತಿ ಹಾಗೂ ಕಂದಾಯ ಅಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಲಭ್ಯವಿರಬೇಕು.
ವಿದ್ಯುತ್ ಸರಬರಾಜು ಮಾರ್ಗಗಳು ಸುಸ್ಥಿತಿಯಲ್ಲಿರಬೇಕು. ಮಳೆ-ಗಾಳಿಗೆ ವಿದ್ಯುತ್ ಕಂಬ, ತಂತಿ ಬಿದ್ದರೆ ತುರ್ತಾಗಿ ದುರಸ್ತಿಪಡಿಸಲು ಕ್ರಮಕೈಗೊಳ್ಳಬೇಕು. ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ಮಳೆಯಿಂದ ಮನೆ, ಬೆಳೆ ಹಾನಿ ಹಾಗೂ ಜನ ಜಾನುವಾರುಗಳ ಜೀವ ಹಾನಿಯಾದಲ್ಲಿ ಕೂಡಲೇ ತಾಲ್ಲೂಕು ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಪರಿಹಾರ ನೀಡಲು ವಿಳಂಬ ಮಾಡಬಾರದು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಮಳೆಯಿಂದ ವಿಪತ್ತು ಉಂಟಾದಲ್ಲಿ ಸಂಬಂಧಿಸಿದ ತಹಶೀಲ್ದಾರರು ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ನೀಡಬೇಕು. ಸಿಡಿಲು ಬಡಿದು ಸಾವು ಸಂಭವಿಸಿದಲ್ಲಿ ವಿಳಂಬ ಮಾಡದೆ ತಕ್ಷಣವೇ ಪರಿಹಾರ ನೀಡುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಜಿಲ್ಲೆಯ ಪ್ರತೀ ರೈತ ಸಂಪರ್ಕ ಕೇಂದ್ರಗಳಿಗೆ ಆಯಾ ಉಪ ವಿಭಾಗಾಧಿಕಾರಿಗಳು, ತಾಲೂಕು ತಹಶೀಲ್ದಾರರು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಬೀಜ, ರಸಗೊಬ್ಬರಕ್ಕಾಗಿ ರೈತರು ಭೇಟಿ ನೀಡುವುದರಿಂದ ರೈತ ಸಂಪರ್ಕ ಕೇಂದ್ರಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಎಂದರು.
ರಸ ಗೊಬ್ಬರ ಮಾರಾಟ ಮಾಡುವ ಖಾಸಗಿ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಮಾರಾಟ ದರ ಹಾಗೂ ದಾಸ್ತಾನಿನ ಬಗ್ಗೆ ಪರಿಶೀಲಿಸಬೇಕು. ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕಳೆದ ವರ್ಷದ ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರಿಗೆ ಅನ್ಯಾಯವಾಗದಂತೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಸೂಚಿಸಿದರು.
ಸಮಸ್ಯೆ ಬಂದ ಮೇಲೆ ಕ್ರಮಕೈಗೊಳ್ಳುವುದಕ್ಕಿಂತ ಸಮಸ್ಯೆ ಬರುವ ಮೊದಲೇ ಪರಿಹಾರ ಕಂಡುಕೊಳ್ಳಬೇಕು. ನೀರಿನ ಸಮಸ್ಯೆ, ಬೀಜದ ಕೊರತೆ, ರಸಗೊಬ್ಬರ ಕೊರತೆಗೆ ಸಂಬಂಧಿಸಿದಂತೆ ರೈತರಿಂದ ದೂರು ಬಾರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮಾತನಾಡಿ, ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಉಂಟಾಗಿ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು. ಮಳೆ ಹಾನಿಗೆ ತುತ್ತಾಗುವಂತಹ ಪ್ರದೇಶಗಳನ್ನು ಗುರುತಿಸಿ ಸ್ಥಳೀಯರಿಗೆ ಅರಿವು ಮೂಡಿಸಬೇಕು. ನೀರು ಸರಾಗವಾಗಿ ಹರಿಯಲು ಕಾಲುವೆ, ಚರಂಡಿ, ಸೇತುವೆ, ಕಲ್ವರ್ಟ್, ನೆರೆ ಪೀಡಿತ ಪ್ರದೇಶಗಳಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಅವಶ್ಯವಿದ್ದಲ್ಲಿ ಸಾಕಷ್ಟು ಮರಳಿನ ಚೀಲಗಳನ್ನು ದಾಸ್ತಾನು ಮಾಡಿರಬೇಕು. ಮಳೆ ಪ್ರವಾಹದಿಂದ ತಗ್ಗು ಪ್ರದೇಶಗಳಲ್ಲಿ ನಿಂತ ನೀರನ್ನು ಹೊರ ಹಾಕಲು ಪಂಪು ಮೋಟಾರ್‌ಗಳನ್ನು ಸಿದ್ಧವಿಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ಜಂಟಿ ಕೃಷಿ ನಿರ್ದೇಶಕ ರಮೇಶ್, ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ, ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಗಿರೀಶ್ ಬಾಬು ರೆಡ್ಡಿ, ಎಪಿಎಂಸಿ ಉಪನಿರ್ದೇಶಕ ರಾಜಣ್ಣ, ಸೇರಿದಂತೆ ಮತ್ತಿತರರು ಹಾಜರಿದ್ದರು.
ತುಮಕೂರು: ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ ಬೆಸ್ಕಾಂಗೆ ಜಿಲ್ಲಾಧಿಕಾರಿ ಸೂಚನೆ
+ There are no comments
Add yours